ನ್ಯಾ.ಯಶವಂತ ವರ್ಮಾ ವಿರುದ್ಧ ಸಂಸತ್ ನಲ್ಲಿ ವಾಗ್ದಂಡನೆಗೆ ಕೇಂದ್ರ ನಿರ್ಧಾರ?
ನ್ಯಾ.ಯಶವಂತ ವರ್ಮಾ | PC : PTI
ಹೊಸದಿಲ್ಲಿ: ತನ್ನ ಅಧಿಕೃತ ನಿವಾಸದಲ್ಲಿ ಭಾರೀ ಮೊತ್ತದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ವಿವಾದದ ಸುಳಿಗೆ ಸಿಲುಕಿರುವ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮುಂಬರುವ ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಎನ್ ಡಿ ಎ ನೇತೃತ್ವದ ಕೇಂದ್ರ ಸರಕಾರವು ಸಿದ್ಧತೆ ನಡೆಸುತ್ತಿದೆ. ಎಪ್ರಿಲ್ 8ರಂದು ನ್ಯಾಯಮೂರ್ತಿ ಯಶವಂತ ವರ್ಮಾ ನಿವಾಸದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸಂದರ್ಭದ ಭಾರೀ ಮೊತ್ತದ ನಗದು ಪತ್ತೆಯಾಗಿತ್ತು.
ಸಂಬಂಧಪಟ್ಟ ಸಚಿವಾಲಯದ ಮೂಲಕ ಮೂಲಕ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ಸರಕಾರ ನಡೆಸುವ ನಿರೀಕ್ಷೆಯಿದೆಯೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇತ್ತೀಚೆಗೆ ಭೇಟಿಯಾಗಿ ಮಾತುಕತೆ ನಡೆಸಿರುವುದು, ನ್ಯಾ.ವರ್ಮಾ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಸ,ರಕಾರ ಮಂಡಿಸಲಿದೆಯೆಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ರಚಿಸಿದ ತ್ರಿಸದಸ್ಯ ಆಂತರಿಕ ತನಿಖಾ ಸಮಿತಿಯು ನ್ಯಾ.ವರ್ಮಾ ಅವರಿಗೆ ಕ್ಲೀನ್ ಚಿಟ್ ನೀಡಿಲ್ಲವೆನ್ನಲಾಗಿದೆ. ನ್ಯಾಯಮೂರ್ತಿಯವರ ನಿವಾಸದಲ್ಲಿ ಅಪಾರ ಪ್ರಮಾಣದಲ್ಲಿ ಪತ್ತೆಯಾದ ಸುಟ್ಟ ಕರೆನ್ಸಿ ನೋಟುಗಳ ವೀಡಿಯೋ ಹಾಗೂ ಛಾಯಾಚಿತ್ರಗಳು ಸಮಿತಿಯ ತನಿಖೆಯಲ್ಲಿ ಒಳಗೊಂಡಿವೆ. ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಹಾಗೂ ನ್ಯಾಯಮೂರ್ತಿ ವರ್ಮಾ ತನ್ನ ಹುದ್ದೆಗೆ ರಾಜೀನಾಮೆಯನ್ನು ನೀಡಿಲ್ಲ.
ಈ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ದೇಶದಲ್ಲಿ ಕಾನೂನಿನ ಪ್ರಭುತ್ವವನ್ನು ಎತ್ತಿಹಿಡಿಯುವ ಅಗತ್ಯವಿದೆಯೆಂದು ಪ್ರತಿಪಾದಿಸಿದ್ದಾರೆ. ‘‘ನ್ಯಾಯಾಂಗದ ಸ್ವಾತಂತ್ರ್ಯವು ಉತ್ತರದಾಯಿತ್ವ ಹಾಗೂ ಕಾನೂನು ಪ್ರಕ್ರಿಯೆಯನ್ನು ಪ್ರತಿಬಂಧಿಸಬಾರದು’’ ಎಂದವರು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ಎಫ್ ಐ ಆರ್ ಅನ್ನು ದಾಖಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಸಂಸತ್ ನ ಮುಂಗಾರು ಅಧಿವೇಶನವು ಜೂನ್ ತಿಂಗಳ ದ್ವಿತೀಯಾರ್ಧದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.