ಎಸ್ಐಆರ್‌ಗೆ ಆಧಾರ್, ವೋಟರ್ ಐಡಿ, ಪಡಿತರ ಚೀಟಿ ಪರಿಗಣಿಸಲಾಗದು: ಚುನಾವಣಾ ಆಯೋಗ
ಹೊಸದಿಲ್ಲಿ: ಚುನಾವಣಾ ಆಯೋಗ ಬಿಹಾರದಲ್ಲಿ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಅಧಿಕೃತ ದಾಖಲೆಗಳಾಗಿ ಪರಿಗಣಿಸಬಹುದು ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ಚುನಾವಣಾ ಆಯೋಗ ಅಸಮ್ಮತಿ ಸೂಚಿಸಿದೆ.
ಆಧಾರ್ ಕೇವಲ ಗುರುತಿನ ಪುರಾವೆ. ದೊಡ್ಡ ಸಂಖ್ಯೆಯ ನಕಲಿ ಪಡಿತರ ಚೀಟಿಗಳು ದೇಶಾದ್ಯಂತ ಇವೆ ಹಾಗೂ ಹಾಲಿ ಇರುವ ಮತದಾರರ ಗುರುತಿನ ಚೀಟಿಗಳನ್ನು ಅವಲಂಬಿಸುವುದರಿಂದ ವಿಶೇಷ ಅಭಿಯಾನದ ಉದ್ದೇಶವೇ ವ್ಯರ್ಥವಾಗುತ್ತದೆ ಎಂದು ಪ್ರತಿಪಾದಿಸಿದೆ.
ಆದರೆ ಮತದಾರರ ಪಟ್ಟಿಯಲ್ಲಿ ಸೇರಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಪೌರತ್ವವನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ಸಂಜೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಕಾನೂನು ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿಶೇಷ ಅಭಿಯಾನ ರದ್ದುಪಡಿಸಬೇಕು ಮತ್ತು ನವೆಂಬರ್ ನಲ್ಲಿ ಚುನಾವಣೆಯನ್ನು ಹಳೆಯ ಮತದಾರರ ಪಟ್ಟಿಗೆ ಅನುಸಾರವಾಗಿಯೇ ನಡೆಸಲು ಸೂಚನೆ ನೀಡಬೇಕು ಎಂದು ಕೋರಿ 11 ವಿರೋಧ ಪಕ್ಷಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಬಿಹಾರದ ಕೆಲ ನಿವಾಸಿಗಳು ಸಲ್ಲಿಸಿರುವ ಅರ್ಜಿಯನ್ನು ರದ್ದುಪಡಿಸುವಂತೆ ಆಯೋಗ ಮನವಿ ಮಾಡಿದೆ.
ಪೌರತ್ವ ಕಾಯ್ದೆಯ ಸೆಕ್ಷನ್ 9 ಎಸ್ಐಆರ್ ಗೆ ಅನ್ವಯವಾಗುವುದಿಲ್ಲ. ಎಸ್ಐಆರ್ ನಲ್ಲಿ ಒಬ್ಬ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ಆ ವ್ಯಕ್ತಿಯ ಪೌರತ್ವ ರದ್ದಾಗುವುದಿಲ್ಲ ಎಂದು ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.