×
Ad

ಶಿವಸೇನೆ ಶಾಸಕನಿಂದ ಹಲ್ಲೆ ಬೆನ್ನಲ್ಲೇ ಅಜಂತಾ ಕೇಟರರ್ಸ್ ಲೈಸನ್ಸ್ ರದ್ದು

Update: 2025-07-10 07:44 IST

 ಹಳಸಿದ ಆಹಾರ ನೀಡಲಾಗಿದೆ ಎಂದು ಆಪಾದಿಸಿ ಕ್ಯಾಂಟೀನ್ ನೌಕರನಿಗೆ ಕಪಾಳಮೋಕ್ಷ ಮಾಡಿದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ x.com/ndtv

ಮುಂಬೈ: ಇಲ್ಲಿನ ಆಕಾಶವಾಣಿ ಎಂಎಲ್ಎ ಹಾಸ್ಟೆಲ್ ನಿರ್ವಹಿಸುತ್ತಿದ್ದ ಅಜಂತಾ ಕೇಟರರ್ಸ್ ಸಿಬ್ಬಂದಿಯ ಮೇಲೆ, ಹಳಸಲು ಆಹಾರ ನೀಡಿದ ಆರೋಪದಲ್ಲಿ ಶಿವಸೇನೆ ಶಾಸಕ ಹಲ್ಲೆ ನಡೆಸಿದ ಬೆನ್ನಲ್ಲೇ ಅಜಂತಾ ಕೇಟರರ್ಸ್ ಗೆ ನೀಡಿದ್ದ ಲೈಸನ್ಸ್ ರದ್ದುಪಡಿಸಿ ಮಹಾರಾಷ್ಟ್ರ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಷ್ಟ್ರೇಷನ್ (ಎಫ್‌ಡಿಎ) ಆದೇಶ ಹೊರಡಿಸಿದೆ.

ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಲೈಸನ್ಸಿಂಗ್ ಅಂಡ್ ರಿಜಿಸ್ಟ್ರೇಷನ್ ಆಫ್ ಫುಡ್ ಬ್ಯುಸಿನೆಸ್) ನಿಬಂಧನೆಗಳು-2011ರ ವಿಧಿಗಳನ್ನು ಕೇಟರರ್ಸ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಹಾಸ್ಟೆಲ್ ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಉಲ್ಲಂಘನೆ ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಗುರುವಾರದಿಂದಲೇ ಜಾರಿಗೆ ಬರುವಂತೆ, ಹಾಸ್ಟೆಲ್ ಆವರಣದಲ್ಲಿ ಅಜಂತಾ ಕೇಟರರ್ಸ್ ನ ಆಹಾರ ವಿತರಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಹಳಸಿದ ಆಹಾರ ನೀಡಲಾಗಿದೆ ಎಂದು ಆಪಾದಿಸಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್, ಹಾಸ್ಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಕ್ಷದ ಶಾಸಕ ಘಟನೆ ಬಗ್ಗೆ ಹೇಳಿಕೆ ನೀಡಿ, "ಕ್ಯಾಂಟೀನ್‌ನಲ್ಲಿ ವಿತರಿಸುವ ಆಹಾರದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪರಿಸ್ಥಿತಿ ಬದಲಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಬಿಲ್ ಪಾವತಿಸಲು ನಿರಾಕರಿಸಿದ ಶಾಸಕ ಬಿಲ್ಲಿಂಗ್ ಕೌಂಟರ್ ನಲ್ಲಿದ್ದ ಸಿಬ್ಬಂದಿಯನ್ನು ಪದೇ ಪದೇ ಹೊಡೆಯುತ್ತಿರುವ ಘಟನೆಯ ದೃಶ್ಯತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಲು ಗಾಯಕ್ವಾಡ್ ನಿರಾಕರಿಸಿದ್ದು, ಘಟನೆ ಬಗ್ಗೆ ಯಾವುದೇ ವಿಷಾದ ಇಲ್ಲ; ಇದು ಸಹಜ ಪ್ರತಿಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News