ಜಾಗತಿಕ ಶಾಂತಿಗೆ, ಪ್ರಪಂಚದೊಂದಿಗೆ ಏಕತೆ ಸಾಧಿಸಲು ಯೋಗ ಒಂದು ಪ್ರಬಲ ಸಾಧನೆ: ಪ್ರಧಾನಿ ಮೋದಿ
Photo credit: PTI
ವಿಶಾಖಪಟ್ಟಣಂ: ಜಾಗತಿಕ ಅಸ್ಥಿರತೆಯ ನಡುವೆ ಮಾನವೀಯತೆಯು ಉಸಿರಾಡಲು, ಸಮತೋಲನ ಸಾಧಿಸಲು ಯೋಗವು ಪ್ರಬಲ ಸಾಧನ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಸರ್ವೇ ಭವಂತು ಸುಖಿನಃ (ಎಲ್ಲರೂ ಸಂತೋಷವಾಗಿರಲಿ) ಚಿಂತನೆಯಿಂದ ನಾವು ಬದುಕಬೇಕು, ಏಕೆಂದರೆ ಇದು ಶಾಂತಿಯುತ ಸಮಾಜಕ್ಕೆ ಕಾರಣವಾಗುತ್ತದೆ. ದುರದೃಷ್ಟವಶಾತ್, ಇಂದು ಜಗತ್ತು ವ್ಯಾಪಕ ಹಿಂಸೆ ಮತ್ತು ಅಶಾಂತಿಗೆ ಸಾಕ್ಷಿಯಾಗುತ್ತಿದೆ. ಯೋಗವು ಮಾನವೀಯತೆಯು ಉಸಿರಾಡಲು, ಸಮತೋಲನವನ್ನು ಕಂಡುಕೊಳ್ಳಲು ಮತ್ತು ಶಾಂತತೆಯನ್ನು ಮರಳಿ ಪಡೆಯಲು ಅಗತ್ಯವಿರುವ ವಿರಾಮ ತಾಣವಾಗಿದೆ" ಎಂದು ಹೇಳಿದರು.
ಯೋಗವು ಅಹಂಕಾರವನ್ನು ಕೊಲ್ಲುತ್ತದೆ, ಇದು ಜಾಗತಿಕ ಏಕತೆಯನ್ನು ಬೆಳೆಸುವ ಅದರ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎಂಬ ಧ್ಯೇಯವನ್ನು ವಿವರಿಸಿದ ಪ್ರಧಾನಿ ಮೋದಿ, "ಈ ಧ್ಯೇಯವಾಕ್ಯವು ಆಳವಾದ ಸತ್ಯವನ್ನು ಪ್ರತಿಬಿಂಬಿಸುತ್ತದೆ: ಭೂಮಿಯ ಮೇಲಿನ ಪ್ರತಿ ಅಸ್ತಿತ್ವದ ಆರೋಗ್ಯವು ಪರಸ್ಪರ ಸಂಬಂಧವನ್ನು ಹೊಂದಿದೆ" ಎಂದು ಅವರು ಹೇಳಿದರು.
'ಆರಂಭದಲ್ಲಿ, ನಾವು ನಮ್ಮ ಸ್ವಂತ ಆರೋಗ್ಯ ಮತ್ತು ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳಲು ಕಲಿಯುತ್ತೇವೆ. ಯೋಗವು ಬಲವಾದ ವೈಯಕ್ತಿಕ ಶಿಸ್ತನ್ನು ತುಂಬುತ್ತದೆ.
"ಯೋಗವು ನಮ್ಮನ್ನು ಈ ಪರಸ್ಪರ ಸಂಬಂಧಕ್ಕೆ ಜಾಗೃತಗೊಳಿಸುತ್ತದೆ, ಪ್ರಪಂಚದೊಂದಿಗೆ ಏಕತೆಯತ್ತ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಮತ್ತು ನಾವು ಪ್ರತ್ಯೇಕ ವ್ಯಕ್ತಿಗಳಲ್ಲ, ಪ್ರಕೃತಿಯ ಭಾಗ ಎಂದು ನಮಗೆ ಕಲಿಸುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.