×
Ad

ವಿಶ್ವಬ್ಯಾಂಕ್‌ನ 14,000 ಕೋಟಿ ರೂ. ಸಾಲ ಬಿಹಾರ ಚುನಾವಣೆಗೆ ಬಳಕೆ : ನಿತೀಶ್ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಜನ ಸುರಾಜ್ ಪಕ್ಷ

Update: 2025-11-16 10:42 IST

Photo: PTI

ಪಾಟ್ನಾ: ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರಕಾರ ವಿಶ್ವಬ್ಯಾಂಕ್‌ನಿಂದ ಬಂದ 14,000 ಕೋಟಿ ರೂಪಾಯಿ ಸಾಲವನ್ನು 2025ರ ವಿಧಾನಸಭೆ ಚುನಾವಣೆಯಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂದು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಗಂಭೀರ ಆರೋಪ ಮಾಡಿದೆ.

ಜನ ಸುರಾಜ್ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾದ ಒಂದು ದಿನದ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಅವರು ಶನಿವಾರ ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಬಹಿರಂಗಪಡಿಸಿದರು.

“ಜೂನ್‌ನಿಂದ ಚುನಾವಣೆಯ ಘೋಷಣೆಯಾಗುವವರೆಗೆ ಸರಕಾರ 40,000 ಕೋಟಿ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಿದೆ. ಅದರಲ್ಲಿ ವಿಶ್ವಬ್ಯಾಂಕ್‌ನಿಂದ ಪಡೆದ 14,000 ಕೋಟಿ ರೂಪಾಯಿಯನ್ನೂ ದೇಣಿಗೆ ಮತ್ತು ಉಚಿತ ಕೊಡುಗೆಗಳ ಹೆಸರಿನಲ್ಲಿ ಮತಗಳನ್ನು ಖರೀದಿಸಲು ಬಳಸಲಾಗಿದೆ” ಎಂದು ಅವರು ಆರೋಪಿಸಿದರು.

ಎರಡು ಹಂತದ ಚುನಾವಣೆಗೆ ಮುನ್ನ ಮಹಿಳೆಯರ ಖಾತೆಗೆ ತಲಾ 10,000 ಜಮೆ ಮಾಡಿದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯನ್ನು ಉದಾಹರಿಸಿದ ಅವರು, “ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾನಕ್ಕೊಂದು ದಿನ ಬಾಕಿ ಇದ್ದಾಗಲೂ ಹಣ ಜಮೆಯಾಗುತ್ತಿತ್ತು. ಇದು ಬಿಹಾರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಂಡದ್ದು” ಎಂದು ಹೇಳಿದರು.

ಸಾರ್ವಜನಿಕ ಹಣವನ್ನು ದುರುಪಯೋಗ ಮಾಡದೇ ಇದ್ದರೆ ಎನ್‌ಡಿಎ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು. “ಜನ ಸುರಾಜ್ ಪಕ್ಷವು 2,000 ರೂಪಾಯಿ ವೃದ್ಧಾಪ್ಯ ಪಿಂಚಣಿ ಭರವಸೆ ನೀಡಿದಾಗಲೇ ಸರಕಾರ ಈ ಮೊತ್ತವನ್ನು 700ರಿಂದ 1,100 ರೂಪಾಯಿಗೆ ಹೆಚ್ಚಿಸಿತು” ಎಂದು ಸಿಂಗ್ ಆರೋಪಿಸಿದರು.

ಜನ ಸುರಾಜ್ ಪಕ್ಷದ ಕೆಲ ಮತದಾರರು “ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಮತ್ತೆ ಜಂಗಲ್‌ರಾಜ್ ಮರಳಬಹುದು” ಎನ್ನುವ ಭಯದಿಂದ ಎನ್‌ಡಿಎ ಪರ ಮತ ಹಾಕಿದರು.

“ಜಂಗಲ್‌ರಾಜ್ ಇದೆ ಎಂದು ನಾನು ಹೇಳುವುದಿಲ್ಲ, ಆದರೆ ಅದಕ್ಕೆ ಸಂಬಂಧಿಸಿದ ಭಯ ಜನರಲ್ಲಿ ಇದ್ದದ್ದು ಸತ್ಯ. ನಮ್ಮನ್ನು ಬೆಂಬಲಿಸಬಹುದಾಗಿದ್ದ ಹಲವು ಮಂದಿ ಇದೇ ಆತಂಕದಿಂದ ಎನ್‌ಡಿಎಗೆ ಮತ ಹಾಕಿದರು,” ಎಂದು ಮಾಜಿ ಬಿಜೆಪಿ ಸಂಸದರೂ ಆದ ಉದಯ್ ಸಿಂಗ್ ಬಹಿರಂಗಪಡಿಸಿದರು.

ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪಕ್ಷದ ನಾಯಕ ಪವನ್ ವರ್ಮಾ ಅವರು, ವಿಶ್ವಬ್ಯಾಂಕ್‌ನಿಂದ ಬಂದ 21,000 ಕೋಟಿ ರೂಪಾಯಿಯನ್ನೂ ಬೇರೆಡೆಗೆ ಬಳಸಲಾಗಿದೆ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

“ಬಿಹಾರದ ಸಾರ್ವಜನಿಕ ಸಾಲ ಈಗ 4,06,000 ಕೋಟಿ ರೂಪಾಯಿ. ದಿನಕ್ಕೆ 63 ಕೋಟಿ ರೂಪಾಯಿ ಬಡ್ಡಿ, ಈಗ ಖಜಾನೆ ಖಾಲಿಯಾಗಿದೆ. ಇಂತಹ ಸಂದರ್ಭದಲ್ಲಿಯೇ 1.25 ಕೋಟಿ ಮಹಿಳೆಯರಿಗೆ 10,000 ನೀಡಲು 14,000 ಕೋಟಿ ಮೊತ್ತವನ್ನು ಮರುಹಂಚಲಾಗಿದೆ ಎಂಬ ಮಾಹಿತಿ ನಮಗಿದೆ” ಎಂದು ಅವರು ಹೇಳಿದರು.

“ಇದು ನಮ್ಮ ಮಾಹಿತಿ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ನಿಜವಾಗಿದ್ದರೆ ನೈತಿಕತೆಯ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ” ಎಂದು ವರ್ಮಾ ಹೇಳಿದರು.

ಈ ಆರೋಪಗಳ ಕುರಿತು ಬಿಹಾರ ಸರಕಾರ ಅಥವಾ ಎನ್‌ಡಿಎ ನಾಯಕರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News