×
Ad

ಮಹಿಳಾ ಕ್ರಿಕೆಟ್ | ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿ ಕ್ಲೀನ್‌ಸ್ವೀಪ್

Update: 2024-12-27 21:09 IST

PC : PTI 

ವಡೋದರ : ಆಫ್ ಸ್ಪಿನ್ನರ್ ದೀಪ್ತಿ ಶರ್ಮಾರ ಅಮೋಘ ಬೌಲಿಂಗ್ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಹಿಳಾ ತಂಡವನ್ನು ಇನ್ನೂ 130 ಎಸೆತಗಳು ಬಾಕಿಯಿರುವಂತೆಯೇ ಭರ್ಜರಿ ಐದು ವಿಕೆಟ್‌ಗಳಿಂದ ಸೋಲಿಸಿದೆ.

ಇದರೊಂದಿಗೆ, ಮೂರು ಪಂದ್ಯಗಳ ಸರಣಿಯನ್ನು ಭಾರತೀಯ ಮಹಿಳೆಯರು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದ್ದಾರೆ.

ದೀಪ್ತಿ ಶರ್ಮಾ 31 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಬಳಿಕ ಬ್ಯಾಟಿಂಗ್‌ನಲ್ಲೂ ಮಿಂಚಿದ ಅವರು, 48 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ವಡೋದರದ ಕೊಟಂಬಿ ಸ್ಟೇಡಿಯಮ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ, ಗೆಲ್ಲಲು 50 ಓವರ್‌ಗಳಲ್ಲಿ 163 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದ ಭಾರತ 28.2 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಕಳೆದುಕೊಂಡು 167 ರನ್‌ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು.

ಭಾರತದ ಅಗ್ರ ಕ್ರಮಾಂಕವು ವಿಫಲವಾದರೂ, ಮಧ್ಯಮ ಸರದಿಯು ಸಿಡಿಯಿತು. ಒಂದು ಹಂತದಲ್ಲಿ ಭಾರತವು 73 ರನ್‌ಗಳನ್ನು ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಆತಂಕದ ಪರಿಸ್ಥಿತಿಗೆ ಒಳಗಾಯಿತು. ಆದರೆ ದೀಪ್ತಿ ತನ್ನೆಲ್ಲಾ ಅನುಭವವನ್ನು ಬಳಸಿಕೊಂಡು 48 ಎಸೆತಗಳಲ್ಲಿ 39 ರನ್ ಗಳಿಸಿ ತಂಡಕ್ಕೆ ಚೇತರಿಕೆ ಒದಗಿಸಿದರು ಮತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ರಿಚಾ ಘೋಷ್ 11 ಎಸೆತಗಳಲ್ಲಿ 23 ರನ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ 22 ಎಸೆತಗಳಲ್ಲಿ 32 ರನ್‌ಗಳನ್ನು ಗಳಿಸಿದರು. ಅವರು ಏಳು ಬೌಂಡರಿಗಳನ್ನು ಸಿಡಿಸಿದರು.

ಜೆಮಿಮಾ ರೋಡ್ರಿಗಸ್ 45 ಎಸೆತಗಳಲ್ಲಿ 29 ರನ್‌ಗಳ ದೇಣಿಗೆ ನೀಡಿದರು.

ಇದಕ್ಕೂ ಮೊದಲು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ನ ಬ್ಯಾಟರ್‌ಗಳ ಮೇಲೆ ದೀಪ್ತಿ ಮತ್ತು ರೇಣುಕಾ ಸಿಂಗ್ ಪ್ರಹಾರಗೈದರು. ಅವರಿಬ್ಬರು ಸೇರಿ ವೆಸ್ಟ್ ಇಂಡೀಸ್ ಇನಿಂಗ್ಸನ್ನು 162ಕ್ಕೆ ಮುಕ್ತಾಯಗೊಳಿಸಿದರು.

ರೇಣುಕಾ ಸಿಂಗ್ 29 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದರು.

ಶಮೈನ್ ಕ್ಯಾಂಬೆಲ್ (46) ಮತ್ತು ಶಿನೆಲ್ ಹೆನ್ರಿ (61) ಮಾತ್ರ ಭಾರತೀಯ ಬೌಲರ್‌ಗಳನ್ನು ಕೊಂಚ ದಿಟ್ಟವಾಗಿ ಎದುರಿಸಿದರು. ಹೆನ್ರಿ ಮತ್ತು ಕ್ಯಾಂಬೆಲ್ 97 ರನ್‌ಗಳ ಭಾಗೀದಾರಿಕೆ ನಿಭಾಯಿಸಿದರು. ಅದರಿಂದಾಗಿ ತಂಡಕ್ಕೆ 160 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಯಿತು.

ಆಲಿಯಾ ಅಲೇನ್ 21 ರನ್‌ಗಳ ಕೊಡುಗೆಯನ್ನು ನೀಡಿದರು.

ವೆಸ್ಟ್ ಇಂಡೀಸ್‌ನ ಉಳಿದ ಬ್ಯಾಟರ್‌ಗಳಿಗೆ ಎರಡಂಕಿಯ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಅದರ ಆರಂಭವು ಅನಾಹುತಕಾರಿಯಾಗಿತ್ತು. ಆರಂಭಿಕರಾದ ಕಿಯಾನಾ ಜೋಸೆಫ್ ಮತ್ತು ಹೇಲಿ ಮ್ಯಾಥ್ಯೂಸ್ ಇಬ್ಬರನ್ನೂ ರೇಣುಕಾ ಸಿಂಗ್ ಶೂನ್ಯಕ್ಕೆ ವಾಪಸ್ ಕಳುಹಿಸಿದರು. ಬಳಿಕ ದೀಪ್ತಿ ತನ್ನ ಕೈಚಳಕ ಪ್ರದರ್ಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News