ಭಾರತದ ಕಂಟೆಂಟ್ ಕ್ರಿಯೇಟರ್ ಗಳಿಗೆ ಕಳೆದ 3 ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ಪಾವತಿಸಿದ ಯೂಟ್ಯೂಬ್
ಮುಂಬೈ: ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳಿಗೆ ಭಾರತವು ನೆಚ್ಚಿನ ತಾಣವಾಗಿದ್ದು, ಕಳೆದ ಮೂರು ವರ್ಷದಲ್ಲಿ ಕಂಟೆಂಟ್ ಕ್ರಿಯೇಟರ್, ಮಾಧ್ಯಮ ಮತ್ತು ಮ್ಯೂಸಿಕ್ ಸಂಸ್ಥೆಗಳಿಗೆ 21 ಸಾವಿರ ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ ಎಂದು ಯೂಟ್ಯೂಬ್ ನ ಏಷ್ಯಾ ಫೆಸಿಫಿಕ್ ವಿಭಾಗದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಆನಂದ್ ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವಣ-ದೃಶ್ಯ-ಮನರಂಜನೆ ಶೃಂಗಸಭೆ 2025 (WAVES) ನಲ್ಲಿ ಮಾತನಾಡಿದ ಅವರು, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ವಿಡಿಯೋ, ಮ್ಯೂಸಿಕ್ ಗಳನ್ನು ನಿರ್ಮಿಸಿ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿ ಹಣ ಗಳಿಸುವ ಮಾರುಕಟ್ಟೆಯು ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಬೆಳೆಯುತ್ತಿರುವ ಕ್ರಿಯೇಟರ್ ಆರ್ಥಿಕತೆಯನ್ನು ಯೂಟ್ಯೂಬ್ ದ್ವಿಗುಣಗೊಳಿಸುತ್ತಿದೆ, ಅದರ ವಾಣಿಜ್ಯ ಮತ್ತು ಶಾಪಿಂಗ್ ಸಾಮರ್ಥ್ಯಗಳನ್ನು ವಿಸ್ತರಿಸುವತ್ತ ತೀವ್ರ ಗಮನ ಹರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ನಾವು ಇಲ್ಲಿ ವಾಣಿಜ್ಯ ಮತ್ತು ಶಾಪಿಂಗ್ ಅನ್ನು ಸಹ ಪ್ರಾರಂಭಿಸಿದ್ದೇವೆ. ನಮ್ಮ ವ್ಯವಹಾರದ ಆ ಭಾಗವನ್ನು ಬೆಳೆಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕ್ರಿಯೇಟರ್ ಗಳು ಆದಾಯವನ್ನು ಹೇಗೆ ಗಳಿಸುತ್ತಾರೆ ಎಂಬುದರಲ್ಲಿ ಇದು ಹೆಚ್ಚು ಹೆಚ್ಚು ಪ್ರಮುಖ ಭಾಗವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕ್ರಿಯೇಟರ್ ಗಳ ವ್ಯವಸ್ಥೆಯನ್ನು ಬಲಪಡಿಸಲು ಮುಂದಿನ ಎರಡು ವರ್ಷಗಳಲ್ಲಿ ರೂ. 850 ಕೋಟಿ ಹೂಡಿಕೆ ಮಾಡುವುದಾಗಿ ಯೂಟ್ಯೂಬ್ ಘೋಷಿಸಿದೆ.