"ಯಾವುದೇ ಖಾನ್ ನನ್ನು ಮುಂಬೈ ಮೇಯರ್ ಆಗಲು ಬಿಡುವುದಿಲ್ಲ": ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ
ಶಾಸಕ ಅಮೀತ್ ಸತಮ್ (Photo: Facebook)
ಮುಂಬೈ: ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಭಾರತೀಯ ಮೂಲದ ಝೋಹ್ರಾನ್ ಮಮ್ದಾನಿ ಆಯ್ಕೆಯಾದ ಬೆನ್ನಲ್ಲೇ, ಮುಂಬೈ ನಗರದಲ್ಲಿ ಬಿಜೆಪಿ ನಾಯಕನೊಬ್ಬರ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದ ಎಬ್ಬಿಸಿದೆ. ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಅಂಧೇರಿ ಪಶ್ಚಿಮ ಕ್ಷೇತ್ರದ ಶಾಸಕ ಅಮೀತ್ ಸತಮ್, “ಯಾವುದೇ ಖಾನ್ ಮುಂಬೈ ಮೇಯರ್ ಆಗಲು ಬಿಡುವುದಿಲ್ಲ” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಮಮ್ದಾನಿ ನ್ಯೂಯಾರ್ಕ್ ನ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸತಮ್ ಈ ಪ್ರತಿಕ್ರಿಯೆ ನೀಡಿದ್ದಾರೆ.
“ನ್ಯೂಯಾರ್ಕ್‌ನಲ್ಲಿ ಕಂಡುಬಂದ ಮತ ಜಿಹಾದ್ ಮಾದರಿಯ ರಾಜಕೀಯವನ್ನು ಈಗ ಮುಂಬೈಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಕೆಲವರು ಧಾರ್ಮಿಕ ಓಲೈಕೆಯ ಮೂಲಕ ತಮ್ಮ ರಾಜಕೀಯ ಪ್ರಭಾವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಂಬೈಯ ಸೌಹಾರ್ದ ಕಾಪಾಡುವುದು ನಮ್ಮ ಕರ್ತವ್ಯ” ಎಂದು ಅವರು ಹೇಳಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಈ ಹೇಳಿಕೆಗಳು ಬಂದಿರುವುದರಿಂದ, ಇದನ್ನು ಬಿಜೆಪಿಯ ಹೊಸ ಧ್ರುವೀಕರಣ ತಂತ್ರದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಮ್ಮ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿದ ಸತಮ್, “ನಾವು ಮುಂಬೈನ ಅಭಿವೃದ್ಧಿ ಮತ್ತು ಏಕತೆಗಾಗಿ ನಿಂತಿದ್ದೇವೆ. ನಗರದಾದ್ಯಂತ ‘ವಂದೇ ಮಾತರಂ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಅದನ್ನು ಹೆಮ್ಮೆಯಿಂದ ಹೇಳುವ ಹಕ್ಕಿದೆ. ನಗರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಗುರುತನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ” ಎಂದು ಅವರು ಹೇಳಿದ್ದಾರೆ.
ನ್ಯೂಯಾರ್ಕ್‌ನ ನೂತನ ಮೇಯರ್ ಮಮ್ದಾನಿ, ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರ. ಅವರು ಉಚಿತ ಮಕ್ಕಳ ಆರೈಕೆ, ಬಾಡಿಗೆ ನಿಯಂತ್ರಣ ಹಾಗೂ ಸಾರ್ವಜನಿಕ ಸಾರಿಗೆ ಸುಧಾರಣೆಗಳಂತಹ ಕಾರ್ಮಿಕ ವರ್ಗದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಪ್ರಗತಿಪರ ನಿಲುವಿನಿಂದ ಗೆಲುವು ಸಾಧಿಸಿದ್ದಾರೆ.