×
Ad

ಬಕ್ರೀದ್: ತ್ಯಾಗ ಬಲಿದಾನಗಳ ಚರಿತ್ರೆಯ ಸ್ಮರಣೆ

Update: 2025-06-07 06:45 IST

ಇಬ್ರಾಹೀಮರು ಬೆಟ್ಟದ ಮೇಲೆ ಮಗುವನ್ನು ಮಲಗಿಸಿ ಹರಿತವಾದ ಕತ್ತಿಯನ್ನು ಕೊರಳಿಗಿಡಬೇಕಾದರೆ ಕತ್ತಿ ಚಲಿಸುವುದೇ ಇಲ್ಲ. ಆಗ ದೇವದೂತ ಜಿಬ್ರೀಲ್ (ಅ) ಪ್ರತ್ಯಕ್ಷರಾಗಿ ‘‘ಇಬ್ರಾಹೀಮರೇ ನಿಮ್ಮ ವಚನಬದ್ಧತೆಯಿಂದ ಅಲ್ಲಾಹನು ಪ್ರಸನ್ನನಾಗಿದ್ದಾನೆ. ಮಗನನ್ನು ಬಲಿ ಕೊಡುವ ಅಗತ್ಯವಿಲ್ಲ. ಬದಲಿಗೆ ಆಡನ್ನು ಬಲಿಯರ್ಪಿಸಿ’’ ಎನ್ನುತ್ತಾರೆ.

ವಾಸ್ತವದಲ್ಲಿ ಅಲ್ಲಾಹನು ಮಾನವ ಬಲಿಯನ್ನು ಒಪ್ಪುವುದೇ ಇಲ್ಲ ಎಂಬ ಪರಮ ಸತ್ಯವನ್ನು ಈ ಮೂಲಕ ಮನುಕುಲಕ್ಕೆ ಸಾರಲಾಗುತ್ತದೆ.

ಹಾಜಿರಾ ಬೀವಿಯ ಸಹನೆ ಮತ್ತು ತ್ಯಾಗ, ಇಬ್ರಾಹೀಮರ ವಚನ ಬದ್ಧತೆ, ಬಾಲಕ ಇಸ್ಮಾಯೀಲರ ದೇವನಿಷ್ಠೆ ಮತ್ತು ಧೈರ್ಯದ ಸ್ಮರಣೆಯಾಗಿದೆ ಈದುಲ್ ಅಝ್ಹಾ.

ಮುಸ್ಲಿಮ್ ಸಮುದಾಯಕ್ಕೆ ಆಚರಿಸಲೆಂದು ಎರಡು ಹಬ್ಬಗಳನ್ನು ನಿಗದಿಗೊಳಿಸಲಾಗಿದೆ.

ಮೊದಲನೆಯದ್ದು ಹಿಜಿರಾ ಕ್ಯಾಲೆಂಡರ್ನ ಹತ್ತನೇ ತಿಂಗಳಾದ ಶವ್ವಾಲ್ ತಿಂಗಳ ಮೊದಲ ದಿನ. ಒಂದು ತಿಂಗಳ ಕಡ್ಡಾಯ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್. ಎರಡನೆಯದು ಹಿಜಿರಾ ಕ್ಯಾಲೆಂಡರಿನ ಹನ್ನೆರಡನೆಯ ತಿಂಗಳ ಹತ್ತನೇ ದಿನಾಂಕದಂದು ಬರುವ ಈದುಲ್

ಅಝ್ಹಾ. ಇದನ್ನು ಉಪ ಖಂಡದ ಭಾಷೆಯಲ್ಲಿ ಬಕ್ರೀದ್ ಎನ್ನುತ್ತೇವೆ. ಅಝ್ಹಾ ಎಂದರೆ ಪ್ರಾಣಿಗಳಾದ ಆಡು, ಒಂಟೆ ಮತ್ತು ಹಸುಗಳನ್ನು ಮಾಂಸ ಮಾಡಿ ಸಮಾಜದ ಬಡ ಬಗ್ಗರಿಗೆ ಹಂಚುವುದು. ಈ ಬಕ್ರೀದ್ ಬಕ್ರೀ, ಬಕ್ರಾದಿಂದ ಹುಟ್ಟಿದೆ. ಉರ್ದುವಿನಲ್ಲಿ ಬಕ್ರಿ, ಬಕ್ರಾ ಎಂದರೆ ಆಡು, ಮೇಕೆ, ಕುರಿ ಇವಷ್ಟೇ. ಒಟ್ಟಿನಲ್ಲಿ ಬಕ್ರೀದ್ ಎಂಬ ಪದ ಬಲಿ ನೀಡುವ ಪ್ರಾಣಿಗಳನ್ನು ಸಂಕೇತಿಸುತ್ತದೆ.

ಇಸ್ಲಾಮಿನ ಐದು ಮೂಲಭೂತ ಕರ್ಮಗಳಲ್ಲಿ ಕೊನೆಯದ್ದು ಹಜ್. ಈ ಹಜ್ ಎಲ್ಲರಿಗೂ ಕಡ್ಡಾಯವಲ್ಲ. ನಮ್ಮಲ್ಲಿ ಜೀವನದಲ್ಲೊಮ್ಮೆ ಹಜ್ ಮಾಡಿದವರಿಗಿಂತ ಮಾಡದವರೇ ಹೆಚ್ಚು. ಯಾಕೆಂದರೆ ಹಜ್ ಮಾಡಲು ಆರ್ಥಿಕ ಮತ್ತು ದೈಹಿಕ (ಆರೋಗ್ಯ) ಸಾಮರ್ಥ್ಯವಿರಬೇಕು. ಹಾಗಿರುವುದರಿಂದ ಹಜ್ನಿಂದ ಆರ್ಥಿಕ ಮತ್ತು ದೈಹಿಕ ಸಾಮರ್ಥ್ಯ ಇಲ್ಲದವರಿಗೆ ವಿನಾಯಿತಿ ನೀಡಲಾಗಿದೆ.

ಹಜ್ ಎಂಬ ಕರ್ಮ ಪ್ರವಾದಿ ಮುಹಮ್ಮದ್(ಸ)ರಿಂದ ಆರಂಭವಾದದ್ದೇನಲ್ಲ. ಮನುಕುಲದ ತಂದೆ ಪ್ರವಾದಿ ಆದಮ್(ಅ)ರಿಂದ ಆರಂಭವಾದ ಹಜ್ ಎಂಬ ಆರಾಧನೆ ಪ್ರವಾದಿ ನೂಹ್ (ಅ)ರ ಕಾಲಕ್ಕೆ ನಿಂತು ಹೋಯಿತು. ನೂಹ್ (ಅ) ಕಾಲದಲ್ಲಿ ಇತಿಹಾಸ ಮತ್ತು ವರ್ತಮಾನದಲ್ಲಿ ಜಗತ್ತು ಕಂಡು ಕೇಳರಿಯದ ಬೃಹತ್ ಪ್ರವಾಹ ಬಂದಿತ್ತು. ಆ ಪ್ರವಾಹಕ್ಕೆ ಹಜ್ ಕರ್ಮದ ಪ್ರಧಾನ ಕೇಂದ್ರವಾಗಿದ್ದ ಪವಿತ್ರ ಕಅಬಾಲಯ ನಶಿಸಿ ಹೋಗಿತ್ತು. ಆ ಬಳಿಕ ಪವಿತ್ರ ಕಅಬಾಲಯವನ್ನು ಇಂದಿಗೆ ಸರಿ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಪ್ರವಾದಿ ಇಸ್ಮಾಯೀಲ್ (ಅ) ಸೇರಿ ಮರು ನಿರ್ಮಾಣಗೊಳಿಸಿದರು.

ಪ್ರವಾದಿ ಇಬ್ರಾಹೀಮರಿಗೆ ಎಂಭತ್ತರ ಹರೆಯದವರೆಗೂ ಮಕ್ಕಳಾಗಿರಲಿಲ್ಲ. ಇಬ್ರಾಹೀಮರು ಸದಾ ‘‘ಅಲ್ಲಾಹನೇ ನೀನು ನನಗೊಂದು ಮಗು ಕರುಣಿಸಿದರೆ ಆ ಮಗುವನ್ನು ನಿನ್ನ ಮಾರ್ಗದಲ್ಲಿ ಬಲಿಯರ್ಪಿಸುವೆೆ’’ ಎಂದು ಪ್ರಾರ್ಥಿಸುತ್ತಿದ್ದರು. ಇಬ್ರಾಹೀಮರ ಪ್ರಾರ್ಥನೆ ಅಲ್ಲಾಹನು ಸ್ವೀಕರಿಸಿದ್ದನು. ಆದರೆ ಒಬ್ಬರಲ್ಲ ಇಬ್ಬರು ಪತ್ನಿಯರ ಮೂಲಕವೂ ಅಲ್ಲಾಹನು ಇಬ್ರಾಹೀಮರಿಗೆ ಸಂತಾನ ಭಾಗ್ಯ ಕರುಣಿಸಿದನು. ಹಾಜಿರಾರ ಮೂಲಕ ಇಸ್ಮಾಯೀಲರನ್ನೂ, ಸಾರಾರ ಮೂಲಕ ಇಸ್ಹಾಕರನ್ನೂ ಇಬ್ರಾಹೀಮರಿಗೆ ಅಲ್ಲಾಹನು ಸಂತಾನವಾಗಿ ಕರುಣಿಸಿದನು. ಇಸ್ಹಾಕ್ (ಅ)ರ ಸಂತತಿಯಲ್ಲಿ ಪ್ರವಾದಿ ಈಸಾ (ಅ) ವರೆಗೆ ಅನೇಕ ಪ್ರವಾದಿಗಳನ್ನು ಅಲ್ಲಾಹನು ನಿಯೋಜಿಸಿದನು. ಆದರೆ ಇಸ್ಮಾಯೀಲ್ (ಅ)ರ ಸಂತತಿಯಲ್ಲಿ ಒಬ್ಬರೇ ಒಬ್ಬ ಪ್ರವಾದಿಯನ್ನು ಅಲ್ಲಾಹನು ನಿಯೋಜಿಸಿದನು. ಅವರೇ ಅಂತಿಮ ಪ್ರವಾದಿ ಮತ್ತು ಪ್ರವಾದಿಗಳ ನಾಯಕ ಪ್ರವಾದಿ ಮುಹಮ್ಮದ್ (ಸ). ಆದುದರಿಂದಲೇ ಪ್ರವಾದಿ ಇಸ್ಮಾಯೀಲ್ ಅವರ ತಂದೆ ಪ್ರವಾದಿ ಇಬ್ರಾಹೀಂ ಮತ್ತು ತಾಯಿ ಹಾಜಿರಾರ ತ್ಯಾಗದ ಸ್ಮರಣೆಯೇ ಈದುಲ್ ಅಝ್ಹಾ ಅಥವಾ ಬಕ್ರೀದ್.

ಹಾಜಿರಾ ಬೀವಿಯ ತ್ಯಾಗವೇನು..?

ಹೆಣ್ಣು ಸಹನೆಯ ಪ್ರತಿರೂಪ ಎನ್ನುವುದಕ್ಕೆ ಜಗತ್ತಿನ ಮೊದಲ ಉದಾಹರಣೆ ಹಾಜಿರಾ ಬೀವಿ.

ಅಲ್ಲಾಹನ ಆಜ್ಞಾಪಾಲಕರಾದ ಇಬ್ರಾಹೀಮರು ಹಸುಗೂಸು ಇಸ್ಮಾಯೀಲ್ ಮತ್ತು ಹಾಜಿರಾರನ್ನು ದೂರದ ಮಕ್ಕಾ ಎಂಬ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಭಾರವಾದ ಹೃದಯದೊಂದಿಗೆ ಮರಳುತ್ತಾರೆ. ಅತ್ತ ಹಾಜಿರಾ ಬೀವಿ ಹಸುಗೂಸಿನೊಂದಿಗೆ ನೀರ ಹನಿಯೂ ಇಲ್ಲದ ಮಕ್ಕಾ ಮರುಭೂಮಿಯಲ್ಲಿ ಬದುಕುತ್ತಾರೆ. ತಾಯಿ ತನ್ನ ಹಸಿವು ನೀರಡಿಕೆಯನ್ನು ಸಹಿಸಿಯಾಳು. ಆದರೆ ತನ್ನ ಕಂದನ ಹಸಿವನ್ನೆಂತು ಸಹಿಸಿಯಾಳು..?

ಆ ನಿರ್ಜನ ಮರುಭೂಮಿಯಲ್ಲೂ ಎಲ್ಲಾದರೂ ಹನಿ ನೀರು ಸಿಕ್ಕೀತೇ..? ಎಂಬ ಆಸೆಯಿಂದ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಏಳು ಬಾರಿ ದಾಹಜಲವನ್ನರಸುತ್ತಾ ಓಡಾಡುತ್ತಾರೆ. ಏಳನೇ ಬಾರಿಯ ಓಟದ ಮಧ್ಯೆ ತನ್ನ ಕಂದನ ಅಳು ಕೇಳಿ ಮರಳ ಮೇಲೆ ಮಲಗಿಸಿದ್ದ ಕಂದನತ್ತ ಓಡೋಡಿ ಬರುವಾಗ ಪರಮಾಶ್ಚರ್ಯವೇ ಕಾದಿತ್ತು. ತನ್ನ ಕಂದ ಇಸ್ಮಾಯೀಲ್ ಕಾಲು ಬಡಿದಲ್ಲಿಂದ ಶುದ್ಧ ಜಲದ ಒರತೆ ಚಿಮ್ಮುತ್ತಿತ್ತು. ತಾನೂ ಕುಡಿದು ಮಗುವಿಗೂ ಕುಡಿಸಿ ಒರತೆ ಚಿಮ್ಮುವುದು ನಿಲ್ಲದಿದ್ದಾಗ ಝಂ ಝಂ (ಸಾಕು ನಿಲ್ಲು ನಿಲ್ಲು) ಎನ್ನುತ್ತಾರೆ.ಹಾಗೆ ಚಿಮ್ಮಿದ ಝಂ ಝಂ ಒರತೆಯ ನೀರನ್ನು ಜಗತ್ತಿನಾದ್ಯಂತದ ಯಾತ್ರಿಕರು ಪ್ರತಿದಿನವೂ ಲೆಕ್ಕವೇ ಇಲ್ಲದಷ್ಟು ಇಂದಿಗೂ ಕೊಂಡೊಯ್ಯುತ್ತಾರೆ. ಐದು ಸಾವಿರ ವರ್ಷಗಳಿಂದ ಈ ವರೆಗೂ ಝಂ ಝಂ ಬಾವಿಯ ನೀರಿನ ಮಟ್ಟ ಕಡಿಮೆಯಾದದ್ದಿಲ್ಲ.

ಮಗು ಇಸ್ಮಾಯೀಲ್ ಬೆಳೆದು ಐದಾರು ವಯಸ್ಸಾಗುವ ಹೊತ್ತಿಗೆ ಇಬ್ರಾಹೀಮರಿಗೊಂದು ಕನಸು. ‘‘ಇಬ್ರಾಹೀಂ ನೀನು ನನಗೆ ಮಾಡಿದ ವಾಗ್ದಾನ ನೆನಪಿಸಿಕೋ, ನಿನ್ನ ಮಗು ಇಸ್ಮಾಯೀಲನನ್ನು ನನಗಾಗಿ ಬಲಿಯರ್ಪಿಸುವ ಸಮಯ ಬಂದಿದೆ’’.

ವರ್ಷಗಳ ಹಿಂದೆ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬಂದ ಪತ್ನಿ ಮತ್ತು ಮಗುವನ್ನು ತಿರುಗಿಯೂ ನೋಡದಿದ್ದ ಇಬ್ರಾಹೀಮರು ಮತ್ತೆ ಮಕ್ಕಾ ಮರುಭೂಮಿಗೆ ಮರಳಿ ತನ್ನ ಕನಸನ್ನು ಪತ್ನಿಯ ಬಳಿ ಅರುಹುತ್ತಾರೆ. ಅಲ್ಲಾಹನ ಆಜ್ಞೆಯಾದರೆ ಎರಡನೇ ಬಾರಿ ಯೋಚಿಸುವ ಪ್ರಮೇಯವೇ ಇಲ್ಲ ಎನ್ನುತ್ತಾ ಮನದೊಳಗಿನ ನೋವನ್ನು ಅದುಮಿಟ್ಟು ಪ್ರೀತಿಯ ಏಕೈಕ ಕರುಳ ಕುಡಿಯನ್ನು ಬಲಿಯರ್ಪಿಸಲು ಹಾಜಿರಾ ಪತಿಯೊಂದಿಗೆ ಕಳುಹಿಸುತ್ತಾರೆ.

ಇಬ್ರಾಹೀಮರು ಬೆಟ್ಟದ ಮೇಲೆ ಮಗುವನ್ನು ಮಲಗಿಸಿ ಹರಿತವಾದ ಕತ್ತಿಯನ್ನು ಕೊರಳಿಗಿಡಬೇಕಾದರೆ ಕತ್ತಿ ಚಲಿಸುವುದೇ ಇಲ್ಲ. ಆಗ ದೇವದೂತ ಜಿಬ್ರೀಲ್ (ಅ) ಪ್ರತ್ಯಕ್ಷರಾಗಿ ‘‘ಇಬ್ರಾಹೀಮರೇ ನಿಮ್ಮ ವಚನಬದ್ಧತೆಯಿಂದ ಅಲ್ಲಾಹನು ಪ್ರಸನ್ನನಾಗಿದ್ದಾನೆ. ಮಗನನ್ನು ಬಲಿ ಕೊಡುವ ಅಗತ್ಯವಿಲ್ಲ. ಬದಲಿಗೆ ಆಡನ್ನು ಬಲಿಯರ್ಪಿಸಿ’’ ಎನ್ನುತ್ತಾರೆ.

ವಾಸ್ತವದಲ್ಲಿ ಅಲ್ಲಾಹನು ಮಾನವ ಬಲಿಯನ್ನು ಒಪ್ಪುವುದೇ ಇಲ್ಲ ಎಂಬ ಪರಮ ಸತ್ಯವನ್ನು ಈ ಮೂಲಕ ಮನುಕುಲಕ್ಕೆ ಸಾರಲಾಗುತ್ತದೆ.

ಹಾಜಿರಾ ಬೀವಿಯ ಸಹನೆ ಮತ್ತು ತ್ಯಾಗ, ಇಬ್ರಾಹೀಮರ ವಚನ ಬದ್ಧತೆ, ಬಾಲಕ ಇಸ್ಮಾಯೀಲರ ದೇವನಿಷ್ಠೆ ಮತ್ತು ಧೈರ್ಯದ ಸ್ಮರಣೆಯಾಗಿದೆ ಈದುಲ್ ಅಝ್ಹಾ.

ಆ ಬಳಿಕ ಬಾಲಕ ಇಸ್ಮಾಯೀಲ್ ತಂದೆ ಇಬ್ರಾಹೀಮರೊಂದಿಗೆ ಸೇರಿ ಪವಿತ್ರ ಕಅಬಾಲಯದ ಮರುನಿರ್ಮಾಣ ಮಾಡುತ್ತಾರೆ. ಹಾಜಿರಾ ಬೀವಿಯ ತ್ಯಾಗ ಮತ್ತು ಸಹನೆಯ ಫಲವಾಗಿ ಮಕ್ಕಾ ಎಂಬ ಮಹಾನಗರಿ, ಬೃಹತ್ ನಾಗರಿಕತೆಯೊಂದರ ತೊಟ್ಟಿಲು ಹುಟ್ಟುತ್ತದೆ.

ಇಂದು ಹಜ್ ಯಾತ್ರೆಗೆ ಹೋದವರೆಲ್ಲರೂ ಹಾಜಿರಾ ಬೀವಿಯ ಸ್ಮರಣಾರ್ಥ ಸಫಾ-ಮರ್ವಾ ಬೆಟ್ಟದ ಮಧ್ಯೆ ಏಳು ಬಾರಿ ಓಡಾಡುತ್ತಾರೆ. ಹಸುಗೂಸು ಇಸ್ಮಾಯೀಲರ ಕಾಲಬಡಿತದಿಂದ ಚಿಮ್ಮಿದ ಒರತೆಯ ಝಂ ಝಂ ನೀರನ್ನು ಭಕ್ತಿಯಿಂದ ಕುಡಿಯುತ್ತಾರೆ, ತಂತಮ್ಮ ಊರುಗಳಿಗೆ ಕೊಂಡೊಯ್ಯುತ್ತಾರೆ. ಇಬ್ರಾಹೀಮರ ವಚನ ಬದ್ಧತೆಯ ಸ್ಮರಣಾರ್ಥ ಜಗತ್ತಿನಾದ್ಯಂತದ ಮುಸ್ಲಿಮರು ಈದುಲ್ ಅಝ್ಹಾದ ದಿನ ಪ್ರಾಣಿಗಳನ್ನು ಬಲಿ ಅರ್ಪಿಸಿ ಅದರ ಮಾಂಸವನ್ನು ಬಡ ಬಗ್ಗರಿಗೆ ಹಂಚುತ್ತಾರೆ.

ಹೀಗೆ ಈದುಲ್ ಅಝ್ಹಾ ಐದು ಸಾವಿರ ವರ್ಷಗಳ ಹಿಂದಿನ ಚರಿತ್ರೆಯ ಸ್ಮರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಸ್ಮತ್ ಪಜೀರ್

contributor

Similar News