ಭಾರತದ ವಿದೇಶಾಂಗ ನೀತಿಗೆ ದೊಡ್ಡ ಹಿನ್ನಡೆ : ಟ್ರಂಪ್ 50% ಸುಂಕ ವಿಧಿಸಿದ ಬೆನ್ನಲ್ಲೇ ಕೇಂದ್ರ ಸರಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ತರಾಟೆ
ಮೋದಿ ಸರಕಾರ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದ ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ (Photo: PTI)
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ 50% ವ್ಯಾಪಾರ ಸುಂಕ ವಿಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದು ಇತ್ತೀಚಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿಗೆ ಆಗಿರುವ ದೊಡ್ಡ ಹಿನ್ನಡೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಟ್ರಂಪ್ ಆಗಸ್ಟ್ 1ರಂದು ಭಾರತೀಯ ಸರಕುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದರು. ಇದಾದ ಸುಮಾರು ಒಂದು ವಾರದ ನಂತರ ಹೆಚ್ಚುವರಿಯಾಗಿ 25% ಸುಂಕವನ್ನು ವಿಧಿಸಿದ್ದಾರೆ. ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರಕ್ಕಾಗಿ ಟ್ರಂಪ್ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರಕಾರ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಭಾರತದ ರಾಷ್ಟ್ರೀಯ ಹಿತಾಸಕ್ತಿ ಸರ್ವೋಚ್ಚ, ಭಾರತ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದೆ. ಈ ಕಾರಣಕ್ಕೆ ಭಾರತವನ್ನು ನಿರಂಕುಶವಾಗಿ ದಂಡಿಸುವ ಯಾವುದೇ ರಾಷ್ಟ್ರವು, ಭಾರತ ಯಾವ ಉಕ್ಕಿನ ಚೌಕಟ್ಟಿನಿಂದ ಮಾಡಲ್ಪಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಖರ್ಗೆ ಹೇಳಿದರು.
7ನೇ ನೌಕಾಪಡೆಯ ಬೆದರಿಕೆಗಳಿಂದ ಹಿಡಿದು ಪರಮಾಣು ಪರೀಕ್ಷೆಗಳ ತಡೆಗಳವರೆಗೆ ಭಾರತ ಯಾವಾಗಲೂ ಅಮೆರಿಕದೊಂದಿಗಿನ ತನ್ನ ಸಂಬಂಧವನ್ನು ಸ್ವಾಭಿಮಾನ ಮತ್ತು ಘನತೆಯಿಂದ ನಡೆಸಿದೆ. ಟ್ರಂಪ್ ಅವರ 50% ಸುಂಕ ವಿಧಿಸುವ ನಿರ್ಧಾರ ನಮ್ಮ ರಾಜತಾಂತ್ರಿಕತೆ ವಿನಾಶಕಾರಿಯಾಗಿ ಕ್ಷೀಣಿಸುತ್ತಿರುವ ಸಮಯದಲ್ಲಿ ಬಂದಿವೆ ಎಂದು ಹೇಳಿದರು.
ಭಾರತ-ಪಾಕ್ ನಡುವೆ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹೇಳಿಕೊಂಡಾಗ ನೀವು ಮೌನವಾಗಿದ್ದೀರಿ. ಅವರು ಕನಿಷ್ಠ 30 ಬಾರಿ ಇದೇ ಹೇಳಿಕೆಯನ್ನು ನೀಡಿದ್ದಾರೆ, ಇನ್ನೂ ಅದನ್ನೇ ಹೇಳುತ್ತಿದ್ದಾರೆ. 2024ರ ನವೆಂಬರ್ 30ರಂದು ಟ್ರಂಪ್ ಬ್ರಿಕ್ಸ್ ರಾಷ್ಟ್ರಗಳ ಮೇಲೆ 100% ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಟ್ರಂಪ್ ʼಬ್ರಿಕ್ಸ್ ಸತ್ತಿದೆʼ ಎಂದು ಹೇಳಿದಾಗ ಪ್ರಧಾನಿ ಮೋದಿ ಅಲ್ಲಿ ಕುಳಿತು ಮುಗುಳ್ನಗುತ್ತಿರುವುದು ಕಂಡು ಬಂದಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಟ್ರಂಪ್ ಪ್ರತಿಕೂಲ ಸುಂಕಗಳನ್ನು ವಿಧಿಸುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿತ್ತು. ಕೃಷಿ, ಎಂಸ್ಎಂಇ(MSME) ಮತ್ತು ವಿವಿಧ ಕೈಗಾರಿಕೆಗಳಂತಹ ನಮ್ಮ ಪ್ರಮುಖ ವಲಯಗಳ ಮೇಲಿನ ಹೊಡೆತವನ್ನು ತಗ್ಗಿಸಲು ನೀವು ಕೇಂದ್ರ ಬಜೆಟ್ನಲ್ಲಿ ಏನೂ ಮಾಡಲಿಲ್ಲ. ನಿಮ್ಮ ಮಂತ್ರಿಗಳು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ತಿಂಗಳುಗಳಿಂದ ಮಾತನಾಡುತ್ತಿದ್ದಾರೆ. ಅವರಲ್ಲಿ ಕೆಲವರು ಹಲವಾರು ದಿನಗಳ ಕಾಲ ವಾಷಿಂಗ್ಟನ್‌ನಲ್ಲಿ ಬೀಡುಬಿಟ್ಟಿದ್ದರು. ನೀವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ವಿಫಲರಾಗಿದ್ದೀರಿ. ನೀವು 6 ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದ್ದೀರಿ. ಈಗ ಟ್ರಂಪ್ ನಮ್ಮನ್ನು ಬೆದರಿಸುತ್ತಿದ್ದಾರೆ ಆದರೆ ನೀವು ಮೌನವಾಗಿದ್ದೀರಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
2024ರಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣ ಸುಮಾರು 7.51 ಲಕ್ಷ ಕೋಟಿಯಾಗಿದೆ. 50% ಸುಂಕವು 3.75 ಲಕ್ಷ ಕೋಟಿ ಆರ್ಥಿಕ ಹೊರೆಯಾಗಿದೆ. ನಮ್ಮ ಎಂಎಸ್ಎಂಇ, ಕೃಷಿ, ಡೈರಿ, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ ಸರಕುಗಳು, ರತ್ನಗಳು ಮತ್ತು ಆಭರಣಗಳು, ಔಷಧ ಉತ್ಪನ್ನಗಳು ಜೈವಿಕ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.