1983ರ ನೆಲ್ಲಿ ಹತ್ಯಾಕಾಂಡ ಮತ್ತು ಬಿಜೆಪಿಯ ಹಂತಕ ರಾಜಕಾರಣ
ಹಿಮಂತ ಬಿಸ್ವಾ ಶರ್ಮಾ, ವಾಜಪೇಯಿ, ಇಂದಿರಾ ಗಾಂಧಿ ಎಲ್ಲರೂ ರಾಜಕೀಯ ರಣಹದ್ದುಗಳೇ!
ಭಾಗ - 2
‘ತಿವಾರಿ’ ವರದಿಯ ಬಹಿರಂಗ ಪಡಿಸುವ ಉದ್ದೇಶ
ಹಾಲಿ ನೆಲ್ಲಿ ಹತ್ಯಾಕಾಂಡದ ಮರು ನೆನಪಿಸುವ ಹಿಮಂತ ಬಿಸ್ವಾ ಪ್ರಚಾರದ ಹಿಂದಿರುವ ಏಕಮಾತ್ರ ಉದ್ದೇಶವೆಂದರೆ: ಆಗ ಅಧಿಕಾರದಲ್ಲಿದ್ದ ಹಾಗೂ ಈಗ ನಿಷ್ಪಕ್ಷ ಚುನಾವಣೆ ನಡೆದರೆ ಅಧಿಕಾರಕ್ಕೆ ಬರಬಲ್ಲ ಸಾಧ್ಯವಿರುವ ಕಾಂಗ್ರೆಸನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು.
ಏಕೆಂದರೆ ನೆಲ್ಲಿ ಹತ್ಯಾಕಾಂಡ ನಡೆದು 42 ವರ್ಷಗಳಾದ ನಂತರ ಬಿಸ್ವಾ ಸರಕಾರ ಆ ಬಗ್ಗೆ ಅಧಿಕೃತ ವಿಚಾರಣಾ ಅಯೋಗವಾದ ‘ತಿವಾರಿ’ ವರದಿಯನ್ನು ಮತ್ತು ಅನಧಿಕೃತವಾದ ‘ಮೆಹ್ತಾ’ ವರದಿಗಳೆರಡನ್ನು ಸಾರ್ವಜನಿಕಗೊಳಿಸಿದೆ.
ತಿವಾರಿ ವರದಿ ನೆಲ್ಲಿ ಹತ್ಯಾಕಾಂಡಕ್ಕೂ, ಚುನಾವಣೆಗೂ ಸಂಬಂಧವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರೆ, ಮೆಹ್ತಾ ಆಯೋಗ ಚುನಾವಣೆಗೂ, ಇಂದಿರಾ ಸರಕಾರಕ್ಕೂ, ನೆಲ್ಲಿ ಹತ್ಯಾಕಾಂಡದ ಸಂದರ್ಭಕ್ಕೂ ನೇರ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟಿದೆ.
ಹೀಗಾಗಿ ವರದಿಗಳನ್ನು ಸಾರ್ವಜನಿಕಗೊಳಿಸಿದ ಅಸಲಿ ಉದ್ದೇಶ ನೆಲ್ಲಿಯ ಗಾಯಗಳನ್ನು ಮತ್ತೆ ಕೆರೆದು ಕೀವುಗಟ್ಟಿಸುವುದು ಮತ್ತು ಆಗಿನ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ದುರುದ್ದೇಶಗಳಿಗಾಗಿ ನೆಲ್ಲಿ ಹತ್ಯಾಕಾಂಡವನ್ನು ಬಳಕೆ ಮಾಡಿಕೊಂಡಿತು ಎಂದು ಕಾಂಗ್ರೆಸ್ ಪಕ್ಷವನ್ನು ದೂರುವುದು.
ಆದರೆ ಮತ್ತೊಂದು ವಾಸ್ತವವೆಂದರೆ:
ಕಾಂಗ್ರೆಸ್ ಮೇಲೆ ಈ ಆರೋಪ ಕೇವಲ ಬಿಜೆಪಿ ಮಾಡುತ್ತಿರುವುದಲ್ಲ. ಇಡೀ ಅಸ್ಸಾಂ ಅಕ್ರಮ ವಲಸಿಗರ ವಿರೋಧಿ ಚಳವಳಿಯಲ್ಲಿ ಬೇಯುತ್ತಿದ್ದಾಗ, ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ ಚುನಾವಣೆಯನ್ನು ಹೇರಿದ್ದೇಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಈವರೆಗೆ ಸಮಾಧಾನಕರ ಉತ್ತರ ಕೊಟ್ಟಿಲ್ಲ, ಬದಲಿಗೆ ನೆಲ್ಲಿ ಹತ್ಯಾಕಾಂಡದಲ್ಲಿ ಮುಸ್ಲಿಮರನ್ನು ಕೊಂದ ಸ್ಥಳೀಯ ಅಪರಾಧಿಗಳ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳದೆ ಚುನಾವಣಾ ಲಾಭವನ್ನು ಪಡೆದುಕೊಂಡಿದ್ದು ಕೂಡ ಕಾಂಗ್ರೆಸ್‌ನ ಮೃದು ಕೋಮುವಾದಿ ಅವಕಾಶವಾದಿ ತನದ ದ್ಯೋತಕವೇ ಆಗಿದೆ.
ನೂರಾರು ನೆಲ್ಲಿಗಳ ಸೃಷ್ಟಿಯ ಎಚ್ಚರಿಕೆಯೇ?
ವಾಸ್ತವದಲ್ಲಿ ಇದರ ಹಿಂದೆ ಇರುವುದು ಕೇವಲ ಕಾಂಗ್ರೆಸನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಚುನಾವಣಾ ಉದ್ದೇಶ ಮಾತ್ರವಲ್ಲ. ಮತ್ತೆ ನೂರಾರು ನೆಲ್ಲಿಗಳನ್ನು ಸೃಷ್ಟಿಸಬಲ್ಲವೆಂಬ ಸಂದೇಶವೂ ಇದೆ!
ಉದಾಹರಣೆಗೆ ಅಸ್ಸಾಮಿನಲ್ಲಿ ಬಹುಸಂಖ್ಯಾತ ಮುಸ್ಲಿಮರಿಗೆ ನಾಗರಿಕತ್ವ ನಿರಾಕರಿಸಲೆಂದೇ ಶುರುವಾದ ಎನ್‌ಆರ್‌ಸಿಯಲ್ಲಿ ಅಂತಿಮವಾಗಿ ನಾಗರಿಕತ್ವ ಸಾಬೀತಾಗದ 19 ಲಕ್ಷ ಜನರಲ್ಲಿ 13 ಲಕ್ಷ ಜನರು ಹಿಂದೂಗಳೇ ಆಗಿದ್ದರಿಂದ ಹಿಮಂತ್ ಬಿಸ್ವಾ (ಈತ 2015ರ ತನಕ ಅಸ್ಸಾಂ ಕಾಂಗ್ರೆಸ್‌ನ ನಾಯಕ ಮತ್ತು ಮಂತ್ರಿ ಎಲ್ಲಾ ಆಗಿದ್ದರು) ಆ ಎನ್‌ಆರ್‌ಸಿಯನ್ನೇ ಕೈಬಿಟ್ಟ. ಈಗ ದೇಶಾದ್ಯಂತ ನಾಗರಿಕರಲ್ಲದ ವಲಸಿಗರನ್ನು ಪತ್ತೆ ಮಾಡುವ ಉದ್ದೇಶದಿಂದ ಎಂದು ಪ್ರಾರಂಭಗೊಂಡಿರುವ ಎಸ್‌ಐಆರ್ ಅನ್ನು ಅಸ್ಸಾಮಿನಲ್ಲಿ ಮಾತ್ರ ಮಾಡುತ್ತಿಲ್ಲ. ಕಾರಣ ಸ್ಪಷ್ಟ. ಅಲ್ಲಿ ಬಾಂಗ್ಲಾ ಹಿಂದೂಗಳೂ ಅಕ್ರಮ ವಲಸಿಗರಾಗಿದ್ದಾರೆ. ಮತ್ತು ಅವರು ಅಸ್ಸಾಮಿನ ಬಿಜೆಪಿಯ ಸಾಮಾಜಿಕ ನೆಲೆ ಕೂಡಾ ಆಗಿದ್ದಾರೆ.
ಅಸ್ಸಾಮಿನ ವಲಸೆ ವಿರೋಧಿ ಚಳವಳಿಯಲ್ಲಿ ಮೊದಲು ಗುಪ್ತವಾಗಿ ಮತ್ತು ಈಗ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವ ಹಿಂದೂ ಕೋಮುವಾದದ ಉದಾಹರಣೆಗಳಿವು. ಇದೀಗ ಮುಸ್ಲಿಮರ ಸಾಮೂಹಿಕ ಕಗ್ಗೊಲೆ ಅಥವಾ ಸಾಮೂಹಿಕ ನಾಗರಿಕತ್ವ ನಿರಾಕರಣೆಯ ಮೂಲಕ ಹಿಮಂತ ಬಿಸ್ವಾ ನೇತೃತ್ವದ ಬಿಜೆಪಿ ಈಗಾಗಲೇ ಅಸ್ಸಾಮಿನಲ್ಲಿ ನೂರಾರು ನೆಲ್ಲಿಗಳನ್ನು ಸೃಷ್ಟಿಸುವ ರಾಜಕೀಯ ಸಂದರ್ಭವನ್ನು ಸೃಷ್ಟಿಸಿದೆ. ಅದಕ್ಕಾಗಿಯೇ ಹಿಮಂತ ಬಿಸ್ವಾ ಮತ್ತೊಮ್ಮೆ ನೆಲ್ಲಿಯನ್ನು ನೆನಪಿಸುತ್ತಿದ್ದಾರೆ.
ನೆಲ್ಲಿಯ ಪಾಠ ಕಲಿತಿದ್ದರೆ..
1983 ನೆಲ್ಲಿ ಹತ್ಯಾಕಾಂಡವನ್ನು ಪ್ರಚೋಧಿಸಿದ ನೈಜ ಉಗ್ರರಿಗೆ ಸರಿಯಾದ ಶಿಕ್ಷೆಯಾಗದಿದ್ದರಿಂದಲೇ 1984ರಲ್ಲಿ ಸಿಖ್ ಹತ್ಯಾಕಾಂಡ ನಡೆಯಿತು (ಸಿಖ್ ಹತ್ಯಾಕಾಂಡದ ಪ್ರಧಾನ ಹಂತಕರು ಕಾಂಗ್ರೆಸಿಗರು. ಆದರೆ ಅಷ್ಟೇ ಮುಖ್ಯವಾದ ಪಾತ್ರ ವಹಿಸಿದ್ದು ಆರೆಸ್ಸೆಸಿಗರು).
1984ರ ಸಿಖ್ ಹತ್ಯಾಕಾಂಡದ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲಿಲ್ಲವಾದ್ದರಿಂದಲೇ 2002ರಲ್ಲಿ ಗುಜರಾತ್ ಹತ್ಯಾಕಾಂಡವಾಯಿತು.
2013ರ ಮುಝಫ್ಫರ್ ನಗರ್ ಹತ್ಯಾಕಾಂಡ, 2015ರ ನಂತರ ಮುಸ್ಲಿಮರ ಮೇಲೆ ಸುಳ್ಳು ನೆಪಗಳ ಮೇಲೆ ನಿರಂತರ ಲಿಂಚಿಂಗ್, 2020ರ ದಿಲ್ಲಿ ಹತ್ಯಾಕಾಂಡಗಳು ನಡೆದವು. ನಡೆಯುತ್ತಿವೆ.
ವ್ಯತ್ಯಾಸ ಇಷ್ಟೆ.
ವಾಜಪೇಯಿ ಕಾಲಘಟ್ಟದಲ್ಲಿ ವಾಜಪೇಯಿಯವರಿಗೆ ಆಗಾಗ ಮಾಡರೇಟ್ ಮುಖವಾಡ ಹಾಕುವ ಅಗತ್ಯ ಬೀಳುತ್ತಿತ್ತು.
ಈಗ ಮೋದಿಗೆ ಆ ಅಗತ್ಯವೇ ಇಲ್ಲ. ಏಕೆಂದರೆ ನೆಲ್ಲಿ ಸಂದರ್ಭದಲ್ಲಿ ವಾಜಪೇಯಿ ನೀಡಿದ ಹೇಳಿಕೆಯಲ್ಲಿ ಈಗಿನ ಹಿಂದುತ್ವವಾದಿ ಹಿಂದೂ ಸಮಾಜಕ್ಕೆ ಯಾವುದೇ ತಪ್ಪು ಕೂಡ ಕಾಣದಿರಬಹುದು. ಅಷ್ಟರ ಮಟ್ಟಿಗೆ ಸಮಾಜ ಧ್ರುವೀಕರಣಗೊಂಡಿದೆ. ದ್ವೇಷವನ್ನು ಉಸಿರಾಡುತ್ತಿದೆ.
ಇದಕ್ಕೆ ಬಿಜೆಪಿಯೇ ಸಂಘಿ ಫ್ಯಾಶಿಸ್ಟರೇ ಪ್ರಧಾನ ಕಾರಣ. ಆದರೆ ಈ ಬೆಳವಣಿಗೆಗಳಿಗೆ ಕಾಂಗ್ರೆಸ್‌ನ ಅವಕಾಶವಾದಿ-ಅಧಿಕಾರದಾಹಿ-ಮೃದು ಹಿಂದುತ್ವವಾದಿ ರಾಜಕೀಯ ಮತ್ತು ಫ್ಯಾಶಿಸ್ಟರ ಜೊತೆಗಿರುವ ವರ್ಗ ಸಾಮರಸ್ಯದ ಕೊಡುಗೆಗಳೂ ಕೂಡ ಕಾರಣ.
ಸ್ವತಂತ್ರ ಭಾರತದ ಅತಿದೊಡ್ಡ ಹತ್ಯಾಕಾಂಡ ನೆಲ್ಲಿ ಹತ್ಯಾಕಾಂಡ. ಆ ಮರುವರ್ಷವೇ ನಡೆದದ್ದು ಸಿಖ್ ಹತ್ಯಾಕಾಂಡ. ಎರಡಕ್ಕೂ ಕಾಂಗ್ರೆಸ್‌ನ ಸರ್ವಾಧಿಕಾರ ಹಾಗೂ ಭಾರತೀಯ ರಾಷ್ಟ್ರೀಯತೆಯ ಅಪ್ರಜಾತಾಂತ್ರಿಕ ವ್ಯಾಖ್ಯಾನ ಮತ್ತು ಆಚರಣೆಗಳೇ ಪ್ರಧಾನ ಕಾರಣ. ಆದರೆ ಭಾರತ ರಾಷ್ಟ್ರೀಯತೆ ರೂಪುಗೊಳ್ಳುವುದರಲ್ಲೇ ಇದ್ದ ಈ ಅಪ್ರಜಾತಾಂತ್ರಿಕತೆಯನ್ನು ಆಧರಿಸಿಯೇ ಸಂಘಿಗಳ ಹಿಂದುತ್ವ ರಾಷ್ಟ್ರೀಯತೆಯೂ ತಾವು ಪಡೆದುಕೊಂಡಿತು. ‘ಭಾರತೀಯ’ ಎಂಬುದನ್ನು ‘ಹಿಂದೂ’ ಎಂದು ಸುಲಭವಾಗಿ ತಪ್ಪು ವ್ಯಾಖ್ಯಾನ ಮಾಡಿತು.
ಹೀಗಾಗಿಯೇ ಕಾಂಗ್ರೆಸ್ ಕಾಲದಲ್ಲಿ ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಕಾಶ್ಮೀರಿಗಳ ಅಸ್ಮಿತೆಯನ್ನು ‘ಭಾರತೀಯ’ ಸೈನ್ಯ ದಮನಿಸಿದರೆ, ಮೋದಿ ಕಾಲದಲ್ಲಿ ಭಾರತೀಯ ಜೊತೆಗೆ ಹಿಂದೂ ಸೈನ್ಯವೂ ಸೇರಿಕೊಂಡಿದೆ. ರಾಷ್ಟ್ರೀಯತೆಗಳ ಸಮಸ್ಯೆಯನ್ನು ಪ್ರಜಾತಾಂತ್ರಿಕವಾಗಿ ನಿರ್ವಹಣೆ ಮಾಡಿದ್ದರೆ ಕೋಮುವಾದ ಹುಟ್ಟುತ್ತಲೇ ಇರಲಿಲ್ಲ. ಇಡಿ ಭಾರತವೇ ನೆಲ್ಲಿಗಳ ಶ್ಮಶಾನ ಭೂಮಿಯಾಗುವ ಸಂದರ್ಭ ಬರುತ್ತಿರಲಿಲ್ಲ.
ಈಗಲಾದರೂ ಪರಿಹಾರ ಅದೇ. ‘ಭಾರತ ಮತ್ತು ದಿಲ್ಲಿ’ ದುರಹಂಕಾರ ಮತ್ತು ಸರ್ವಾಧಿಕಾರ ತೊರೆದು ಭಾರತವನ್ನು ಅಸ್ಸಾಂ, ಕಾಶ್ಮೀರ, ಮಣಿಪುರ, ಕನ್ನಡ, ತಮಿಳು ಇನ್ನಿತ್ಯಾದಿ ರಾಷ್ಟ್ರೀಯತೆಗಳ ಸರ್ವ ಸಮಾನ ಒಕ್ಕೂಟವಾಗಿ ರೂಪಿಸುವುದು.