ಕನಕನ ಕಿಂಡಿ ಮತ್ತು ನಾರಾಯಣ ಗುರುಗಳ ಕನ್ನಡಿ!
ನಾವೀಗ ಕನ್ನಡಿಯನ್ನು ಹೆಚ್ಚು ಪ್ರೀತಿಸುತ್ತೇವೆ, ಆದರೆ ಅದು ತೋರಿಸುವ ಸತ್ಯವನ್ನು ಸಹಿಸುವುದಿಲ್ಲ. ಕಿಂಡಿಯನ್ನು ಮುಚ್ಚಲು ಯತ್ನಿಸುತ್ತೇವೆ, ಏಕೆಂದರೆ ಅದು ಒಳಗಡೆಯ ಅಸಮಾನತೆಯನ್ನು ಮತ್ತೆ ಮತ್ತೆ ಹೊರಗೆ ತೋರಿಸುತ್ತಲೇ ಇದೆ. ಕನಕನ ಕಿಂಡಿ ಮತ್ತು ಗುರುಗಳ ಕನ್ನಡಿ ನಮ್ಮನ್ನು ಇನ್ನೂ ಪ್ರಶ್ನಿಸುತ್ತಿವೆ- ನೀನು ದೇವರನ್ನು ಹುಡುಕುತ್ತಿದ್ದೀಯಾ ಅಥವಾ ನಿನ್ನ ಭ್ರಮೆಯನ್ನೋ? ನೀನು ಒಳಗೊಳ್ಳುವ ಸಮಾಜ ಕಟ್ಟುತ್ತಿದ್ದೀಯಾ ಅಥವಾ ಗೋಡೆ ಎತ್ತುತ್ತಿದ್ದೀಯಾ?
ಜಗತ್ತಿನಲ್ಲೇ ಕನ್ನಡಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ ಜನರಿರುವ ದೇಶ ನಮ್ಮದೇ ಇರಬೇಕು. ಕನ್ನಡಿ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಬೇರೆಯವರು ನೋಡಬೇಕೆನ್ನುವ ಉದ್ದೇಶದಿಂದ ಬಳಕೆಯಾಗುವುದೇ ಹೆಚ್ಚು. ಮಹಾ ಮಾನವತಾವಾದಿ ನಾರಾಯಣ ಗುರುಗಳು ಕೇರಳದ ದೇವಾಲಯಗಳ ಗರ್ಭಗುಡಿಯ ಮುಂದೆ ಅಳವಡಿಸಿದ್ದ ದರ್ಪಣದ ಉದ್ದೇಶ - ನಿಜಾರ್ಥವನ್ನು ನಾವು ಸಾಮಾನ್ಯವಾಗಿ ಅಪಾರ್ಥ ಮಾಡಿಕೊಳ್ಳುತ್ತೇವೆ. ದೇವಾಲಯದಲ್ಲಿ ಕನ್ನಡಿ ಏಕೆ? ದೇವರನ್ನು ನೋಡಲು ಬಂದವನಿಗೆ ತನ್ನ ಮುಖವನ್ನೇ ತೋರಿಸಲೇ? ಹೌದು, ಅದೇ ಗುರುಗಳ ಕ್ರಾಂತಿ. ‘‘ನೀನು ಯಾರು?’’ ಎಂಬ ಪ್ರಶ್ನೆಗೆ ಉತ್ತರ ಹುಡುಕದೇ ದೇವರನ್ನು ಹುಡುಕುವ ಪ್ರಯತ್ನವೇ ದೊಡ್ಡ ಭ್ರಮೆ. ಕನ್ನಡಿ ಭಕ್ತನಿಗೆ ದೇವರನ್ನು ತೋರಿಸುವುದಿಲ್ಲ, ಮೊದಲು ಭಕ್ತನನ್ನೇ ತೋರಿಸುತ್ತದೆ. ನಿನಗೇ ನಿನ್ನ ಮುಖ, ನಿನ್ನ ಕಣ್ಣು, ನಿನ್ನ ನೋಟ -ಇವೆಲ್ಲವೂ ದೇವರ ಹುಡುಕಾಟಕ್ಕೆ ಮೊದಲ ಪಾಠ.
‘‘ಮೂಗಿಲ್ಲದವನಿಗೆ ಕನ್ನಡಿಯ ತೋರಲೇಕೆ..’’ಎಂಬ ವಚನವೊಂದು ನೆನಪಾಗುತ್ತದೆ. ಮೂಗು ಅನ್ನುವುದು ಕೇವಲ ದೇಹದ ಅಂಗವಲ್ಲ; ಅದು ಸತ್ಯವನ್ನು ಅರಿಯುವ ಜ್ಞಾನೇಂದ್ರಿಯದ ರೂಪಕ. ಎರಡು ಕಣ್ಣುಗಳನ್ನು ತದೇಕಚಿತ್ತದಿಂದ ಮೂಗಿನ ತುದಿಗೆ ಕೇಂದ್ರೀಕರಿಸಲು ಸಾಧ್ಯವೇ ಇಲ್ಲ. ಇಟ್ಟರೂ ಅದು ಕ್ಷಣಿಕ. ಹಠಯೋಗದಿಂದ ಅದನ್ನು ಸಾಧಿಸಿಕೊಂಡರೆ ಎದುರುಗಡೆ ಮಸುಕು, ಕತ್ತಲೆ ಮಾಯಮಯವಾಗುತ್ತದೆ. ಆದರೆ ಅದೇ ಹಠವನ್ನು ಹೊಸ ರೀತಿಗೆ ತಿರುಗಿದರೆ, ಅದೇ ಕತ್ತಲೆಯಲ್ಲಿ ಹೊಸ ಬೆಳಕು ಗೋಚರಿಸುತ್ತದೆ. ಬುದ್ಧನಿಗೆ ಆದ ಜ್ಞಾನೋದಯ ಕೂಡ ಇಂತಹದ್ದೇ. ಹಳೆಯ ದೃಷ್ಟಿಯ ಕುಸಿತ, ಹೊಸ ಅರಿವಿನ ಗೋಚರ. ಗುರುಗಳ ಕನ್ನಡಿ ಕೂಡ ಹಾಗೆ ಮೊದಲು ನಮ್ಮಲ್ಲಿಯ ‘‘ನಾನು ಪರಮ ಶ್ರೇಷ್ಠ’’ ಎನ್ನುವ ಭ್ರಮೆಯನ್ನು ಒಡೆದು, ‘‘ನಿಜವಾಗಿ ನಾನು ಯಾರು?’’ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ನಿಲ್ಲಿಸುತ್ತದೆ.
ಅದೇ ಕಾರಣಕ್ಕೆ ನಾರಾಯಣ ಗುರುಗಳು ದೇವಾಲಯದೊಳಗೆ ಕನ್ನಡಿಯೊಂದಿಗೆ ಗ್ರಂಥಾಲಯಗಳನ್ನು ಸ್ಥಾಪಿಸಿದರು. ಪುಸ್ತಕಗಳು ಆತ್ಮಚಿಂತನೆಗೆ, ಸ್ವವಿಮರ್ಶೆಗೆ, ಲೋಕ ವಿಸ್ತರಣೆಗೆ ಕೊಡುವಷ್ಟು ಶಕ್ತಿ ಬೇರೆ ಯಾವುದೂ ಕೊಡಲಾರವು. ಒಂದು ದೇವಾಲಯದಲ್ಲಿ ಧ್ಯಾನಕ್ಕೆ ಕನ್ನಡಿ, ಜ್ಞಾನಕ್ಕೆ ಪುಸ್ತಕ, ಮನಸ್ಸಿಗೆ ಉದ್ಯಾವನ - ಈ ಮೂರೂ ಸೇರಿದಾಗ ಮಾತ್ರ ಮನುಷ್ಯ ಸಂಪೂರ್ಣನಾಗುತ್ತಾನೆ ಎಂಬುದು ಗುರುಗಳ ಚಿಂತನೆ. ದೇವರು ಕಲ್ಲಿನಲ್ಲಿ ಮಾತ್ರವಲ್ಲ, ತಿಳುವಳಿಕೆಯಲ್ಲಿ, ಅಧ್ಯಯನದಲ್ಲಿ, ಅನುಸಂಧಾನದಲ್ಲಿ, ಪ್ರಶ್ನೆಯಲ್ಲಿ, ವೌನದಲ್ಲೂ ಇರುತ್ತಾನೆ ಎಂಬ ಸಂದೇಶ ಅವರದು.
ಹಾಗೆಯೇ ಶ್ರೀಕೃಷ್ಣನ ದರ್ಶನಕ್ಕಾಗಿ ಬಂದ ಕನಕನಿಗೆ, ನೆಲದವನಿಗೆ, ದೇವಾಲಯದ ಒಳಗಡೆ ಪ್ರವೇಶ ನಿರಾಕರಿಸಲ್ಪಟ್ಟಾಗ ಕಿಂಡಿ ಸೃಷ್ಟಿಯಾಗಿ ಕೃಷ್ಣನು ದರ್ಶನ ನೀಡಿದ ಕಥೆ ಕೇವಲ ಭಕ್ತಿಕಥೆ, ದಂತಕತೆ ಅಥವಾ ಕೇವಲ ಕಟ್ಟುಕತೆಯಾಗಿ ಉಳಿಯಬಾರದು. ಅದು ಸಾಮಾಜಿಕ ನ್ಯಾಯದ ಅತ್ಯಂತ ತೀಕ್ಷ್ಣ ರೂಪಕ. ಕಿಂಡಿ ಎಂದರೆ ಚಿಕ್ಕ ರಂಧ್ರ. ಆದರೆ ಆ ರಂಧ್ರವೇ ದೃಷ್ಟಿಗೆ ಚೌಕಟ್ಟು. ಕನ್ನಡಿ - ಕನ್ನಡಕಕ್ಕೆ ಫ್ರೇಮ್ ಇದ್ದಂತೆ - ಅದು ಎಲ್ಲವನ್ನೂ ತೋರಿಸುವುದಿಲ್ಲ, ಆದರೆ ತೋರಿಸುವುದನ್ನೇ ಅತ್ಯಂತ ಸ್ಪಷ್ಟವಾಗಿ ತೋರಿಸುತ್ತದೆ. ದೊಡ್ಡದಾಗಿ ತೋರಿಸುತ್ತದೆ. ಬೇರೆ ಎಲ್ಲವನ್ನು ಬದಿಗಿಟ್ಟು ಅದೊಂದನ್ನೇ ತೋರಿಸುತ್ತದೆ. ಬೇರೆ ಯಾವುದೂ ಕಾಣಿಸದ ಹಾಗೆ ಕಣ್ಣಿಗೆ ಅದೊಂದನ್ನೇ ಗೋಚರಿಸುತ್ತದೆ. ಕನಕನ ಕಿಂಡಿ ಕೇವಲ ದೇವಾಲಯದ ಗೋಡೆಯಲ್ಲಿರುವ ರಂಧ್ರವಲ್ಲ; ಸಮಾಜದ ಗೋಡೆಯಲ್ಲಿ ಬಿದ್ದ ಬಿರುಕು, ಒಳಗೊಳ್ಳುವಿಕೆ, ಪರಸ್ಪರ ದರ್ಶನ, ಸಮರ್ಪಣೆ - ಇವೆಲ್ಲವನ್ನು ಆ ಚಿಕ್ಕ ಕಿಂಡಿ ಒಳಗೊಂಡಿದೆ. ‘‘ನೀನು ಒಳಗೆ ಬರಬಾರದು’’ ಎನ್ನುವ ಸಮಾಜಕ್ಕೆ, ಸ್ವತ: ಭಗವಂತನೇ ಆದ ಕೃಷ್ಣ ‘‘ಬೇಡ, ನಾನೇ ನಿನ್ನ ಕಡೆಗೆ ಬರುತ್ತೇನೆ’’ ಎಂದು ಹೇಳಿದ ಕ್ಷಣ ಅದು. ದೇವರು ಬರೀ ಗೋಡೆಯೊಳಗೆ, ಸ್ಥಾವರದೊಳಗಡೆ ಗರ್ಭಗುಡಿಯೊಳಗೆ ಸೀಮಿತನಲ್ಲ, ತನ್ನನ್ನು ಶುದ್ಧ ಅಂತಃಕರಣದಿಂದ ನಂಬುವ ಈ ನೆಲದ ಯಾವುದೇ ಭಕ್ತನ ಹೃದಯದ ಕಡೆಗೆ ತಿರುಗುವವನು ಎಂಬ ಘೋಷಣೆ.
ಇಲ್ಲೇ ನನಗೆ ಇನ್ನೊಂದು ಕಥೆ ನೆನಪಾಗುತ್ತದೆ. ಕಲಿಯುವ ಆಸೆಯಿಂದ ಆಶ್ರಮಕ್ಕೆ ಬಂದ ಶಿಷ್ಯನೊಬ್ಬನಿಗೆ ಪಾಠ ಕಲಿಸುವ ಮುಂಚೆ ಗುರು ‘‘ಮೊದಲು ನೀನು ಅಲ್ಲೇ ಇರುವ ಬಾವಿಯನ್ನು ಇಣುಕಿ ಬಾ’’ ಎಂದು ಹೇಳುತ್ತಾರೆ. ಮೊದಲ ಬಾರಿ ಶಿಷ್ಯನಿಗೆ ನೀರಿನಲ್ಲಿ ತನ್ನ ಮುಖವೇ ಕಾಣಿಸುತ್ತದೆ. ಮತ್ತೆ ಮತ್ತೆ ಅದೇ ಪ್ರಯತ್ನ. ಶಿಷ್ಯನಿಂದ, ‘‘ತಿಳಿ ನೀರಲ್ಲಿ ನನ್ನನ್ನು ನಾನು ನೋಡಿಕೊಂಡೆ’’ ಎಂಬ ಉತ್ತರ. ಗುರುಗಳ ವೌನ. ಕೊನೆಗೆ ಶಿಷ್ಯ ಬಾವಿಕಟ್ಟೆಯ ಮೇಲೆ ಕೂತು ತದೇಕಚಿತ್ತದಿಂದ ನೋಡುತ್ತಿದ್ದಾಗ, ಈ ಬಾರಿ ತನ್ನ ಮುಖ ಕಾಣಿಸದೆ ಆತನಿಗೆ ನೀರಿನ ಆಳದಲ್ಲಿರುವ ಮೀನುಗಳು, ಕಲ್ಲುಗಳು, ಗಿಡಗಂಟಿಗಳು ಕಾಣಿಸುತ್ತವೆ. ಆಗ ಗುರುಗಳು ಹೇಳುತ್ತಾರೆ -‘‘ಈಗ ನಿನಗೆ ಕಲಿಸಬಹುದಾದ ಕಾಲ. ನೀನು ನಿನ್ನನ್ನೇ ನೋಡುವ ಹಂತ ದಾಟಿ, ಲೋಕವನ್ನು ನೋಡುವ ಹಂತಕ್ಕೆ ಬಂದಿದ್ದೀಯ.’’!
ಗುರುಗಳ ಕನ್ನಡಿ, ಕನಕನ ಕಿಂಡಿ, ಬಾವಿಯ ತಿಳಿ ನೀರು - ಮೂರೂ ಒಂದೇ ಪಾಠ ಹೇಳುತ್ತವೆ. ಮೊದಲ ಹಂತದಲ್ಲಿ ಮನುಷ್ಯ ತನ್ನನ್ನೇ ನೋಡುತ್ತಾನೆ. ಎರಡನೇ ಹಂತದಲ್ಲಿ ತನ್ನನ್ನೇ ಮರೆತು ಲೋಕವನ್ನು ನೋಡಲು ಕಲಿಯುತ್ತಾನೆ. ಸಾಮಾಜಿಕ ನ್ಯಾಯವೂ ಹಾಗೆಯೇ. ‘ನನ್ನ ಹಕ್ಕು’ ಎಂಬ ಹಂತದಿಂದ ‘ಎಲ್ಲರ ಹಕ್ಕು’ ಎಂಬ ಹಂತಕ್ಕೆ ಸಾಗುವ ಪ್ರಯಾಣ. ಈ ಭೂಮಿ ಈ ನೀರು ಈ ಮಣ್ಣು ಈ ಅನ್ನ ಎಲ್ಲವೂ ಎಲ್ಲರಿಗೂ ಸೇರಿದ್ದು ಎನ್ನುವ ಸಮಾನ ಭಾವ.
ಕನಕದಾಸರು ಮತ್ತು ನಾರಾಯಣ ಗುರುಗಳು ಮಾಡಿದ ದೊಡ್ಡ ಪ್ರಯೋಗ, ಭಾಷೆಗಳಲ್ಲಿ ಅವರೆಂದೂ ದೇವರನ್ನು ಕೆಳಗಿಳಿಸಲಿಲ್ಲ, ಅವನನ್ನು ಮೇಲಿಟ್ಟೇ ಮನುಷ್ಯನನ್ನು ಮೇಲೇರಿಸಿದರು. ಸಮಾಜದ ಹಂಚಿಕೆಯ ನ್ಯಾಯವನ್ನು ಸರಿಪಡಿಸಲು, ಬಡವರಿಗೆ, ನೆಲದವರಿಗೆ ಸಮಾನ ಬದುಕು ಒದಗಿಸಲು ಅವರು ಕತ್ತಿ ಹಿಡಿಯಲಿಲ್ಲ, ಸೇನೆ ಕಟ್ಟಲಿಲ್ಲ, ಸಿಂಹಾಸನಕ್ಕೆ ಏರಲಿಲ್ಲ, ಕಿರೀಟ ಧಾರಣೆ ಮಾಡಲಿಲ್ಲ; ಕೇವಲ ಕನ್ನಡಿ ಮತ್ತು ಕಿಂಡಿಯನ್ನು ಹಿಡಿದರು. ಒಂದು ‘‘ನಿನ್ನನ್ನು ನೀನೇ ನೋಡು’’ ಎಂದಿತು. ಇನ್ನೊಂದು ‘‘ನಿನಗೆ ನಿರಾಕರಿಸಲಾದ ದರ್ಶನವೂ ಸಾಧ್ಯ’’ ಎಂದಿತು.
ನಾವೀಗ ಕನ್ನಡಿಯನ್ನು ಹೆಚ್ಚು ಪ್ರೀತಿಸುತ್ತೇವೆ, ಆದರೆ ಅದು ತೋರಿಸುವ ಸತ್ಯವನ್ನು ಸಹಿಸುವುದಿಲ್ಲ. ಕಿಂಡಿಯನ್ನು ಮುಚ್ಚಲು ಯತ್ನಿಸುತ್ತೇವೆ, ಏಕೆಂದರೆ ಅದು ಒಳಗಡೆಯ ಅಸಮಾನತೆಯನ್ನು ಮತ್ತೆ ಮತ್ತೆ ಹೊರಗೆ ತೋರಿಸುತ್ತಲೇ ಇದೆ. ಕನಕನ ಕಿಂಡಿ ಮತ್ತು ಗುರುಗಳ ಕನ್ನಡಿ ನಮ್ಮನ್ನು ಇನ್ನೂ ಪ್ರಶ್ನಿಸುತ್ತಿವೆ- ನೀನು ದೇವರನ್ನು ಹುಡುಕುತ್ತಿದ್ದೀಯಾ ಅಥವಾ ನಿನ್ನ ಭ್ರಮೆಯನ್ನೋ? ನೀನು ಒಳಗೊಳ್ಳುವ ಸಮಾಜ ಕಟ್ಟುತ್ತಿದ್ದೀಯಾ ಅಥವಾ ಗೋಡೆ ಎತ್ತುತ್ತಿದ್ದೀಯಾ?
ಈ ಪ್ರಶ್ನೆಗಳ ಮಧ್ಯೆ ನಿಂತು ಉತ್ತರ ಹುಡುಕುವಾಗಲೇ ಕನಕ ಮತ್ತು ಗುರುಗಳು ನಮ್ಮ ಸಮಕಾಲೀನರಾಗುತ್ತಾರೆ. ಅವರ ಸಾಧನೆ ಭೂತಕಾಲದಲ್ಲಿಲ್ಲ. ಅದು ನಮ್ಮ ಕಣ್ಣಿನ ಮುಂದೆ, ಕನ್ನಡಿಯೊಳಗೆ, ಕಿಂಡಿಯಾಚೆ ಇನ್ನೂ ಜೀವಂತವಾಗಿದೆ. ಕರುನಾಡಿನ ಮಣ್ಣಿನಲ್ಲಿ ಕನಕದಾಸರು, ಕೇರಳದ ತೀರಗಳಲ್ಲಿ ನಾರಾಯಣ ಗುರುಗಳು - ಇಬ್ಬರದ್ದೂ ಬೇರೆ ಭಾಷೆ, ಬೇರೆ ಭೌಗೋಳಿಕತೆ, ಬೇರೆ ಕಾಲಘಟ್ಟ. ಆದರೆ ಅವರ ಬದುಕಿನ ಮೂಲ ಪ್ರಶ್ನೆ ಒಂದೇ: ನ್ಯಾಯ ಯಾರಿಗೆ? ದೇವರು ಯಾರಿಗೆ? ಸಮಾಜ ಯಾರಿಗಾಗಿ? ಈ ಪ್ರಶ್ನೆಗಳಿಗೆ ಅವರು ಕೇವಲ ಗ್ರಂಥಗಳಲ್ಲಿ ಅಲ್ಲ, ಬದುಕಿನಲ್ಲೇ ಉತ್ತರಿಸಿದರು. ಅದೇ ಅವರ ದೊಡ್ಡ ಸಾಧನೆ.
ಕನಕದಾಸರು ಕೆಳಗಡೆಯಿಂದ ಬದುಕನ್ನು ನೋಡಿದವರು. ನೆಲದವನಾಗಿದ್ದ ಕನಕನಿಗೆ ದೇವಾಲಯದ ಬಾಗಿಲುಗಳು ಮುಚ್ಚಿದ್ದವು. ಆದರೆ ದೇವರ ದರ್ಶನ ಮುಚ್ಚಲಿಲ್ಲ. ಉಡುಪಿಯ ಕೃಷ್ಣನ ಕಿಂಡಿ ಒಂದು ಧಾರ್ಮಿಕ ಕಥೆಯಷ್ಟೇ ಅಲ್ಲ; ಅದು ಸಾಮಾಜಿಕ ನ್ಯಾಯದ ಕಿಡಿ- ಕಿಂಡಿ. ‘‘ನೀನು ಒಳಗೆ ಬರಲಾರೆ’’ ಎನ್ನುವ ಸಮಾಜಕ್ಕೆ, ‘‘ನಾನು ಹೊರಗಡೆಯವನತ್ತ ತಿರುಗುತ್ತೇನೆ’’ ಎನ್ನುವ ದೇವರ ಘೋಷಣೆ ಅದು. ಧಾರ್ಮಿಕ ನ್ಯಾಯ ಎಂದರೆ ಪೂಜೆ ಮಾಡುವ ಹಕ್ಕು ಮಾತ್ರವಲ್ಲ, ಗೌರವದಿಂದ ನಿಲ್ಲುವ ಹಕ್ಕು ಕೂಡ ಅನ್ನುವುದನ್ನು ಕನಕದಾಸರು ಆ ಒಂದು ಕಿಂಡಿಯ ಮೂಲಕ ಹೇಳಿಬಿಟ್ಟರು.
ಕನಕನ ಕೀರ್ತನೆಗಳಲ್ಲಿ ದೇವರು ಎಲ್ಲೂ ಮೂರ್ತಿಯೊಳಗೆ ಸಿಕ್ಕಿಹಾಕಿಕೊಂಡವನಲ್ಲ. ಅವನು ಹಸಿದವನ ಜೊತೆಗೆ ನಿಂತವನು, ನೋವಿನೊಳಗೆ ಕೂತವನು. ‘‘ಕುಲ ಕುಲ ಕುಲವೆಂದು ಹೊಡೆದಾಡದಿರಿ’’ ಎಂದು ಹೇಳುವಾಗ ಕನಕ ಕೇವಲ ಜಾತಿ ವಿರೋಧ ಮಾಡುತ್ತಿಲ್ಲ; ನ್ಯಾಯ ಹಂಚಿಕೆಯ ವಂಚನೆಯನ್ನು ಬಯಲಿಗೆಳೆಯುತ್ತಿದ್ದಾನೆ. ದೇವರು ಎಲ್ಲರಿಗೂ ಸೇರಿದವನು ಅಂದರೆ, ಸಮಾಜವೂ ಎಲ್ಲರಿಗೂ ಸಮನಾಗಿರಬೇಕು ಎನ್ನುವುದು ಅವರ ಧಾರ್ಮಿಕ ರಾಜಕೀಯ.
ಇದಕ್ಕೆ ಸಮಾಂತರವಾಗಿ ಕೇರಳದಲ್ಲಿ ನಾರಾಯಣ ಗುರುಗಳು ದೇವಾಲಯದ ಗೋಡೆಗಳನ್ನೇ ಮರುಪರಿಭಾಷಿಸಿದರು. ‘‘ಒಂದು ಜಾತಿ, ಒಂದು ಧರ್ಮ, ಒಂದೇ ಮತ, ಒಂದು ದೇವರು - ಮಾನವನಿಗೆ’’ ಎನ್ನುವ ವಾಕ್ಯ ಘೋಷಣೆಯಷ್ಟೇ ಅಲ್ಲ; ಅದು ಸಾಮಾಜಿಕ ನ್ಯಾಯದ ನೀತಿಸೂತ್ರ. ಜ್ಞಾನವಿಲ್ಲದೆ ಭಕ್ತಿ ಕುರುಡು, ಪ್ರಶ್ನೆಯಿಲ್ಲದೆ ಧರ್ಮ ಅಪಾಯಕಾರಿಯೆಂದು ಅವರಿಗೆ ಗೊತ್ತಿತ್ತು. ಕೆಳ ಜಾತಿಯವರಿಗೆ ಶಿಕ್ಷಣ, ಸ್ವಾಭಿಮಾನ, ಆತ್ಮಗೌರವ ದೊರಕಿದಾಗಲೇ ಸಾಮಾಜಿಕ ನ್ಯಾಯ ಸಾಧ್ಯ ಎಂಬುದು ಅವರ ಸ್ಪಷ್ಟ ನಿಲುವು. ದೇವಾಲಯವನ್ನು ವೌನದ ಜಾಗವನ್ನಾಗಿಸದೆ, ಚಿಂತನೆಯ ಕೇಂದ್ರವನ್ನಾಗಿಸುವ ಪ್ರಯತ್ನ ಅದು.
ಕನಕದಾಸರು ಮತ್ತು ನಾರಾಯಣ ಗುರುಗಳು ಇಬ್ಬರೂ ಧರ್ಮವನ್ನು ಕೆಳಗಡೆಯಿಂದ ಮೇಲಕ್ಕೆ ತಿರುಗಿಸಿದರು. ಅವರು ದೇವರನ್ನು ಮೇಲ್ಜಾತಿ ಮೇಲುವರ್ಗ ಉಳ್ಳವರಿಂದ ಕೆಳಗಿಳಿಸಿ, ನೆಲದವನ ಪಕ್ಕದಲ್ಲಿ ಕುಳ್ಳಿರಿಸಿದರು. ನ್ಯಾಯ ಹಂಚಿಕೆಯ ಪ್ರಶ್ನೆಯನ್ನು ಅವರು ಕಾನೂನಿನಲ್ಲಿ ಅಲ್ಲ, ದೈನಂದಿನ ಬದುಕಿನಲ್ಲಿ ಎತ್ತಿದರು. ಯಾರಿಗೆ ದರ್ಶನ, ಯಾರಿಗೆ ಶಿಕ್ಷಣ, ಯಾರಿಗೆ ಗೌರವ - ಈ ಮೂರು ಪ್ರಶ್ನೆಗಳ ಸುತ್ತಲೇ ಅವರ ಹೋರಾಟ ಸಾಗಿತು.
ಇಂದು ನಾವು ಸಾಮಾಜಿಕ ನ್ಯಾಯದ ಬಗ್ಗೆ ಜೋರಾಗಿ ಮಾತನಾಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ. ಆದರೆ ಧಾರ್ಮಿಕ ನ್ಯಾಯದ ಮಾತು ಬಂದಾಗ ವೌನವಾಗುತ್ತೇವೆ. ಕನಕ ಮತ್ತು ಗುರುಗಳು ನಮಗೆ ಹೇಳಿದ್ದು ಒಂದೇ: ಧರ್ಮ ನ್ಯಾಯವಿಲ್ಲದೆ ಇದ್ದರೆ ಅದು ಶೋಷಣೆಯ ಸಾಧನವಾಗುತ್ತದೆ; ನ್ಯಾಯ ಧರ್ಮವಿಲ್ಲದೆ ಇದ್ದರೆ ಅದು ಕಠೋರವಾಗುತ್ತದೆ. ಕೇರಳ ಮತ್ತು ಕರ್ನಾಟಕದಲ್ಲಿ ಅವರು ಮಾಡಿದ ದೊಡ್ಡ ಸಾಧನೆ ಎಂದರೆ, ಈ ಎರಡನ್ನೂ ಮನುಷ್ಯನ ಬದುಕಿನ ಮಧ್ಯಕ್ಕೆ ತಂದು ನಿಲ್ಲಿಸಿದ್ದು. ಅದಕ್ಕಾಗಿಯೇ ಅವರು ಇನ್ನೂ ಕೂಡ ನಮ್ಮ ಕಾಲದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಲೇ ಇದ್ದಾರೆ - ಕನ್ನಡಿಯಲ್ಲೂ, ಕಿಂಡಿಯಲ್ಲೂ.!
ಇತಿಹಾಸ ಯಾವಾಗಲೂ ಮೇಲಿನಿಂದ ಕೆಳಕ್ಕೆ ಹರಿಯುವ ನದಿಯಲ್ಲ. ಕೆಲವೊಮ್ಮೆ ಅದು ಕೆಳಗಡೆಯಿಂದ ಮೇಲಕ್ಕೆ ಒತ್ತಿಕೊಂಡು ಬರುವ ಬುಗ್ಗೆಯಂತೆ. ಆ ಬುಗ್ಗೆಯ ನೀರು ಮಣ್ಣಿನ ಬಣ್ಣ ಹೊತ್ತುಕೊಂಡೇ ಬರುತ್ತದೆ, ಆದರೆ ಅದೇ ನೀರು ನೆಲವನ್ನು ಹಸಿರುಗೊಳಿಸುತ್ತದೆ. ಕನಕದಾಸರೂ ಹಾಗೆಯೇ, ನಾರಾಯಣ ಗುರುಗಳೂ ಹಾಗೆಯೇ. ಇಬ್ಬರೂ ‘ಕೆಳ ಸಮಾಜ’ ಎನ್ನುವ ಚೌಕಟ್ಟಿನಲ್ಲಿ ಹುಟ್ಟಿ, ಬದುಕನ್ನು ಕೆಳಗಡೆಯಿಂದಲೇ ಪ್ರವೇಶಿಸಿದವರು. ಆದರೆ ಅವರ ಚಿಂತನೆ, ಸಾಧನೆ, ಸಾಮಾಜಿಕ ಪ್ರಯೋಗಗಳು ಮಾತ್ರ ಮೇಲ್ಭಾಗದ ಮಂಟಪಕ್ಕೆ ಸೀಮಿತವಾಗದೆ, ಮನುಷ್ಯನ ಒಳಗಡೆಯನ್ನೇ ನಡುಗಿಸಿದವು.