×
Ad

ಕಳೆದ ವರ್ಷ 82 ಲಕ್ಷ ಹೊಸ ಕ್ಷಯರೋಗ ಪ್ರಕರಣಗಳು : ವಿಶ್ವ ಆರೋಗ್ಯ ಸಂಸ್ಥೆ ವರದಿ

Update: 2024-10-30 20:24 IST

PC : who.int

ಹೊಸದಿಲ್ಲಿ : ಜಗತ್ತಿನಲ್ಲಿ ಕ್ಷಯ ರೋಗ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ನೂತನ ವರದಿಯಲ್ಲಿ ಹೇಳಿದೆ. 2023ರಲ್ಲಿ 82 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಇದು 1995ರಲ್ಲಿ ಜಾಗತಿಕ ನಿಗಾ ಆರಂಭವಾದ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ.

ಇದು 2022ರಲ್ಲಿ ವರದಿಯಾದ 75 ಲಕ್ಷ ಪ್ರಕರಣಗಳಿಗಿಂತ ಗಣನೀಯ ಹೆಚ್ಚಳವಾಗಿದ್ದು, ಈಗ ಕ್ಷಯರೋಗವು ಕೊರೋನಾವನ್ನು ಹಿಂದಿಕ್ಕಿ ಸಾವಿಗೆ ಕಾರಣವಾಗುವ ಅತಿ ದೊಡ್ಡ ಜಾಗತಿಕ ಸೋಂಕು ಕಾಯಿಲೆಯಾಗಿ ಪರಿಣಮಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, 2023ರಲ್ಲಿ ಜಾಗತಿಕ ಮಟ್ಟದಲ್ಲಿ ವರದಿಯಾಗಿರುವ ಒಟ್ಟು ಕ್ಷಯ ರೋಗ ಪ್ರಕರಣಗಳ ಪೈಕಿ 26 ಶೇಕಡ ಭಾರತವೊಂದರಲ್ಲೇ ವರದಿಯಾಗಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಶ್ಯ (10 ಶೇಕಡ), ಚೀನಾ (6.8 ಶೇಕಡ), ಫಿಲಿಪ್ಪೀನ್ಸ್ (6.8 ಶೇಕಡ) ಮತ್ತು ಪಾಕಿಸ್ತಾನ (6.3 ಶೇಕಡ)ಗಳಿವೆ.

2023ರಲ್ಲಿ ಕ್ಷಯ ರೋಗಕ್ಕೆ ಒಳಗಾದವರ ಪೈಕಿ 55 ಶೇಕಡ ಪುರುಷರು, 33 ಶೇಕಡ ಮಹಿಳೆಯರು ಹಾಗೂ 12 ಶೇಕಡ ಮಕ್ಕಳು ಮತ್ತು ಹದಿಹರೆಯದವರು.

ಕ್ಷಯರೋಗವು 30 ದೇಶಗಳಲ್ಲಿ ಅನುಪಾತ ಮೀರಿ ಹೆಚ್ಚಿನ ಪ್ರಮಾಣಗಳಲ್ಲಿ ಕಾಣಿಸಿಕೊಂಡಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. ಆ ದೇಶಗಳೆಂದರೆ - ಅಂಗೋಲ, ಬಾಂಗ್ಲಾದೇಶ, ಬ್ರೆಝಿಲ್, ಕಾಂಬೋಡಿಯ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚೀನಾ, ಕಾಂಗೊ, ಉತ್ತರ ಕೊರಿಯ, ಡಿ.ಆರ್.ಕಾಂಗೊ, ಇತಿಯೋಪಿಯ, ಭಾರತ, ಇಂಡೋನೇಶ್ಯ, ಕೆನ್ಯ, ಲೆಸೊತೊ, ಲೈಬೀರಿಯ, ಮೊಝಾಂಬಿಕ್, ಮ್ಯಾನ್ಮಾರ್, ನಮೀಬಿಯ, ನೈಜೀರಿಯ, ಪಾಕಿಸ್ತಾನ, ಪಪುವ ನ್ಯೂ ಗಿನಿ, ಫಿಲಿಪ್ಪೀನ್ಸ್, ರಶ್ಯ, ಸಿಯರಾ ಲಿಯೋನ್, ದಕ್ಷಿಣ ಆಫ್ರಿಕ, ಥಾಯ್ಲೆಂಡ್, ತಾಂಜಾನಿಯ, ವಿಯೆಟ್ನಾಮ್, ಜಾಂಬಿಯ ಮತ್ತು ಝಿಂಬಾಬ್ವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News