×
Ad

ಲೋಕಸಭೆ: ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ವಿಬಿ-ಜಿ ರಾಮ್ ಜಿ ಮಸೂದೆ 2025 ಮಂಡನೆ

Update: 2025-12-16 17:19 IST

Photo : PTI

ಹೊಸದಿಲ್ಲಿ,ಡಿ.16: ನರೇಗಾ ಸ್ಥಾನದಲ್ಲಿ ವಿವಾದಾತ್ಮಕ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಮಿಷನ್(ಗ್ರಾಮೀಣ) ಅಥವಾ ‘ವಿಬಿ-ಜಿ ರಾಮ್ ಜಿ ಮಸೂದೆ 2025’ನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಗ್ರಾಮೀಣ ಉದ್ಯೋಗ ಖಾತರಿ ಕಾನೂನಿನಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಡುವ ಸರಕಾರದ ನಿರ್ಧಾರ, ಬೇಡಿಕೆ ಆಧಾರಿತದಿಂದ ಪೂರೈಕೆ ಆಧಾರಿತ ಯೋಜನೆಯಾಗಿ ಬದಲಾವಣೆ ಮತ್ತು ರಾಜ್ಯಗಳ ಮೇಲೆ ಶೇ.40ರಷ್ಟು ವೆಚ್ಚ ಹೇರಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆಯನ್ನು ಮಂಡಿಸಿದರು.

ಪ್ರತಿಪಕ್ಷಗಳ ಆರೋಪಗಳನ್ನು ತಿರಸ್ಕರಿಸಿದ ಅವರು,ಮೋದಿ ಸರಕಾರವು ಗ್ರಾಮೀಣಾಭಿವೃದ್ಧಿಗಾಗಿ ಹಿಂದಿನ ಯಾವುದೇ ಸರಕಾರಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿದೆ ಎಂದು ಒತ್ತಿ ಹೇಳಿದರು.

ಸರಕಾರವು ಯೋಜನೆಯನ್ನು ದುರ್ಬಲಗೊಳಿಸಿಲ್ಲ, ಬದಲಿಗೆ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿದೆ ಎಂದು ಪ್ರತಿಪಾದಿಸಿದ ಚೌಹಾಣ್,‌ ‘ಮಹಾತ್ಮಾ ಗಾಂಧಿ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾರೆ. ಕಾಂಗ್ರೆಸ್ ನರೇಗಾ ಯೋಜನೆಯನ್ನು ತಂದಿತ್ತು ಮತ್ತು 2.13 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತು, ಆದರೆ ಮೋದಿ ಸರಕಾರದಡಿ ನಾವು ಬಡವರ ಕಲ್ಯಾಣಕ್ಕಾಗಿ ಎಂಟು ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದೇವೆ. ಕಾಂಗ್ರೆಸ್ ಜವಾಹರ ರೋಜಗಾರ್ ಯೋಜನಾದ ಹೆಸರನ್ನು ಬದಲಿಸಿತ್ತು. ನೆಹರೂಗೆ ಅವಮಾನ ಎಂದು ಅದರ ಅರ್ಥವೇ? ಶ್ರೀರಾಮ ನಮ್ಮ ಪ್ರತಿ ಉಸಿರಿನಲ್ಲಿಯೂ ಇದ್ದಾನೆ. ‘ಜಿ ರಾಮ್ ಜಿ’ಯಿಂದ ಅವರಿಗೇಕೆ (ಪ್ರತಿಪಕ್ಷಗಳು) ತೊಂದರೆಯಾಗುತ್ತಿದೆ? ಮಹಾತ್ಮಾ ಗಾಂಧಿಯವರು ರಾಮರಾಜ್ಯದ ಕನಸನ್ನು ಕಂಡಿದ್ದರು ಮತ್ತು ಬಡವರ ಕಲ್ಯಾಣದ ಮೂಲಕ ನಾವು ಅದನ್ನು ಸಾಧಿಸುತ್ತಿದ್ದೇವೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News