ಕುಂಭಮೇಳವನ್ನು ದಿಲ್ಲಿಯ ದಾರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಆದಿತ್ಯನಾಥ್?
2025ರ ಮಹಾಕುಂಭದ ಯಶಸ್ಸು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ನಿರ್ಣಾಯಕವಾಗಿದೆ ಎಂಬುದಂತೂ ನಿಜ.
2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ ಎದುರು ಬಿಜೆಪಿ ದೊಡ್ಡ ಏಟು ತಿಂದಾಗ, ಅದು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಬಿದ್ದ ಏಟೇ ಆಗಿತ್ತು. ಪಕ್ಷದೊಳಗೇ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದವರಿಗೆ ಅದೊಂದು ಅಸ್ತ್ರದಂತೆ ಸಿಕ್ಕಿತ್ತು. ಸೋಲಿಗೆ ಆದಿತ್ಯನಾಥ್ ಕಾರಣ ಎನ್ನುವಂಥ ಟೀಕೆಗಳು ಪಕ್ಷದೊಳಗೇ ಕೇಳಿಬಂದಿದ್ದವು. ಒಂದು ರೀತಿಯಲ್ಲಿ ಆದಿತ್ಯನಾಥ್ ಅವರನ್ನು ಒಬ್ಬಂಟಿಯಾಗಿಸುವ ಯತ್ನ ಕೂಡ ನಡೆದಂತಿತ್ತು.
ಆದರೆ ಸಂಘ ಆದಿತ್ಯನಾಥ್ ಬೆನ್ನಿಗೆ ನಿಂತಿತ್ತು. ಹಾಗಾಗಿಯೇ ಯಾರೂ ಅವರನ್ನು ದೂರವಿಡಲಾಗಲಿಲ್ಲ. ಆನಂತರ 9 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದರೊಂದಿಗೆ ಅಲ್ಲಿ ಮತ್ತೆ ಆದಿತ್ಯನಾಥ್ ತನ್ನ ಮಹತ್ವವನ್ನು ಋಜುವಾತುಪಡಿಸಿಕೊಂಡರು. ಉತ್ತರ ಪ್ರದೇಶ ಬಿಜೆಪಿಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ತಲೆದೋರಿದ ಹೊತ್ತಲ್ಲಿ, ಒಳಗೊಳಗೇ ವಿರೋಧ ಎದುರಾಗಿದ್ದ ಹೊತ್ತಿನಲ್ಲಿ ಆದಿತ್ಯನಾಥ್ ಪಾಲಿಗೆ ಅದು ದೊಡ್ಡ ಗೆಲುವಾಗಿ ಒದಗಿತ್ತು.
ಮೋದಿಯ ಉತ್ತರಾಧಿಕಾರಿಯಾಗಲು ಅಮಿತ್ ಶಾ ಮತ್ತು ಆದಿತ್ಯನಾಥ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ. ಹೀಗಿರುವಾಗ ಆದಿತ್ಯನಾಥ್ ಅದಕ್ಕಾಗಿ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳಲು ನೋಡಿದರೆ ಅಚ್ಚರಿಯೇನಿಲ್ಲ.
ಉತ್ತರ ಪ್ರದೇಶದ ಸಿಂಹಾಸನವನ್ನು ಹಾಗೆಯೇ ಉಳಿಸಿಕೊಳ್ಳಲು ಮತ್ತು ದಿಲ್ಲಿ ಕಡೆಗಿನ ತಮ್ಮ ದಾರಿಯನ್ನು ನಿಶ್ಚಯಿಸಿಕೊಳ್ಳಲು ಈಗ ಅವರೆದುದು ಮಹಾಕುಂಭದಂಥ ದೊಡ್ಡ ಅವಕಾಶ ತೆರೆದುಕೊಂಡಿತು.
ದಿಲ್ಲಿಯಲ್ಲಿನ ನಾಯಕರಿಗೆ ಸೆಡ್ಡು ಹೊಡೆಯುತ್ತಲೇ, ರಾಜ್ಯದಲ್ಲಿನ ಎದುರಾಳಿ ಅಖಿಲೇಶ್ ಯಾದವ್ ಅವಧಿಯನ್ನು ಮೀರಿಸುವ ಹಾಗೆ ಬ್ರ್ಯಾಂಡ್ ಯುಪಿಯನ್ನು ರೂಪಿಸುವುದು ಆದಿತ್ಯನಾಥ್‌ಗೆ ಅಗತ್ಯವಾಗಿದೆ.
ಅದಕ್ಕಾಗಿ ಅವರು ಇಟ್ಟುಕೊಂಡಿರುವ ಗುರಿಗಳೆಂದರೆ,
ಒಂದನೆಯದಾಗಿ, ತಮ್ಮ ಹಿಂದೂ ರುಜುವಾತುಗಳನ್ನು ಹೆಚ್ಚಿಸುವುದು.
ಎರಡನೆಯದು, ರಾಜಕೀಯ ಲಾಭವನ್ನು ಮಾಡಿಕೊಳ್ಳುವುದು
ಮೂರನೆಯದು, ತಮ್ಮ ಬಲವೇನು ಎಂದು ಪ್ರದರ್ಶಿಸುವುದಕ್ಕೆ ಮಹಾಕುಂಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು.
ರಾಜಕೀಯ ಲಾಭಕ್ಕಾಗಿ ಮಹಾಕುಂಭಮೇಳದಲ್ಲಿ ಅವರು ಮಹಾ ಮಂಡಲೇಶ್ವರ ಪ್ರಶಸ್ತಿಯನ್ನೂ ಬಳಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ತಲುಪುವ ತಂತ್ರದ ಭಾವ ಅದಾಗಿದೆ.
ಗಂಗಾ ದಡದಲ್ಲಿರುವ ಶೃಂಗವೇಪುರ ಧಾಮ್ ಪಟ್ಟಣದ ಪುನರಾಭಿವೃದ್ಧಿ ಮಾಡಿದ್ದಾರೆ.
ಒಬಿಸಿ ಸಮುದಾಯದ ಮತ ಗಳಿಸಲು ಪ್ರತಿಮೆ ರಾಜಕೀಯವನ್ನೂ ಆದಿತ್ಯನಾಥ್ ಮಾಡಿದ್ದಾರೆ.
ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ದೋಣಿಯಲ್ಲಿ ಗಂಗಾ ನದಿಯನ್ನು ದಾಟಿಸಿದ್ದ ಎನ್ನಲಾಗುವ ನಿಷಾದ ರಾಜನ 51 ಅಡಿ ಪ್ರತಿಮೆಯನ್ನು ನಿರ್ಮಿಸಲಾಗಿದೆ.
50,000ಕ್ಕೂ ಹೆಚ್ಚು ಕಾರ್ಮಿಕರು 4,000 ಹೆಕ್ಟೇರ್ ಪ್ರದೇಶದಲ್ಲಿ ತಾತ್ಕಾಲಿಕ ಮಹಾಕುಂಭ ನಗರ ನಿರ್ಮಿಸಲು ಹಗಲು, ರಾತ್ರಿ ಶ್ರಮಿಸಿದ್ದಾರೆ.
ನಗರದ ಮೂಲಸೌಕರ್ಯ ಸುಧಾರಿಸಲು ಮತ್ತು ಮೇಳಕ್ಕೆ ಸೌಲಭ್ಯಗಳನ್ನು ಒದಗಿಸಲು 5,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಆದಿತ್ಯನಾಥ್ ತಂದಿದ್ದಾರೆ.
ಕೋಕಾಕೋಲಾ, ಐಟಿಸಿ, ಬಿಸ್ಲೆರಿ, ಪೇಟಿಎಂ ಇವೆಲ್ಲವೂ ಮಹಾಕುಂಭ ಸಮಯದಲ್ಲಿ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿ 1,000 ಕೋಟಿಗೂ ಹೆಚ್ಚು ಹಣವನ್ನು ತೊಡಗಿಸುವಂತಾಗಲು ಆದಿತ್ಯನಾಥ್ ಪ್ರಭಾವ ಬೀರಿದ್ದಾರೆ.
ಇದೆಲ್ಲಕ್ಕಿಂತ ಹೆಚ್ಚಾಗಿ, ಮಹಾಕುಂಭವನ್ನು ಹೇಗೆ ವರದಿ ಮಾಡಬೇಕು ಎನ್ನುವುದಕ್ಕಾಗಿ 70 ಬಗೆಯ ಸ್ಟೋರಿ ಐಡಿಯಾಗಳನ್ನು ವಿವಿಧ ಮಾಧ್ಯಮಗಳ ಸಂಪಾದಕರಿಗೆ ಸರಕಾರವೇ ನೀಡಿದೆ. ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವ ವ್ಯವಸ್ಥಿತ ಕೆಲಸವನ್ನು ಆದಿತ್ಯನಾಥ್ ಈ ಮೂಲಕ ಮಾಡಿದ್ದಾರೆ. ಕುಂಭ ಸ್ನಾನ ಹೇಗೆ ಆರೋಗ್ಯದ ಲಾಭಗಳನ್ನು ತರುತ್ತದೆ ಎಂಬುದು ಕೂಡ ಅಂಥ ಸ್ಟೋರಿ ಐಡಿಯಾಗಳಲ್ಲಿ ಒಂದಾಗಿದೆ.
ಆದಿತ್ಯನಾಥ್ ಎದುರಿಗಿರುವ ದೊಡ್ಡ ಸವಾಲೆಂದರೆ,
ಮಹಾಕುಂಭದ ಪ್ರಮುಖ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುವ ಜನಸಂದಣಿಯನ್ನು ನಿರ್ವಹಿಸುವುದು.
ಹಿಂದೆ ಕುಂಭಮೇಳದ ಹೊತ್ತಿನಲ್ಲಿ ನಡೆದ ಪ್ರಮಾದಗಳು ಆಗದಂತೆ ಎಚ್ಚರವಹಿಸಲಾಗಿದೆ.
ಆದಿತ್ಯನಾಥ್ ಸರಕಾರ ಬಾಲಿವುಡ್ ಕಲಾ ನಿರ್ದೇಶಕರನ್ನು ನೇಮಿಸಿಕೊಂಡಿದೆ, ಅವರು ತಮ್ಮ ಸೃಜನಶೀಲ ಪರಿಣತಿ ಬಳಸಿಕೊಂಡು ಅತ್ಯಾಧುನಿಕ ಕೇಂದ್ರೀಕೃತ ಹೈಟೆಕ್ ನಿಯಂತ್ರಣ ಕೊಠಡಿಯನ್ನು ಎಐ ಬಳಸಿ ನಿರ್ಮಿಸಿದ್ದಾರೆ. ಅದರಿಂದ ಕುಂಭಮೇಳ ಸ್ಥಳದ ಪ್ರತಿಯೊಂದು ಮೂಲೆ ಮತ್ತು ಮೂಲೆಯನ್ನು ಕೂಡ ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡಬಹುದಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ನಿಭಾಯಿಸಲು 10 ನಗರಗಳಲ್ಲಿ 56 ಪೊಲೀಸ್ ಠಾಣೆಗಳು ಮತ್ತು 155 ಔಟ್‌ಪೋಸ್ಟ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅಂದಾಜು 45 ಕೋಟಿ ಯಾತ್ರಿಕರನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಆದಿತ್ಯನಾಥ್ ಏಳು ವರ್ಷಗಳ ಆಳ್ವಿಕೆಯಲ್ಲಿ ಇದುವರೆಗೆ ಮಾಡಿರುವುದನ್ನು ದೊಡ್ಡದಾಗಿಯೇ ಬಿಂಬಿಸಿಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣ, ಗೋರಖನಾಥ ದೇವಾಲಯ ವಿಸ್ತರಣೆ, ಗೋ ರಕ್ಷಣಾ ಕಾಯ್ದೆ ಜಾರಿ, ಕಾಶಿ, ಮಥುರಾ, ಅಯೋಧ್ಯೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ, ಸಂಸ್ಕೃತಕ್ಕೆ ಉತ್ತೇಜನದಂಥ ಧಾರ್ಮಿಕವಾಗಿ ಆಕರ್ಷಿಸುವ ಕೆಲಸಗಳು ಒಂದೆಡೆಯಾದರೆ, ರಾಜ್ಯದಾದ್ಯಂತ ಎಕ್ಸ್‌ಪ್ರೆಸ್‌ವೇಗಳ ಜಾಲ, ಹಲವಾರು ಜಾಗತಿಕ ಹೂಡಿಕೆದಾರರ ಶೃಂಗಸಭೆಗಳ ಆಯೋಜನೆ ಮೂಲಕವೂ ಗಮನ ಸೆಳೆದಿದೆ.
ತನ್ನ ಜಿಡಿಪಿ ಗುರಿಯನ್ನು ತಲುಪುವ ದಾರಿಯಾಗಿ ಸುಮಾರು 40 ಲಕ್ಷ ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವಗಳನ್ನು ಕೂಡ ಆದಿತ್ಯನಾಥ್ ಸರಕಾರ ಸೆಳೆದಿದೆ ಎನ್ನಲಾಗುತ್ತಿದೆ.
ಈ ರೀತಿಯಾಗಿ ಅವರು ಒಂದೆಡೆ ಸಮರ್ಥ ರಾಜಕಾರಣಿ ಎಂದು ಬಿಂಬಿಸಿಕೊಳ್ಳುತ್ತಲೇ, ಧಾರ್ಮಿಕ ನಾಯಕನಾಗಿಯೂ ಮತ್ತೊಂದೆಡೆ ಗಮನ ಸೆಳೆಯುತ್ತಾರೆ.
ಪ್ರಧಾನಿ ಮೋದಿ ನಿವೃತ್ತಿ ಬಳಿಕ ಆ ಪಟ್ಟಕ್ಕೆ ಏರುವ ಗುರಿ ಅವರದು.
ಅದಕ್ಕಾಗಿ ಕುಂಭಮೇಳವನ್ನು ಅವರು ಧಾರ್ಮಿಕ ಕಾರ್ಯಕ್ರಮ ಎನ್ನುವುದಕ್ಕಿಂತಲೂ ಹೆಚ್ಚಾಗಿ ತಮಗೆ ರಾಜಕೀಯವಾಗಿ ಲಾಭ ತರುವ ದಾರಿಯಂತೆ ಬಳಸಿಕೊಳ್ಳುತ್ತಿರುವುದು ಕೂಡ ಸ್ಪಷ್ಟ.