ಬೊಜ್ಜು ಹೊಂದಿರುವ ಮಕ್ಕಳಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿರುವ ಭಾರತ
Photo | Pexels
World Obesity Federation (WOF) ಪ್ರಕಾರ 2040ರ ವೇಳೆಗೆ ಜಾಗತಿಕವಾಗಿ 507 ದಶಲಕ್ಷ ಮಕ್ಕಳು ಬೊಜ್ಜು ಅಥವಾ ಅಧಿಕ ತೂಕ ಹೊಂದಿರಲಿದ್ದಾರೆ.
ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಜಾಗತಿಕವಾಗಿ ಭಾರತದ ಎರಡನೇ ಸ್ಥಾನದಲ್ಲಿದೆ. ಅಂದಾಜಿನ ಪ್ರಕಾರ ಭಾರತದಲ್ಲಿ 2040ರ ವೇಳೆಗೆ 5ರಿಂದ9 ವರ್ಷ ವಯಸ್ಸಿನ 20 ದಶಲಕ್ಷ ಮಕ್ಕಳು ಬೊಜ್ಜು ಹೊಂದಿರುವವರಾಗಿರಲಿದ್ದಾರೆ. ಅದೇ ವಯಸ್ಸಿನ 56 ದಶಲಕ್ಷ ಮಕ್ಕಳು ಅಧಿಕ ತೂಕ ಹೊಂದಿರುವವರಾಗಿದ್ದಾರೆ ಎಂದು ವರ್ಲ್ಡ್ ಒಬೆಸಿಟಿ ಅಟ್ಲಾಸ್ 2026 ವರದಿ ಹೇಳಿದೆ.
ಮಾರ್ಚ್ 4ರಂದು ಆಚರಿಸಲಾಗುವ World Obesity Day ಸ್ಮರಣಾರ್ಥ ವಿಶ್ವ ಬೊಜ್ಜು ಫೆಡರೇಶನ್ ಬಿಡುಗಡೆ ಮಾಡಿದ ಅಟ್ಲಾಸ್ 2040ರ ವೇಳೆಗೆ ಜಾಗತಿಕವಾಗಿ ಕನಿಷ್ಠ 120 ದಶಲಕ್ಷ ಶಾಲಾ ವಯಸ್ಸಿನ ಮಕ್ಕಳು ಅಧಿಕ ತೂಕ ಮತ್ತು ಬೊಜ್ಜು ಕಾರಣದಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ರಕ್ತನಾಳದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳ ಆರಂಭಿಕ ಲಕ್ಷಣಗಳನ್ನು ಹೊಂದಿರುತ್ತಾರೆ!
ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ:
ಬೊಜ್ಜಿನ ಮೇಲೆ ಪ್ರತ್ಯೇಕವಾಗಿ ಗಮನಹರಿಸುವ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಬೊಜ್ಜು ಕುರಿತ ಜಾಗತಿಕ ಸಂಸ್ಥೆಗಳ ಪ್ರಮುಖ ಪಾಲುದಾರರಾಗಿರುವ ಏಕೈಕ ಜಾಗತಿಕ ಸಂಸ್ಥೆಯಾದ World Obesity Federation (WOF) ಪ್ರಕಾರ 2040ರ ವೇಳೆಗೆ ಜಾಗತಿಕವಾಗಿ 507 ದಶಲಕ್ಷ ಮಕ್ಕಳು ಬೊಜ್ಜು ಅಥವಾ ಅಧಿಕ ತೂಕ ಹೊಂದಿರಲಿದ್ದಾರೆ.
ಅಟ್ಲಾಸ್ ಹೇಳಿರುವ ಪ್ರಕಾರ ವಿಶ್ವಾದ್ಯಂತ 5ರಿಂದ 19ನೇ ವಯಸ್ಸಿನ ಐದು ಮಂದಿಯಲ್ಲಿ ಒಬ್ಬರಿಗಿಂತ ಹೆಚ್ಚು ಅಂದರೆ ಶೇ 20.7ರಷ್ಟು ಮಕ್ಕಳು ಬೊಜ್ಜು ಅಥವಾ ಅಧಿಕ ತೂಕದಿಂದ ಬಳಲುತ್ತಿದ್ದಾರೆ. 2010ರಲ್ಲಿ ಈ ಪ್ರಮಾಣ ಶೇ 14.6ರಷ್ಟಿತ್ತು.
ಸಕ್ಕರೆ ತೆರಿಗೆಗಳನ್ನು ವಿಧಿಸುವುದು ಮತ್ತು ಮಾರುಕಟ್ಟೆ ನಿರ್ಬಂಧಗಳನ್ನು ಹೇರುವ ಮೂಲಕ ಬೊಜ್ಜಿನ ಮೇಲ್ವಿಚಾರಣೆ ಮತ್ತು ಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು World Obesity Federation ಹೇಳಿದೆ.
ಗಣನೀಯವಾಗಿ ಏರಲಿರುವ BMI ರೋಗಗಳು:
2025ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 5ರಿಂದ 9 ವರ್ಷ ವಯಸ್ಸಿನ 14.921 ದಶಲಕ್ಷ ಮತ್ತು 10ರಿಂದ 19 ವರ್ಷ ವಯಸ್ಸಿನ 26.402 ದಶಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಅಧಿಕ ತೂಕ ಮತ್ತು ಬೊಜ್ಜು ಹೊಂದಿದ್ದರು. ಭಾರತದಲ್ಲಿ 2025ರಿಂದ 2049ರ ನಡುವೆ ಅಧಿಕ ಬಾಡಿ ಮಾಸ್ ಇಂಡೆಕ್ಸ್ಗೆ (BMI) ಕಾರಣವಾದ ರೋಗ ಸೂಚಕಗಳನ್ನು ಹೊಂದಿರುವ 5ರಿಂದ 19 ವರ್ಷದ ವಯಸ್ಸಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುವ ಸಾಧ್ಯತೆಯಿದೆ.
BMI ಕಾರಣದಿಂದ ಬರುವ ಅಧಿಕ ರಕ್ತದೊತ್ತಡವಿರುವ ಮಕ್ಕಳ ಸಂಖ್ಯೆ 2.99 ದಶಲಕ್ಷದಿಂದ 4.21 ದಶಲಕ್ಷಕ್ಕೆ ಏರಲಿದೆ. ಹೈಪರ್ಗ್ಲೈಸಿಮಿಯ ರೋಗವಿರುವ ಮಕ್ಕಳ ಸಂಖ್ಯೆ 1.39 ದಶಲಕ್ಷದಿಂದ 1.91 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹೈಟ್ರೈಗ್ಲಿಸರೈಡ್fಗಳು ಇರುವವರ ಸಂಖ್ಯೆ 4.39 ದಶಲಕ್ಷದಿಂದ 6.07 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಚಯಾಪಚಯ ಕ್ರಿಯೆಯಲ್ಲಿನ ಸಮಸ್ಯೆಗೆ ಸಂಬಂಧಿತ ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಎಂದೇ ತಿಳಿದಿರುವ ಸ್ಟೀಟೋಟಿಕ್ ಲಿವರ್ ಡಿಸೀಸ್ಗೆ (MASLD) ತುತ್ತಾಗುವ ಮಕ್ಕಳ ಸಂಖ್ಯೆ 8.39 ದಶಲಕ್ಷದಿಂದ 11.88 ದಶಲಕ್ಷಕ್ಕೆ ಏರುವ ಸಾಧ್ಯತೆಯಿದೆ.
ಅಪಾಯಕಾರಿ ಅಂಶಗಳನ್ನು ಪಟ್ಟಿಮಾಡಿದ ಅಟ್ಲಾಸ್:
ಅಟ್ಲಾಸ್ ಭಾರತದ ಎಲ್ಲಾ ವಯೋಮಾನದವರಿಗೂ ಅನ್ವಯಿಸುವಂತೆ ತಡೆಗಟ್ಟಬಹುದಾದ ಅಪಾಯಕಾರಿ ಅಂಶಗಳನ್ನು ಪಟ್ಟಿಮಾಡಿದೆ. ವರದಿಯ ಪ್ರಕಾರ 11ರಿಂದ 17 ವರ್ಷ ಪ್ರಾಯದವರಲ್ಲಿ ಶೇ 74ರಷ್ಟು ಹದಿಹರೆಯದವರು ಶಿಫಾರಸು ಮಾಡಲಾಗಿರುವ ದೈಹಿಕ ಚಟುವಟಿಕೆಯ ಮಟ್ಟವನ್ನು ಪೂರೈಸಲು ವಿಫಲರಾಗಿದ್ದಾರೆ. ಅಲ್ಲದೆ, ಶಾಲಾ ವಯಸ್ಸಿನ ಮಕ್ಕಳಲ್ಲಿ (ಪ್ರಾಥಮಿಕ ಮತ್ತು ಮಾಧ್ಯಮಿಕ) ಶೇ 35.5ರಷ್ಟು ಮಂದಿ ಮಾತ್ರ ಶಾಲಾ ಊಟಗಳನ್ನು ಸ್ವೀಕರಿಸುತ್ತಿದ್ದಾರೆ.
ಆದರೆ ಆತಂಕಕಾರಿ ವಿಷಯವೆಂದರೆ 6ರಿಂದ 10ನೇ ವಯಸ್ಸಿನ ಮಕ್ಕಳು ನಿತ್ಯವೂ ಸರಾಸರಿ 0ರಿಂದ 50 ಮಿಲಿಲೀಟರ್ ನಷ್ಟು ಸಕ್ಕರೆ ಪಾನೀಯಗಳನ್ನು ಸೇವಿಸುತ್ತಾರೆ. 1ರಿಂದ 5 ತಿಂಗಳ ಶೇ 32.6ರಷ್ಟು ಹಸುಗೂಸುಗಳು ಅಗತ್ಯವಿರುವುದಕ್ಕಿಂತ ಕಡಿಮೆ ಹಾಲುಣಿಸುವಿಕೆ ಪಡೆಯುತ್ತಿದ್ದಾರೆ. 15 ವಯಸ್ಸಿನಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಧಿಕ BMI ಇದೆ. ಇದೇ ವಯಸ್ಸಿನ ಶೇ 4.2ರಷ್ಟು ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ರೋಗವಿದೆ.
ಬೊಜ್ಜಿನಲ್ಲೂ ಮುಂಚೂಣಿಯಲ್ಲಿರುವ ಚೀನಾ:
ಅಧಿಕ ತೂಕ ಮತ್ತು ಬೊಜ್ಜು ಇರುವ 5ರಿಂದ 19 ವರ್ಷ ವಯಸ್ಸಿನ 200 ದಶಲಕ್ಷ ಶಾಲಾ ವಯಸ್ಸಿನ ಮಕ್ಕಳನ್ನು ಹೊಂದಿರುವ ಹತ್ತು ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಈ ಹತ್ತು ದೇಶಗಳಲ್ಲಿ ಹೆಚ್ಚಿನ BMI ಮತ್ತು ಬೊಜ್ಜು ಇದೆ. ಚೀನಾ ಎರಡೂ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾದ 61 ದಶಲಕ್ಷ ಮಕ್ಕಳಲ್ಲಿ ಅಧಿಕ BMI ಇದ್ದರೆ, 33 ದಶಲಕ್ಷ ಮಕ್ಕಳಲ್ಲಿ ಬೊಜ್ಜು ಇದೆ. ನಂತರದ ಸ್ಥಾನದ್ಲಲಿ ಭಾರತ ಮತ್ತು ಅಮೆರಿಕವಿದೆ. ಅಮೆರಿಕದ 27 ದಶಲಕ್ಷ ಮಕ್ಕಳಲ್ಲಿ ಅಧಿಕ BMI ಇದೆ ಮತ್ತು 13 ದಶಲಕ್ಷ ಮಕ್ಕಳಲ್ಲಿ ಬೊಜ್ಜು ಇದೆ. ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ದೇಶಗಳೆಂದರೆ ಇಂಡೋನೇಷ್ಯಾ, ಪಾಕಿಸ್ತಾನ, ಬ್ರೆಝಿಲ್, ಈಜಿಪ್ಟ್, ಮೆಕ್ಸಿಕೊ, ನೈಜೀರಿಯ ಮತ್ತು ಕಾಂಗೋ.
ಜಾಗತಿಕ ಗುರಿಯನ್ನು ತಪ್ಪಿಸಿಕೊಂಡ ಜಗತ್ತು:
ಅಟ್ಲಾಸ್ ಪ್ರಕಾರ 2025ರ ಅಂತ್ಯದಲ್ಲಿ ಚೀನಾ, ಭಾರತ ಮತ್ತು ಅಮೆರಿಕದಲ್ಲಿ 10 ದಶಲಕ್ಕೂ ಮೀರಿ ಮಕ್ಕಳು ಬೊಜ್ಜು ಸಮಸ್ಯೆಯನ್ನು ಎದುರಿಸಿದ್ದಾರೆ. ಬಾಲ್ಯದ ಬೊಜ್ಜು ಹೆಚ್ಚಾಗುವುದನ್ನು ತಡೆಯುವ 2025ರ ಜಾಗತಿಕ ಗುರಿಯನ್ನು ಜಗತ್ತು ತಪ್ಪಿಸಿಕೊಳ್ಳಲಿದೆ ಎಂದು ವರದಿ ಎಚ್ಚರಿಸಿದೆ. 2030ಕ್ಕೆ ಗಡುವು ವಿಸ್ತರಣೆಯಾಗಿದ್ದರೂ, ಭಾರತವೂ ಸೇರಿದಂತೆ ಅನೇಕ ದೇಶಗಳು ಬೊಜ್ಜು ಸಮಸ್ಯೆಯನ್ನು ನಿವಾರಿಸುವ ಪಥದಲ್ಲಿಲ್ಲ ಎಂದು ವರದಿ ಹೇಳಿದೆ.
ಬಾಲ್ಯದ ಸ್ಥೂಲಕಾಯತೆ ಮತ್ತು ಅಧಿಕ ತೂಕವು ವಯಸ್ಕರಲ್ಲಿ ಕಂಡುಬರುವ ರೀತಿಯ ಪರಿಸ್ಥಿತಿಗಳಿಗೆ ಕಾರಣವಾಗಲಿದೆ. ಅಧಿಕ ರಕ್ತದೊತ್ತಡ ಮತ್ತು ಹೃದಯ ರಕ್ತನಾಳಗಳ ಸಮಸ್ಯೆ ಕಾಡಬಹುದು. 2040ರ ವೇಳೆಗೆ 57 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಹೃದಯರಕ್ತನಾಳದ ಕಾಯಿಲೆಯ (ಹೈಟ್ರೈಗ್ಲಿಸರೈಡ್) ಆರಂಭಿಕ ಲಕ್ಷಣಗಳನ್ನು ಹೊಂದಿರಬಹುದು ಮತ್ತು 43 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಅಧಿಕ ರಕ್ತದೊತ್ತಡ ಲಕ್ಷಣಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ.
ತಡೆಗಟ್ಟಲು ಯಾವ ಕ್ರಮ ಕೈಗೊಳ್ಳಬಹುದು?:
ಮಕ್ಕಳು ಮನೆ ಅಥವಾ ಶಾಲೆಯಲ್ಲಿ ಆರೋಗ್ಯಕರ ತಿನಿಸುಗಳನ್ನು ಸೇವಿಸುವ ಪರಿಸರವನ್ನು ಸೃಷ್ಟಿಸಬೇಕಿದೆ. ಸಕ್ಕರೆ-ಸಿಹಿ ಬೆರೆಸಿದ ಪಾನೀಯಗಳ ಮೇಲೆ ಅಧಿಕ ತೆರಿಗೆ ವಿಧಿಸುವುದು ಮತ್ತು ಮಕ್ಕಳಿಗೆ ಅನಾರೋಗ್ಯಕರವಾಗಿರುವ ಆಹಾರದ ಜಾಹೀರಾತಿನ ಮೇಲೆ ಮಿತಿ ಹೇರುವುದು ಪ್ರಾಥಮಿಕ ಕ್ರಮಗಳಲ್ಲಿ ಒಂದಾಗಿರುತ್ತದೆ. ಅಲ್ಲದೆ ಮಕ್ಕಳ ದೈಹಿಕ ಚಟುವಟಿಕೆಯತ್ತ ಹೆಚ್ಚಿನ ಗಮನ ಕೊಡಬೇಕು.
ಮಕ್ಕಳು ಬೊಜ್ಜಿನ ಅಪಾಯದ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯುವುದು ಪ್ರಮುಖ ಉದ್ದೇಶವಾಗಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಕಾರ್ಯ ಆಗುತ್ತಿಲ್ಲ. ಈ ಹಿಂದೆ ಬೊಜ್ಜು ಹೆಚ್ಚಿನ ಆದಾಯ ಹೊಂದಿರುವ ದೇಶಗಳ ಮಕ್ಕಳಲ್ಲಿ ಹೆಚ್ಚು ಕಡುಬರುತ್ತಿತ್ತು. ಆದರೆ ಇದೀಗ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲೂ ಅತ್ಯಂತ ವೇಗವಾಗಿ ಹರಡುತ್ತಿದೆ. ಜಾಗತಿಕವಾಗಿ ಬೊಜ್ಜು ಹೊಂದಿರುವ ವಯಸ್ಸಿನ ಮಕ್ಕಳ ಪ್ರಮಾಣ ಇದೀಗ ಕಡಿಮೆ ತೂಕ ಹೊಂದಿರುವ ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿದೆ.