×
Ad

ಹರ್ಯಾಣ | ಯುವತಿಯ ಮೃತದೇಹ ಚರಂಡಿಯಲ್ಲಿ ಪತ್ತೆ: ವರದಕ್ಷಿಣೆಗಾಗಿ ಪತಿಯ ಕುಟುಂಬಸ್ಥರಿಂದಲೇ ಕೊಲೆ!

Update: 2025-06-21 14:14 IST

Photo credit: NDTV

ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನ ವಸತಿ ಪ್ರದೇಶದ ಬೀದಿಯೊಂದರಲ್ಲಿ ಶುಕ್ರವಾರ 10 ಅಡಿ ಆಳದ ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ.

ಮೃತದೇಹ ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ 24ರ ಹರೆಯದ ತನು ಅವರದ್ದು ಎಂದು ಗುರುತಿಸಲಾಗಿದೆ. ತನು ಅವರಿಗೆ ಫರಿದಾಬಾದ್‌ನ ರೋಷನ್ ನಗರದ ನಿವಾಸಿ ಅರುಣ್ ಜೊತೆ ಎರಡು ವರ್ಷಗಳ ಹಿಂದೆ ವಿವಾಹವಾಗಿತ್ತು. ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಪತಿ ಸೇರಿದಂತೆ ಕುಟುಂಬಸ್ಥರು ಕೊಲೆ ಮಾಡಿ ಚರಂಡಿ ಹಗೆದು ಹೂತು ಹಾಕಿರುವುದು ತನಿಖೆಯ ವೇಳೆ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ತನು ಪತಿ ಸೇರಿದಂತೆ ಕುಟುಂಬದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತನು ಕುಟುಂಬಸ್ಥರು ಹೇಳಿದ್ದೇನು?

ನನ್ನ ಸಹೋದರಿಯ ವಿವಾಹ 2023ರಲ್ಲಿ ನಡೆದಿತ್ತು. ವಿವಾಹದ ಬಳಿಕ ಅರುಣ್ ಮತ್ತು ಅವನ ಪೋಷಕರು ವರದಕ್ಷಿಣೆಯಾಗಿ ಚಿನ್ನಾಭರಣ ಮತ್ತು ಹಣವನ್ನು ನೀಡುವಂತೆ ಆಕೆಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ನಮ್ಮ ಕುಟುಂಬ ಸಾಧ್ಯವಾದಷ್ಟು ಮಟ್ಟಿಗೆ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸಿದೆ. ಆದರೆ ಪದೇ ಪದೇ ಹಣ ಕೊಡುವಂತೆ ಕಿರುಕುಳ ನೀಡಲಾಗಿದೆ. ಇದರಿಂದ ಮದುವೆಯಾದ ಕೆಲವೇ ತಿಂಗಳಲ್ಲಿ ತನು ತಾಯಿ ಮನೆಗೆ ವಾಪಾಸ್ಸಾಗಿದ್ದಾಳೆ. ಅವಳು ಒಂದು ವರ್ಷಕ್ಕೂ ಹೆಚ್ಚು ಕಾಲ ನಮ್ಮೊಂದಿಗೆ ಇದ್ದಳು. ನಾವು ಅವಳನ್ನು ವಾಪಸ್ ಕಳುಹಿಸಿದೆವು. ಆದರೆ ಚಿತ್ರಹಿಂಸೆ ಮತ್ತೆ ಆರಂಭವಾಯಿತು. ಅವರು ನಮ್ಮ ಜೊತೆ ಮಾತನಾಡಲು ಆಕೆಗೆ ಫೋನ್ ಕೂಡ ಕೊಡುತ್ತಿರಲಿಲ್ಲ ಎಂದು ತನುವಿನ ಸಹೋದರಿ ಪ್ರೀತಿ ಆರೋಪಿಸಿದ್ದಾರೆ.

ಎಪ್ರಿಲ್ 23ರಂದು ತನು ಮನೆಯಿಂದ ಓಡಿಹೋಗಿದ್ದಾಳೆಂದು ಆಕೆಯ ಅತ್ತೆ ಮತ್ತು ಮಾವ ಹೇಳಿದ್ದಾರೆ. ಎಪ್ರಿಲ್ 9ರಂದು ಆಕೆಗೆ ಪೋನ್ ಮೂಲಕ ಸಂಪರ್ಕಿಸಲು ನಾವು ಪ್ರಯತ್ನಿಸಿದ್ದೆವು. ಆದರೆ ಅವಳು ನಮ್ಮ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸರನ್ನು ಸಂಪರ್ಕಿದರೂ ವಾರಗಳವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪ್ರೀತಿ ಆರೋಪಿಸಿದ್ದಾರೆ.

ಸ್ಥಳೀಯರು ಹೇಳಿದ್ದೇನು?

ʼಮನೆಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ತನು ಅವರ ಮಾವ ಎಪ್ರಿಲ್‌ನಲ್ಲಿ ಗುಂಡಿ ತೋಡಿದ್ದಾರೆ. ಗುಂಡಿಯನ್ನು ತೋಡಿದ ಕೆಲವೇ ಹೊತ್ತಿನಲ್ಲಿ ಅದರ ಮೇಲೆ ಸಿಮೆಂಟ್ ಸ್ಲ್ಯಾಬ್ ಇಟ್ಟು ಮುಚ್ಚಲಾಗಿದೆʼ ಎಂದು ಸ್ಥಳೀಯರು ಹೇಳಿದ್ದಾರೆ.

ಎಲ್ಲರೂ ಗುಂಡಿ ತೋಡುವುದನ್ನು ನೋಡಿದ್ದೇವೆ. ಕೊಳಕು ನೀರು ಹೋಗಲು ಜಾಗವಿಲ್ಲದ ಕಾರಣ ಗುಂಡಿ ತೋಡುವುದಾಗಿ ಅವರು ಹೇಳಿದ್ದಾರೆ. ಆದರೆ ಸೊಸೆ ಆ ಬಳಿಕ ಎಲ್ಲೂ ಕಾಣಿಸಿರಲಿಲ್ಲ. ನಮ್ಮಲ್ಲಿ ಕೆಲವರಿಗೆ ಅನುಮಾನ ಬಂದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಉಪ ಪೊಲೀಸ್ ಆಯುಕ್ತೆ ಉಷಾ ಈ ಕುರಿತು ಪ್ರತಿಕ್ರಿಯಿಸಿದ್ದು, ಒಂದು ವಾರದ ಹಿಂದೆ ಈ ಕುರಿತು ದೂರು ನೀಡಲಾಗಿದೆ. ಗುಂಡಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಸಾವಿನ ಸಮಯ ಮತ್ತು ಕಾರಣವನ್ನು ತಿಳಿಯಲು ಮೃತದೇಹವನ್ನು

ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News