×
Ad

ಕೇಂದ್ರ ಸಚಿವ ಕೌಶಲ್‌ ಕಿಶೋರ್‌ ಅವರ ಉತ್ತರ ಪ್ರದೇಶ ನಿವಾಸದಲ್ಲಿ ಯುವಕನ ಗುಂಡಿಕ್ಕಿ ಹತ್ಯೆ

Update: 2023-09-01 11:43 IST

ಕೇಂದ್ರ ಸಚಿವ ಕೌಶಲ್‌ ಕಿಶೋರ್‌ (Photo: Twitter/@mp_kaushal)

ಲಕ್ನೋ: ಉತ್ತರ ಪ್ರದೇಶದ ಬೇಗರಿಯಾ ಗ್ರಾಮದ ಠಾಕುರ್‌ಗಂಜ್‌ ಪ್ರದೇಶದಲ್ಲಿರುವ ಕೇಂದ್ರ ಸಚಿವ ಕೌಶಲ್‌ ಕಿಶೋರ್‌ ಅವರ ನಿವಾಸದಲ್ಲಿ ಯುವಕನೊಬ್ಬನ ಮೃತದೇಹ ಶಂಕಾಸ್ಪದವಾಗಿ ಶುಕ್ರವಾರ ಮುಂಜಾನೆ 4.15ರ ಸುಮಾರಿಗೆ ಪತ್ತೆಯಾಗಿದೆ.

ಮೃತ ಯುವಕನನ್ನು ವಿನಯ್‌ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಕೇಂದ್ರ ಸಚಿವರ ಪುತ್ರ ವಿಕಾಸ್‌ ಕಿಶೋರ್‌ಗೆ ಸೇರಿದ ಪಿಸ್ತೂಲಿನಿಂದ ಆತನನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತ ಯುವಕನ ಕುಟುಂಬ ದೂರು ಸಲ್ಲಿಸಿದ ನಂತರ ತನಿಖೆ ಆರಂಭಿಸಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಯುವಕನನ್ನು ಸಾಯಿಸಲು ಬಳಸಲಾದ ಪಿಸ್ತೂಲ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾಗಿರುವ ಕೌಶಲ್‌ ಕಿಶೋರ್‌ ಅವರು ತಮ್ಮ ಒಬ್ಬ ಪುತ್ರ ಆಕಾಶ್‌ ಕಿಶೋರ್‌ ಅವರನ್ನು ಕೆಲ ವರ್ಷಗಳ ಹಿಂದೆ ಕಳೆದುಕೊಂಡಿದ್ದರು.

ಮದ್ಯವ್ಯಸನಿಯಾಗಿದ್ದ ಪುತ್ರನನ್ನು ಉಳಿಸಿಕೊಳ್ಳಲು ತಮ್ಮಿಂದ ಸಾಧ್ಯವಾಗಿರಲಿಲ್ಲ ಎಂದು 2022ರಲ್ಲಿ ಸುಲ್ತಾನ್‌ಪುರ್‌ನಲ್ಲಿ ನಡೆದ ಮದ್ಯವರ್ಜನ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದರು.

ಮಗನನ್ನು ವದ್ಯವರ್ಜನ ಶಿಬಿರಕ್ಕೆ ದಾಖಲಿಸಿದ ನಂತರ ಆತ ಮದ್ಯ ವರ್ಜಿಸಿದ್ದಾನೆಂದು ನಂಬಿ ಅವನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಆತ ಮತ್ತೆ ಅದೇ ಅಭ್ಯಾಸವನ್ನು ಮುಂದುವರಿಸಿದ್ದ ಹಾಗೂ ಆತ ಮೃತಪಟ್ಟಾಗ ಆತನ ಮಗುವಿಗೆ ಕೇವಲ ಎರಡು ವರ್ಷ ಆಗಿತ್ತು ಹಾಗೂ ತಮ್ಮ ಮಗನ ಮದ್ಯವ್ಯಸನದಿಂದ ಸೊಸೆ ವಿಧವೆಯಾಗುವಂತಾಯಿತು ಎಂದು ಅವರು ಹಿಂದೆ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News