1983ರ ನೆಲ್ಲಿ ಹತ್ಯಾಕಾಂಡ ಮತ್ತು ಬಿಜೆಪಿಯ ಹಂತಕ ರಾಜಕಾರಣ
ಹಿಮಂತ ಬಿಸ್ವಾ ಶರ್ಮಾ, ವಾಜಪೇಯಿ, ಇಂದಿರಾ ಗಾಂಧಿ ಎಲ್ಲರೂ ರಾಜಕೀಯ ರಣಹದ್ದುಗಳೇ!
ಈಗ ಹಿಮಂತ ಬಿಸ್ವಾ 42 ವರ್ಷಗಳ ನಂತರ ಈ ವಿಚಾರವನ್ನು ಕೆದಕುತ್ತಿರುವುದರ ಹಿಂದೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಸರಿಪಡಿಸಿ ಮುಸ್ಲಿಮ್ ಬಲಿಪಶುಗಳಿಗೆ ನ್ಯಾಯವನ್ನು, ಕೊಲೆಗಡುಕರಿಗೆ ಶಿಕ್ಷೆಯನ್ನು ಕೊಡಿಸುವ ಉದ್ದೇಶವೇನೂ ಅಲ್ಲ..
ಉದಾಹರಣೆಗೆ ನೆಲ್ಲಿ ಹತ್ಯಾಕಾಂಡವಾದ 21 ವರ್ಷಗಳ ನಂತರ 2004ರಲ್ಲಿ ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ನೆಲ್ಲಿ ಹತ್ಯಾಕಾಂಡದ ಬಗ್ಗೆ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಇದೇ ಹಿಮಂತ ಬಿಸ್ವಾ ಕೂಡ ಭಾಗವಾಗಿದ್ದ ಸರಕಾರ (ಕಾಂಗ್ರೆಸ್ ಸರಕಾರ) ಹಳೆಯ ಗಾಯಗಳನ್ನು ಕೆರಳಿಸುವುದು ಕೂಡದು ಎಂದು ನಿಷೇಧಿಸಿತ್ತು. ಹಾಗಿದ್ದಲ್ಲಿ 42 ವರ್ಷಗಳ ನಂತರ ನೆಲ್ಲಿಯ ಗಾಯಗಳನ್ನು ಕೆರಳಿಸುತ್ತಿರುವುದೇಕೆ?
ಭಾಗ - 1
ಅಸ್ಸಾಮಿನಲ್ಲಿ ಶಾಸನಾ ಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ, ಉಗ್ರ ಹಿಂದುತ್ವವಾದಿ ಮತ್ತು ಪರಮ ಭ್ರಷ್ಟ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಹತ್ಯಾಕಾಂಡದ ಹಿಂದುತ್ವ ರಾಜಕಾರಣವನ್ನು ಪ್ರಾರಂಭಿಸಿದೆ. ಅದರ ಭಾಗವಾಗಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಹಾಗೂ ಕರಾಳ ಅಧ್ಯಾಯವಾಗಿರುವ ಅಸ್ಸಾಮಿನ ನೆಲ್ಲಿ ಹತ್ಯಾಕಾಂಡದ ನೆನಪುಗಳನ್ನು ಮತ್ತೊಮ್ಮೆ ಬಿಸ್ವಾ ಸಾರ್ವಜನಿಕ ಚರ್ಚೆಗೆ ತೆರೆದಿಟ್ಟಿದ್ದಾರೆ.
ಆದರೆ ಅದರ ಹಿಂದಿರುವುದು ನೆಲ್ಲಿ ಹತ್ಯಾಕಾಂಡದ ಬಗೆಗಿನ ಪಶ್ಚಾತ್ತಾಪವಲ್ಲ. ಏಕೆಂದರೆ ಬಿಸ್ವಾ ಮುಂದಿಡುತ್ತಿರುವ ಚರ್ಚೆಯಲ್ಲಿ ಹತ್ಯಾಕಾಂಡ ಬಲಿಪಶುಗಳಾದ ಬಾಂಗ್ಲಾ ಮುಸ್ಲಿಮರ ಬಗ್ಗೆ ವ್ಯಥೆಯೂ ಇಲ್ಲ. ಅದಕ್ಕೆ ಕಾರಣವಾದ ಅಸ್ಸಾಮಿನ ಚಳವಳಿಯ ಒಂದು ಧಾರೆಯಲ್ಲಿದ್ದ ಹಿಂದೂ ಕೋಮುವಾದದ ಬಗ್ಗೆ ವಿರೋಧವೂ ಇಲ್ಲ. ಇರಲು ಸಾಧ್ಯವೂ ಇಲ್ಲ. ಏಕೆಂದರೆ ಈ ಬಾರಿ ಬಿಜೆಪಿಯ ಗೆಲುವು ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ಬಿಸ್ವಾ ನೇತೃತ್ವದಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್‌ಗಿಂತ ಕ್ರೂರ ಹಾಗೂ ವಿದ್ವೇಷಕಾರಿ ಹಿಂದುತ್ವ ರಾಜಕಾರಣವನ್ನು ಆಶ್ರಯಿಸಿದೆ.
ಈ ಪೀಳಿಗೆಗೆ ಹಾಗೂ ಅಸ್ಸಾಮಿನ ರಾಜಕೀಯ ಪರಿಚಯ ಇಲ್ಲದಿರುವರಿಗೆ ಹೆಚ್ಚೆಂದರೆ ಗುಜರಾತ್ ಹತ್ಯಾಕಾಂಡ ಪರಿಚಯವಿರಬಹುದಾದರೂ ನೆಲ್ಲಿ ನೆನಪಿರುವುದು ಅಪರೂಪ. ವಾಸ್ತವದಲ್ಲಿ ಸಾವುಗಳ ಸಂಖ್ಯೆಯಲ್ಲಿ, ಭೀಕರತೆಯಲ್ಲಿ ಮತ್ತು ಬೀಭತ್ಸ ದ್ವೇಷದಲ್ಲಿ ಗುಜರಾತ್, ಸಿಖ್ ಹತ್ಯಾಕಾಂಡ ಇವೆಲ್ಲವನ್ನು ಮೀರಿಸುವ ಅತ್ಯಂತ ಕರಾಳ ಹತ್ಯಾಕಾಂಡ 1983ರ ನೆಲ್ಲಿ ಹತ್ಯಾಕಾಂಡ. ಅದು ಅರ್ಥವಾದರೆ ಬಿಜೆಪಿಯ ಇಂದಿನ ಭೀಕರ ದುರುದ್ದೇಶಗಳೂ ಅರ್ಥವಾಗುತ್ತವೆ
ನೆಲ್ಲಿ ಹತ್ಯಾಕಾಂಡಕ್ಕೆ ಕಾರಣವಾದ ಕೋಮುವಾದಿ ಸಂದರ್ಭ
ಅಸ್ಸಾಮಿನ ನೆಲ್ಲಿಯಲ್ಲಿ 3,000 ಮುಸ್ಲಿಮರ ಅಹೋರಾತ್ರಿ ಹತ್ಯಾಕಾಂಡ ನಡೆದದ್ದು 1983ರಲ್ಲಾದರೂ ಅಂಥ ರಣರಕ್ಕಸ ರಾಜಕಾರಣ ರೂಪುಗೊಂಡಿದ್ದರ ಹಿಂದೆ ಸ್ವತಂತ್ರ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಹಲವಾರು ವೈಫಲ್ಯಗಳ ಇತಿಹಾಸವಿದೆ. ಅದರ ಪ್ರಧಾನ ಹೊಣೆ ಕಾಂಗ್ರೆಸ್‌ನದ್ದೇ ಆದರೂ ಆಗಲೂ ಈಗಲೂ ಭಾರತವನ್ನು ಧರ್ಮಾತೀತ ಭಾವೈಕ್ಯ ಗಣರಾಜ್ಯವನ್ನಾಗಿ ರೂಪಿಸುವುದನ್ನು ವಿಫಲಗೊಳಿಸುತ್ತಲೇ ಬಂದಿರುವ ಹಿಂದುತ್ವವಾದಿ ಶಕ್ತಿಗಳ ಪಾತ್ರವೂ ಅಷ್ಟೆ ದೊಡ್ಡದಿದೆ.
ಭಾರತವು ವಿಭಜನೆಗೊಂಡ ನಂತರ ಇಂದಿನ ಬಂಗಾಳದ ಮುಸ್ಲಿಮ್ ಬಾಹುಳ್ಯದ ಪೂರ್ವ ಭಾಗವು ಪೂರ್ವ ಪಾಕಿಸ್ತಾನವಾಗಿ ಪಾಕಿಸ್ತಾನವನ್ನು ಸೇರಿಕೊಂಡಿತು. ನಂತರ 1971ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ಬಾಂಗ್ಲಾದೇಶವಾಯಿತು. ಆದರೆ ದೇಶವಿಭಜನೆಯೊಂದಿಗೆ ಇದ್ದಕ್ಕಿದ್ದಂತೆ ಸೃಷ್ಟಿಯಾದ ಗಡಿಯಿಂದ ಭಾರತಕ್ಕೆ ವಿದೇಶಿಯರಾಗಿಬಿಟ್ಟ ಲಕ್ಷಾಂತರ ಹಿಂದೂ ಮತ್ತು ಮುಸ್ಲಿಮ್ ಬಂಗಾಳಿಗಳು ಪೂರ್ವ ಪಾಕಿಸ್ತಾನದಿಂದ ಹೊಸ ಭಾರತದ ಗಡಿ ರಾಜ್ಯಗಳಾದ ಅಸ್ಸಾಂ ಮತ್ತು ಬಂಗಾಳ ಹಾಗೂ ತ್ರಿಪುರಾಗಳಿಗೆ ದೊಡ್ಡ ಮಟ್ಟದಲ್ಲಿ ವಲಸೆ ಬರಲಾರಂಭಿಸಿದರು.
ವಿಭಜನೆಗೆ ಮುಂಚೆ ಬ್ರಿಟಿಷರ ಆಳ್ವಿಕೆಯಲ್ಲಿ ಅಖಂಡ ಭಾರತದ ಭಾಗವೇ ಆಗಿದ್ದ ಇಂದಿನ ಬಾಂಗ್ಲಾದೇಶದ ಮೈದಾನ ಪ್ರದೇಶದ ಜಿಲ್ಲೆಗಳಲ್ಲಿ ಕೃಷಿ ಕಸುಬಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿದ್ದ ಮುಸ್ಲಿಮ್ ರೈತಾಪಿಯನ್ನು, ಮೈದಾನ ಮತ್ತು ನೀರಾವರಿ ಕೃಷಿಯ ಬಗ್ಗೆ ಹೆಚ್ಚು ಪರಿಚಿತವಲ್ಲದ ಆದಿವಾಸಿ ಅಸ್ಸಾಂ ಮತ್ತು ತ್ರಿಪುರಾದ ಮೈದಾನ ಪ್ರದೇಶಗಳಲ್ಲಿ ನೆಲೆಗೊಳಿಸಿದ್ದರು. ಹೀಗಾಗಿ ಹೊಸದಾಗಿ ಸೃಷ್ಟಿಸಿದ ಗಡಿಗಳು ರಾಜಕಾರಣದ ಬಡಿಗೆಗಳಾಗಿಬಿಟ್ಟವು. ಭಾರತದ ಸಂವಿಧಾನದಲ್ಲೂ ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬರುತ್ತಲೇ ಹೋದ ಬಾಂಗ್ಲಾ ಹಿಂದೂಗಳನ್ನು ನಿರಾಶ್ರಿತರೆಂದು ಪರಿಗಣಿಸುವ, ಪಾಕಿಸ್ತಾನದಿಂದ ಜುಲೈ 1948ರ ನಂತರ ವಲಸೆ ಬಂದವರನ್ನು ವಲಸಿಗರೆಂದು, ಆ ನಂತರದವರನ್ನು ಅಕ್ರಮ ವಲಸಿಗರೆಂದು ಕರೆಯುವ ಧೋರಣೆ ಸಾಂಸ್ಥಿಕಗೊಂಡಿತು.
1971ರಲ್ಲಿ ಪೂರ್ವ ಪಾಕಿಸ್ತಾನವು ಪಶ್ಚಿಮ ಪಾಕಿಸ್ತಾನದ ಸರ್ವಾಧಿಕಾರಕ್ಕೆ ವಿರುದ್ಧವಾಗಿ ತನ್ನ ಬಂಗಾಳಿ ಅಸ್ಮಿತೆಯನ್ನು ಆಧರಿಸಿ ಪ್ರತ್ಯೇಕ ಗೊಳ್ಳಲು ಬೃಹತ್ ಜನಾಂದೋಲನವನ್ನು ಪ್ರಾರಂಭಿಸಿತು. ಅದಕ್ಕೆ ಇಂದಿರಾ ಗಾಂಧಿ ನೇತೃತ್ವದ ಭಾರತ ಸರಕಾರ ಸಹಾಯ ಮಾಡಿ ಬಾಂಗ್ಲಾ ದೇಶದ ವಿಮೋಚನೆಯಾಯಿತು.
ಆದರೆ ಆ ಸಂದರ್ಭ ಸೃಷ್ಟಿಸಿದ ಅರಾಜಕತೆಯಿಂದ ಆತಂಕಗೊಂಡು 1971ರಲ್ಲೂ ಲಕ್ಷಾಂತರ ಮುಸ್ಲಿಮರು ಮತ್ತು ಹಿಂದೂಗಳು ಕೂಡ ಅಸ್ಸಾಂ, ತ್ರಿಪುರಾಗಳಿಗೆ ವಲಸೆ ಬಂದರು.
ಆದರೆ 1947-50ರ ವಲಸೆಯೇ ಸ್ಥಳೀಯರಲ್ಲಿ ವಲಸಿಗ ಬಾಂಗ್ಲಾ ಮತ್ತು ಹಿಂದೂಗಳ ವಿರುದ್ಧ ಅಸಮಾಧಾನ ಮತ್ತು ಆತಂಕವನ್ನು ಹುಟ್ಟಿಸಿತ್ತು. 1971ರ ನಂತರದ ಬಾಂಗ್ಲಾ ಮೂಲದ ವಲಸೆ ಅಸ್ಸಾಮಿನ ಜನಸಂಖ್ಯೆ ಸ್ವರೂಪವನ್ನು, ಭೂಮಿ ಮತ್ತಿತರ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೆಚ್ಚಿಸ ತೊಡಗಿ ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿತು ಮತ್ತು ವಲಸಿಗರ ವಿರುದ್ಧ ಸ್ಥಳೀಯರಲ್ಲಿದ್ದ ಅಸಮಾಧಾನವನ್ನು ಆಕ್ರೋಶವಾಗಿ ಪರಿವರ್ತಿಸತೊಡಗಿತ್ತು. ಅದು ದಿಲ್ಲಿಯ ವಿರುದ್ಧ ಅಸಮಾಧಾನವಾಗಿಯೂ ರೂಪಾಂತರಗೊಳ್ಳುತ್ತಿತ್ತು.
ಈ ಅಸಮಾಧಾನ ಬೃಹತ್ ಮಟ್ಟದ ವಲಸಿಗ ವಿರೋಧಿ ಜನಾಂದೋಲನವಾಗಿ ರೂಪುಗೊಂಡಿತು. 1979ರ ನಂತರ ಅದುAll Assaam Students Union- AASU ನೇತೃತ್ವದಲ್ಲಿ ತಾರಕಕ್ಕೇರಿತು. ಹಿಂಸಾತ್ಮಕವಾಯಿತು. ಈವರೆಗೆ ಅಸ್ಸಾಮಿಗೆ ವಲಸೆ ಬಂದಿರುವವರನ್ನು (ಹಿಂದೂ-ಮುಸ್ಲಿಮರಿಬ್ಬರನ್ನೂ ) ಗುರುತಿಸಿ ದೇಶದಿಂದ ಹೊರಹಾಕಬೇಕೆಂಬ ಒತ್ತಡ ಹೆಚ್ಚಾಯಿತು. ಹಾಗೆಯೇ ಅಲ್ಲಲ್ಲಿ ವಲಸಿಗ ಮುಸ್ಲಿಮರ ಮೇಲೆ ಭೌತಿಕ ದಾಳಿಗಳೂ ಪ್ರಾರಂಭವಾದವು.
ಇದರ ಜೊತೆಗೆ ದಿಲ್ಲಿ ಕೇಂದ್ರಿತ ಭಾರತವು- ಭಾರತ ರಾಷ್ಟ್ರೀಯತೆಯು ಇಡೀ ಈಶಾನ್ಯ ಭಾರತದ ಬಗ್ಗೆ ಮತ್ತು ಅಸ್ಸಾಮಿನ ಬಗ್ಗೆ ತೋರುತ್ತಿದ್ದ ವ್ಯವಸ್ಥಿತ ಆರ್ಥಿಕ ದಮನ, ರಾಜಕೀಯ ನಿರ್ಲಕ್ಷ್ಯ ಮತ್ತು ಸಾಂಸ್ಕೃತಿಕ ತಾರತಮ್ಯಗಳ ಬಗೆಗಿನ ಆಕ್ರೋಶವೂ ವಲಸಿಗ ವಿರೋಧಿ ಹೋರಾಟದಲ್ಲಿ ರಾಜಕೀಯವಾಗಿಯೂ ಹರಳುಗಟ್ಟತೊಡಗಿತು. ಇದಕ್ಕೆ United Liberation Front Of Assaam (ULFA) ರಾಜಕೀಯ ಮತ್ತು ಸೈದ್ಧಾಂತಿಕ ನೇತೃತ್ವ ನೀಡಿತು. ಅಸ್ಸಾಮಿ ಸಾರ್ವಭೌಮತೆ ಮತ್ತು ಅಸ್ಸಾಮಿ ಅಸ್ಮಿತೆ ಭಾರತೀಯ ರಾಷ್ಟ್ರೀಯತೆಯ ಜೊತೆ ಮತ್ತು ದಿಲ್ಲಿಯ ಜೊತೆ ಸಂಘರ್ಷಕ್ಕಿಳಿಯಿತು.
1980ರಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಸ್ಥಳೀಯರ ಸಕಾರಣ ಆತಂಕವನ್ನು ಮಾನ್ಯ ಮಾಡಿ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದಕ್ಕಿಂತ ಅಸ್ಸಾಮಿ ಚಳವಳಿಯಲ್ಲಿ ಒಡಕನ್ನು ಹುಟ್ಟಿಸುವ, ದಮನ ಹಾಗೂ ದಬ್ಬಾಳಿಕೆಗಳ ಮೂಲಕ ಅಸ್ಸಾಮಿಗಳ ಪ್ರಜಾತಾಂತ್ರಿಕ ಬೇಡಿಕೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಹೀಗಾಗಿಯೇ ಇಂದಿರಾ ಸರಕಾರ 1971ರ ಮಾರ್ಚ್ ನಂತರ ಭಾರತಕ್ಕೆ ಬಂದವರನ್ನು ಗುರುತಿಸಿ ಹೊರಹಾಕುವುದಾಗಿ ಕೊಟ್ಟ ಭರವಸೆ ಚಳವಳಿಗೆ ಸಮ್ಮತವಿರಲಿಲ್ಲ. ವಿಶ್ವಾಸವನ್ನೂ ಮೂಡಿಸಲಿಲ್ಲ.
ಅಸ್ಸಾಮಿ ಅಸ್ಮಿತೆಯ ಪ್ರಶ್ನೆ ಒಂದು ಪ್ರಜಾತಾಂತ್ರಿಕ ಪ್ರಶ್ನೆಯಾಗಿದ್ದು ಒಂದು ಪ್ರಜಾತಾಂತ್ರಿಕ ಸರಕಾರ ಅದಕ್ಕೆ ಪ್ರಜಾತಾಂತ್ರಿಕ ಮಾರ್ಗಗಳಿಂದ ಪ್ರಜಾತಾಂತ್ರಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿತ್ತು. ಆದರೆ ಇಂದಿರಾ ಸರಕಾರ ಹೋರಾಟವನ್ನು ಹತ್ತಿಕ್ಕಲು 1981, 82ರಲ್ಲಿ ಎರಡೆರಡು ಬಾರಿ ರಾಷ್ಟ್ರಪತಿ ಆಡಳಿತವನ್ನು ಹೇರಿತು ಹಾಗೂ ಕಾಂಗ್ರೆಸ್ ಸರಕಾರದ ಬಗ್ಗೆ ಅಪಾರ ಆವಿಶ್ವಾಸ ಮತ್ತು ಅಸಮಾಧಾನದಿಂದ ಸ್ಥಳೀಯರು ಕುದಿಯುತ್ತಿದ್ದಾಗ 1983 ಫೆಬ್ರವರಿ 14-20ಕ್ಕೆ ಏಕಾಏಕಿ ಚುನಾವಣೆ ಘೋಷಿಸಿತು.
ಇದು ಸ್ಥಳೀಯರಲ್ಲಿ ಕಾಂಗ್ರೆಸ್ ಬಗ್ಗೆ ಮತ್ತು ವಲಸಿಗರ ಬಗ್ಗೆ ಹಿಂಸಾತ್ಮಕ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.
ನೆಲ್ಲಿ ಹತ್ಯಾಕಾಂಡ
ನೆಲ್ಲಿ ಎಂಬುದು ಮಧ್ಯ ಅಸ್ಸಾಂ ನೌಗಾವ್ ಜಿಲ್ಲೆಯಲ್ಲಿರುವ ಒಂದು ಹಳ್ಳಿ. ಅಲ್ಲಿ ಮತ್ತು ಸುತ್ತಮುತ್ತಲಿನ ಏಳು ಹಳ್ಳಿಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದ್ದು 1930ರಲ್ಲೇ, ಅಂದರೆ ದೇಶ ವಿಭಜನೆ ಆಗುವ ಮುಂಚಿನಿಂದಲೂ ಮುಸ್ಲಿಮರು ನೆಲೆಸಿದ್ದರು.
ನೆಲ್ಲಿಯಲ್ಲಿ ಹತ್ಯಾಕಾಂಡ ಸಂಭವಿಸಿದ್ದು 1983ರ ಫೆಬ್ರವರಿ 18ರ ಕರಾಳ ರಾತ್ರಿಯಲ್ಲಿ. ಚುನಾವಣೆಯ ನಟ್ಟ ನಡುವೆ.
ಆ ಕರಾಳ ರಾತ್ರಿ ನೆಲ್ಲಿ ಮತ್ತು ಆಸುಪಾಸಿನ ಏಳು ಗ್ರಾಮಗಳಲ್ಲಿ ವಾಸಿಸುತ್ತಿದ್ದ 3,000ದಷ್ಟು ಬಾಂಗ್ಲಾ ಮುಸ್ಲಿಮರನ್ನು ಸ್ಥಳೀಯ ತವಾಸಿ-ಲಾಲುಂಗ್ ಸಮುದಾಯದ ನೂರಾರು ಸ್ಥಳೀಯರು 6-7 ಗಂಟೆಗಳಲ್ಲಿ ಕೊಚ್ಚಿ ಕೊಚ್ಚಿ ಕೊಂದುಹಾಕಿದ್ದರು.
ಆದರೂ ಚುನಾವಣೆ ನಡೆಯಿತು. ಸ್ಥಳೀಯರು ದೊಡ್ಡಮಟ್ಟದಲ್ಲಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಕೇವಲ ಶೇ. 30ರಷ್ಟು ಮಾತ್ರ ಮತದಾನ ನಡೆದು ಸಹಜವಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ನೆಲ್ಲಿ ಹತ್ಯಾಕಾಂಡವನ್ನು ಅಧ್ಯಯನ ಮಾಡಿ ವರದಿ ಮಾಡಲು ಕಾಂಗ್ರೆಸ್ ಸರಕಾರ ಜಸ್ಟಿಸ್ ತ್ರಿಭುವನ್ ತಿವಾರಿ ಅವರ ಆಯೋಗವನ್ನು ನೇಮಕ ಮಾಡಿತು. ಇಂದಿರಾ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಸ್ಸಾಮಿ ಜನತೆಯ ಚಳವಳಿ ವ್ಯಾಪಕವಾಗಿ ಮುಂದುವರಿದು 1985ರಲ್ಲಿ ಅಸ್ಸಾಂ ಗಣ ಪರಿಷತ್ ಸರಕಾರ ಅಧಿಕಾರಕ್ಕೆ ಬಂದಿತು. ಆ ನಂತರದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ 2016ರಿಂದ ಬಿಜೆಪಿ ಸರಕಾರ ಅಸ್ಸಾಮಿನಲ್ಲಿ ಅಧಿಕಾರದಲ್ಲಿದೆ. ಆದರೂ ಈವರೆಗೆ ಯಾವ ಸರಕಾರಗಳೂ ತಿವಾರಿ ವರದಿಯನ್ನು ಬಹಿರಂಗ ಪಡಿಸಿರಲಿಲ್ಲ. ಆದರೆ ಈಗ ಚುನಾವಣೆಯು ಮುಂದಿರುವಾಗ ಬಿಜೆಪಿಯ ಹಿಮಂತ ಬಿಸ್ವಾ ಸರಕಾರ ಅದನ್ನು ಬಹಿರಂಗ ಪಡಿಸಲು ಹೊರಟಿದೆ.
ಅದರ ಹಿಂದಿರುವ ಕೋಮುವಾದಿ ಕಾರಣಗಳನ್ನು ಅರಿಯಬೇಕೆಂದರೆ ನೆಲ್ಲಿ ಹತ್ಯಾಕಾಂಡ ಮತ್ತು ಆ ನಂತರ ಅಸ್ಸಾಮಿ ಚಳವಳಿಯಲ್ಲಿ ಕೋಮುವಾದದ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ವಲಸಿಗರ ರಕ್ತ ಬಲಿಗೆ ಕರೆ ನೀಡಿದ್ದ ಮಾಡರೇಟ್ ವಾಜಪೇಯಿ!
ಅಸ್ಸಾಮಿನ ವಲಸೆ ವಿರೋಧಿ ಚಳವಳಿಯಲ್ಲಿ ಮೊದಲು ಗುಪ್ತವಾಗಿ ಮತ್ತು ಈಗ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವ ಹಿಂದೂ ಕೋಮುವಾದದ ಉದಾಹರಣೆಗಳಿವು.
ಇದು ಬಿಜೆಪಿ ಇಷ್ಟುಗಟ್ಟಿಯಾಗಿರದ ಸಂದರ್ಭದಲ್ಲೂ, ಅಂದಿನ ಬಿಜೆಪಿ ಲಿಬರಲ್-ಮಾಡರೇಟ್ ಮುಖವಾಡ ತೊಟ್ಟು ದೇಶಕ್ಕೆ ಮೋಸ ಮಾಡುತ್ತಿದ್ದ ಕಾಲದಿಂದಲೂ ಅಂತರ್ಗಾಮಿನಿಯಾಗಿ ಹರಿದುಬರುತ್ತಲೇ ಇದೆ.
ಅದಕ್ಕೆ 1983ರ ಅಸ್ಸಾಮಿನ ಚುನಾವಣಾ ಪ್ರಚಾರದಲ್ಲಿ ವಾಜಪೇಯಿ ಮಾಡಿದ ಭಾಷಣ ಸಾಕ್ಷಿ!
1983ರಲ್ಲಿ ಬಿಜೆಪಿ ಇಷ್ಟು ಗಟ್ಟಿಯಾಗಿರಲಿಲ್ಲ. 1980ರಲ್ಲಿ ಜನತಾ ಪಕ್ಷವೆಂಬ ಕಾಂಗ್ರೆಸ್ ವಿರೋಧಿ ಒಕ್ಕೂಟದಿಂದ ಹೊರಬಂದು ತನ್ನ ಮೂಲ ಭಾರತೀಯ ಜನಸಂಘ ಎಂಬ ಪಕ್ಷವನ್ನು ಭಾರತೀಯ ಜನತಾ ಪಕ್ಷವೆಂದು ಮರುನಾಮಕರಣ ಮಾಡಿಕೊಂಡಿತ್ತು ಹಾಗೂ ಗಾಂಧಿಯನ್ ಸಮಾಜವಾದ ತನ್ನ ಪ್ರಣಾಲಿಕೆ ಎಂಬ ಹುಸಿ ಪ್ರತಿಪಾದನೆಯಲ್ಲಿ ತೊಡಗಿತ್ತು.
1983ರಲ್ಲಿ ಅಸ್ಸಾಮಿನ ಚುನಾವಣೆಗೆ ಮುಂಚೆ ವಾಜಪೇಯಿ ಪ್ರಚಾರಕ್ಕೆ ಹೋಗಿದ್ದರು. ಸಾಮಾನ್ಯವಾಗಿ ವಾಜಪೇಯಿ ಬಗ್ಗೆ ಅತ್ಯಂತ ಸುಸಂಸ್ಕೃತ, ಕವಿ ಮನಸ್ಸಿಗ, ಅಡ್ವಾಣಿಯಷ್ಟು ಉಗ್ರನಲ್ಲ, ಮಾಡರೇಟ್ ಎಂಬ ಅಭಿಪ್ರಾಯವನ್ನು ಮಾಧ್ಯಮಗಳು ಬಿತ್ತಿವೆ. ಆದರೆ ಆಗ ಅಸ್ಸಾಮಿನಲ್ಲಿ ವಲಸಿಗರ ವಿರುದ್ಧ ಬೃಹತ್ ಜನಾಂದೋಲನ ಪ್ರಾರಂಭವಾಗಿತ್ತು.
ಆ ಆಕ್ರೋಶವನ್ನು ಬಳಸಿಕೊಂಡು ವಾಜಪೇಯಿಯವರು ಆಗ ಅಲ್ಲಿ ಮಾಡಿದ ಭಾಷಣದ ತುಣಕಿದು:
‘‘Foreigners have come here; and the Government does nothing.What if they had come into Punjab instead, people would have chopped them into pieces and thrown them away.’’
(https://archive.org/details/eparlib.nic.in.5985/page/n7/mode/2up?utm_source=chatgpt.com)
(‘‘..ಅಸ್ಸಾಮಿಗೆ ವಿದೇಶಿಯರು ಬಂದಿದ್ದಾರೆ, ಆದರೆ ಸರಕಾರ ಏನೂ ಮಾಡುವುದಿಲ್ಲ. ಅಸ್ಸಾಮಿನ ಬದಲಿಗೆ, ವಲಸಿಗರು ಪಂಜಾಬಿಗೆ ಬಂದಿದ್ದರೆ ಪಂಜಾಬಿಗಳು ಅವರನ್ನು ಕಡಿದು ಬೀದಿಯಲ್ಲಿ ಎಸೆದಿರುತ್ತಿದ್ದರು..’’ )
ಇದನ್ನು 1996ರಲ್ಲಿ ಮೇ 26ರಂದು 13 ದಿನಗಳ ತನ್ನ ಸರಕಾರದ ವಿರುದ್ಧ ಪ್ರಸ್ತಾವಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ವಿರುದ್ಧ ವಾಜಪೇಯಿಯವರು ಮಾಡಿದ್ದ ಲಿಬರಲ್ ಡೆಮಾಕ್ರಟಿಕ್ ಮುಖವಾಡದ ಭಾಷಣಕ್ಕೆ ಪ್ರತಿಕ್ರಿಯಿಸುತ್ತಾ ಆಗಿನ ಸಿಪಿಐ ಪಕ್ಷದ ನಾಯಕ ಇಂದ್ರಜಿತ್ ಗುಪ್ತಾ ಅವರು ಉಲ್ಲೇಖಿಸುತ್ತಾರೆ ಮತ್ತು ಬಿಜೆಪಿಯ ಲಿಬರಲ್ ಮುಖವಾಡವನ್ನು ಕಿತ್ತು ಅದರ ಅಸಲಿ ಹಿಂದುತ್ವವಾದಿ ಮುಖವನ್ನು ಬಿಚ್ಚಿಡುತ್ತಾರೆ.
ವಾಸ್ತವವಾಗಿ ವಾಜಪೇಯಿಯವರು ಈ ಭಾಷಣ ಮಾಡಿದ ಕೆಲವೇ ದಿನಗಳ ತರುವಾಯ ನೆಲ್ಲಿ ಹತ್ಯಾಕಾಂಡ ಸಂಭವಿಸಿತು.
ನೆಲ್ಲಿ ಹತ್ಯಾಕಾಂಡದ ಮರು ವರ್ಷ 1984ರಲ್ಲಿ ದಿಲ್ಲಿ ಮತ್ತು ಆಸುಪಾಸಿನಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಂತೂ ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ವಿರೋಧಿ ಸಿಖ್ಖರ ಹತ್ಯಾಕಾಂಡಕ್ಕೆ ಕರೆ ಕೊಟ್ಟಿದ್ದು ಮಾತ್ರವಲ್ಲದೆ ನೇರವಾಗಿ ಭಾಗವಹಿಸಿತ್ತು.
ಹೀಗಿರುವಾಗ ನೆಲ್ಲಿ ಹತ್ಯಾಕಾಂಡವನ್ನು ಚುನಾವಣೆಯ ಅಜೆಂಡಾ ಮಾಡುತ್ತಿರುವ ಬಿಸ್ವಾರ ಬಿಜೆಪಿಯ ಉದ್ದೇಶಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.
ಏಕೆಂದರೆ ಈಗ ಹಿಮಂತ ಬಿಸ್ವಾ 42 ವರ್ಷಗಳ ನಂತರ ಈ ವಿಚಾರವನ್ನು ಕೆದಕುತ್ತಿರುವುದರ ಹಿಂದೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಸರಿಪಡಿಸಿ ಮುಸ್ಲಿಮ್ ಬಲಿಪಶುಗಳಿಗೆ ನ್ಯಾಯವನ್ನು, ಕೊಲೆಗಡುಕರಿಗೆ ಶಿಕ್ಷೆಯನ್ನು ಕೊಡಿಸುವ ಉದ್ದೇಶವೇನೂ ಅಲ್ಲ..
ಉದಾಹರಣೆಗೆ ನೆಲ್ಲಿ ಹತ್ಯಾಕಾಂಡವಾದ 21 ವರ್ಷಗಳ ನಂತರ 2004ರಲ್ಲಿ ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ನೆಲ್ಲಿ ಹತ್ಯಾಕಾಂಡದ ಬಗ್ಗೆ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಇದೇ ಹಿಮಂತ ಬಿಸ್ವಾ ಕೂಡ ಭಾಗವಾಗಿದ್ದ ಸರಕಾರ (ಕಾಂಗ್ರೆಸ್ ಸರಕಾರ) ಹಳೆಯ ಗಾಯಗಳನ್ನು ಕೆರಳಿಸುವುದು ಕೂಡದು ಎಂದು ನಿಷೇಧಿಸಿತ್ತು. ಹಾಗಿದ್ದಲ್ಲಿ 42 ವರ್ಷಗಳ ನಂತರ ನೆಲ್ಲಿಯ ಗಾಯಗಳನ್ನು ಕೆರಳಿಸುತ್ತಿರುವುದೇಕೆ?
(https://thewire.in/communalism/a-forgotten-massacre-resurfaces-its-warnings-echo-is-anyone-listening)