ಪಹಲ್ಗಾಮ್ ನಲ್ಲಿ ವಿಶೇಷ ಸಚಿವ ಸಂಪುಟ ಸಭೆ: ಭಯೋತ್ಪಾದನೆಯಿಂದ ಬೆದರಿಸಲು ಸಾಧ್ಯವಿಲ್ಲ ಎಂದು ಘೋಷಿಸಿದ ಉಮರ್ ಅಬ್ದುಲ್ಲಾ
ಉಮರ್ ಅಬ್ದುಲ್ಲಾ | PTI
ಪಹಲ್ಗಾಮ್: ಭಯೋತ್ಪಾದನೆಯಂತಹ ಹೇಡಿ ಕೃತ್ಯಗಳಿಂದ ನಮ್ಮ ಸರಕಾರವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ ಜಮ್ಮು ಮತ್ತು ಕಾಶ್ಮೀಪರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, “ಪ್ರವಾಸೋದ್ಯಮವು ಯುದ್ಧ ತಟಸ್ಥವಾಗಿರಬೇಕು ಹಾಗೂ ರಾಜ್ಯದಲ್ಲಿ ಸಹಜ ಸ್ಥಿತಿ ಇದೆ ಎಂದು ಬಿಂಬಿಸಲು ಮಾನದಂಡವಾಗಬಾರದು” ಎಂದು ಪಹಲ್ಗಾಮ್ ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಹೇಳಿದರು.
ಎಪ್ರಿಲ್ 22ರಂದು ಪಹಲ್ಗಾಮ್ ನ ಬೈಸರಣ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಇದೇ ಪ್ರಥಮ ಬಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಜನತೆಗೆ ಕೃತಜ್ಞತೆ ಸಲ್ಲಿಸುವ ಹಾಗೂ ಭಯೋತ್ಪಾದನೆಯ ಹಿಂಸಾಚಾರವನ್ನು ಖಂಡತುಂಡಾಗಿ ಖಂಡಿಸುವ ಮೂಲಕ ತಮ್ಮ ಮಾತುಗಳನ್ನು ಪ್ರಾರಂಭಿಸಿದರು.
“ಎಪ್ರಿಲ್ 22ರಂದು ಪ್ರವಾಸಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಹಾಗೂ ಒಂದೇ ಧ್ವನಿಯ ನಿಲುವು ತಳೆದ ಕಾಶ್ಮೀರದ ಜನತೆಗೆ, ವಿಶೇಷವಾಗಿ ಪಹಲ್ಗಾಮ್ ಜನತೆಗೆ ಧನ್ಯವಾದ ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಅವರು ಹೇಳಿದರು.
ಪ್ರವಾಸೋದ್ಯಮ ವಲಯಕ್ಕೆ ಬೆಂಬಲ ನೀಡುವ ಕ್ರಮಗಳನ್ನು ನಮ್ಮ ಸರಕಾರ ಹಾಗೂ ಕೇಂದ್ರ ಸರಕಾರ, ವಿಶೇಷವಾಗಿ, ಕಳೆದ ವಾರ ಪ್ರವಾಸೋದ್ಯಮ ವಲಯದ ಭಾಗಿದಾರರ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
“ಇತ್ತೀಚೆಗೆ ದಿಲ್ಲಿಯಲ್ಲಿದ್ದ ನನಗೆ, ನೀತಿ ಆಯೋಗದ ಸಭೆಯ ನೇಪಥ್ಯದಲ್ಲಿ ಪ್ರಧಾನಿಗಳನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ನಾನು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಸೋದ್ಯಮ ವಲಯದ ಪರಿಸ್ಥಿತಿಯ ಕುರಿತು ಅವರಿಗೆ ವಿವರಿಸಿದೆ ಹಾಗೂ ಅವರು ಸಂಪೂರ್ಣ ಬೆಂಬಲದ ಭರವಸೆ ನೀಡಿದರು” ಎಂದು ಉಮರ್ ಅಬ್ದುಲ್ಲಾ ಹೇಳಿದರು. ಕಳೆದ ವಾರ ನಡೆದ ಕೇಂದ್ರ ಮಟ್ಟದ ಸಭೆಯಲ್ಲಿ ಪ್ರವಾಸೋದ್ಯಮ ಪುನಶ್ಚೇತನದ ವಿಶಾಲ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು ಎಂದೂ ಅವರು ತಿಳಿಸಿದರು.
ಮಂಗಳವಾರ ಪಹಲ್ಗಾಮ್ ನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದ ನಂತರ, ಪಹಲ್ಗಾಮ್ ಕ್ಲಬ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯ ಚಿತ್ರಗಳನ್ನು ಮುಖ್ಯಮಂತ್ರಿಗಳ ಕಚೇರಿಯು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.