ದಕ್ಷಿಣ ರೈಲ್ವೆಯ ಎಲ್ಲ ಎಕ್ಸ್‌ಪ್ರೆಸ್ ರೈಲುಗಳ ಮಹಿಳಾ ಬೋಗಿಗಳಲ್ಲಿ ಮಹಿಳಾ ಕಾನ್‌ಸ್ಟೇಬಲ್‌ಗಳ ನಿಯೋಜನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸರಕಾರಿ ರೈಲ್ವೆ ಪೋಲಿಸ್ ಪಡೆ(ಜಿಆರ್‌ಪಿ)ಯು ದಕ್ಷಿಣ ರೈಲ್ವೆಯ ಬಹುತೇಕ ಎಲ್ಲ ರೈಲುಗಳಲ್ಲಿ ಮಹಿಳಾ ಬೋಗಿಗಳ ಪ್ರಯಾಣಿಕರಿಗೆ ಭದ್ರತೆಯನ್ನು ಒದಗಿಸಲು ಮಹಿಳಾ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಿದೆ. ಎಲ್ಲ ನಿಲ್ದಾಣಗಳಲ್ಲಿ ಮಹಿಳಾ ಬೋಗಿಗಳಲ್ಲಿ ಪುರುಷರ ಪ್ರವೇಶ/ಪ್ರಯಾಣವನ್ನು ತಡೆಯಲು ಜಿಆರ್‌ಪಿ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್)ಯ ಜೊತೆ ಕೈಜೋಡಿಸಿದೆ ಎಂದು thehindu.com ವರದಿ ಮಾಡಿದೆ.
ಗುರುವಾರ ಕೊಯಮತ್ತೂರಿನಿಂದ ತಿರುಪತಿಗೆ ಸಂಚರಿಸುತ್ತಿದ್ದ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ವೆಲ್ಲೂರು ಸಮೀಪ ನಾಲ್ಕು ತಿಂಗಳ ಗರ್ಭಿಣಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲು ಯತ್ನಿಸಿದ್ದ ದುಷ್ಕರ್ಮಿಯೋರ್ವ ಆಕೆ ಪ್ರತಿರೋಧಿಸಿದಾಗ ಆಕೆಯನ್ನು ರೈಲಿನಿಂದ ಹೊರಕ್ಕೆ ತಳ್ಳಿದ್ದ. ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಗರ್ಭಪಾತವಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ 12 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ. ಕಂಠಪೂರ್ತಿ ಮದ್ಯ ಸೇವಿಸಿದ್ದ ಈತ ಕೊನೆಯ ಕ್ಷಣದಲ್ಲಿ ಜೋಲಾರ್‌ಪೇಟೆ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಿ ಮಹಿಳಾ ಬೋಗಿಯನ್ನು ಪ್ರವೇಶಿಸಿದ್ದ.
ಪುರುಷ ಪ್ರಯಾಣಿಕರು ಮಹಿಳಾ ಬೋಗಿಗಳಲ್ಲಿ ಪ್ರವೇಶಿಸದಂತೆ ಅಥವಾ ಪ್ರಯಾಣಿಸದಂತೆ ಎಲ್ಲ ರೈಲು ನಿಲ್ದಾಣಗಳಲ್ಲಿ ಮಹಿಳಾ ಪೋಲಿಸರನ್ನು ನಿಯೋಜಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ದಿಢೀರ್ ತಪಾಸಣೆ ನಡೆಸುವ ಜೊತೆಗೆ ದಕ್ಷಿಣ ರೈಲ್ವೆಯಾದ್ಯಂತ ಎಲ್ಲ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಹಿಳಾ ಪೋಲಿಸರು ಸಂಚರಿಸುತ್ತಾರೆ ಎಂದು ಜಿಆರ್‌ಪಿಯ ಐಜಿಪಿ ಎ.ಜಿ.ಬಾಬು ತಿಳಿಸಿದರು.