×
Ad

ಮನದೆಳೆ

Update: 2025-12-21 07:40 IST

ಮನಸ್ಸು ಯಾವುದೇ ವಿಷಯವನ್ನು ಪ್ರತ್ಯೇಕವಾಗಿ ಯೋಚಿಸುವುದಿಲ್ಲ; ಅದು ಹೊಸ ಅನುಭವವನ್ನು ಯಾವಾಗಲೂ ಹಳೆಯ ಅನುಭವದೊಂದಿಗೆ ಹೋಲಿಕೆ ಮಾಡುತ್ತದೆ. ಈಗ ಸಿಕ್ಕಿರುವುದನ್ನು ಹಿಂದಿನ ಅನುಭವ, ಅರಿವಿನ ಮತ್ತು ಅಧ್ಯಯನದ ಜೊತೆಗೆ ಕೂಡಿಸುತ್ತದೆ. ಈ ಕೂಡಿಸುವ ಗುಣವನ್ನು ಸಂಬಂಧಾತ್ಮಕ ಸಂಸ್ಕರಣೆ ಅಥವಾ (Associative Processing) ಎಂದು ಕರೆಯಲಾಗುತ್ತದೆ. ಇದು ಸ್ಮರಣೆ, ಕಲಿಕೆ ಮತ್ತು ಭಾವನೆಗಳ ಮೂಲ ತಂತ್ರಜ್ಞಾನ. ಹೊಸದನ್ನು ನೋಡಿದೊಡನೆ ಅದರಂತೆಯೇ ಇರುವ ಹಳೆಯ ಅನುಭವವನ್ನು ಮನಸ್ಸು ಹುಡುಕುತ್ತದೆ, ಏಕೆಂದರೆ ಬೇಗ ಅರ್ಥ ಮಾಡಿಕೊಂಡುಬಿಡೋಣ ಅಂತ. ಆದರೆ ಕೆಲವೊಮ್ಮೆ ಈ ಕೂಡಿಸುವ ಮನೋಗುಣ ಭಾವನೆಗಳನ್ನು ತರ್ಕ ಅಥವಾ ವಿಮರ್ಶೆ ಮಾಡುವುದಿಲ್ಲ ಮತ್ತು ಪೂರ್ವಾಗ್ರಹಗಳನ್ನು ಕೂಡಾ ಉಂಟುಮಾಡಬಹುದು. ಯಾವುದೋ ಒಂದು ಸುಗಂಧವು ತಕ್ಷಣವೇ ಯಾರಾದರೂ ವ್ಯಕ್ತಿಯ ನೆನಪು ತರಬಹುದು. ಕೆಲವೊಮ್ಮೆ ಕೆಲವು ಸ್ಥಳಗಳಲ್ಲಿ ಹಾದು ಹೋಗುತ್ತಿದ್ದರೆ ಅಲ್ಲಿ ಬರುವ ಪರಿಮಳ ಯಾವುದೋ ಗತಕಾಲವನ್ನು ನೆನಪಿಸಬಹುದು ಅಥವಾ ಅದೇ ವಾಸನೆಗೆ ಕೂಡಿಸಬಹುದಾದ ಇನ್ನೊಂದು ಸ್ಥಳ ನೆನಪಿಗೆ ಬರಬಹುದು. ಯಾವುದಾದರೂ ಒಂದು ಹಾಡು ಕೇಳುತ್ತಿದ್ದಂತೆ ಜೀವನದ ನಿರ್ದಿಷ್ಟ ಕಾಲವನ್ನು ನೆನಪಿಗೆ ತರಬಹುದು. ಕೆಂಪು ಸಿಗ್ನಲ್ ನೋಡಿದೊಡನೆ ಯೋಚನೆಗೂ ಮುನ್ನವೇ ‘ನಿಲ್ಲು’ ಎಂಬ ಪ್ರತಿಕ್ರಿಯೆ ನೀಡುತ್ತೇವೆ. ಹೊಸಬರಾದರೂ ಅವರು ಯಾರಾದರೂ ಹಳೆಯ ಸ್ನೇಹಿತನಂತೆ ಕಾಣುತ್ತಿದ್ದರೆ ತಕ್ಷಣ ಆತ್ಮೀಯತೆ ಮೂಡುವುದು; ಇವೆಲ್ಲವೂ ಒಂದು ವಿಷಯವನ್ನು ಮತ್ತೊಂದು ವಿಷಯಕ್ಕೆ ಕೂಡಿಸುವ ಮನಸ್ಸಿನ ಗುಣ. ಮಾನಸಿಕ ದೃಷ್ಟಿಕೋನದಿಂದ ನೋಡಲು ಹೋದರೆ ಇದೊಂದು ಮನದೆಳೆ (Psychological Thread) ಎನ್ನಬಹುದು. ಮನೋವಿಜ್ಞಾನದಲ್ಲಿ ಇದನ್ನು ಬೆಸುಗೆಯ ಕಲ್ಪನೆಗಳು ಅಥವಾ (Association of Ideas)ಎಂದು ವಿವರಿಸಲಾಗಿದೆ. ಉದಾಹರಣೆಗೆ, ಬಾಲ್ಯದಲ್ಲಿ ನಿರಂತರವಾಗಿ ತಿರಸ್ಕಾರ ಅಥವಾ ಅವಮಾನ ಅನುಭವಿಸಿದ ವ್ಯಕ್ತಿಗೆ, ಮುಂದಿನ ಜೀವನದಲ್ಲಿ ಟೀಕೆಗಳನ್ನು ಕಂಡಾಗಲೇ ಆತ್ಮವಿಶ್ವಾಸ ಕುಗ್ಗುವುದು. ಇಲ್ಲಿ ಟೀಕೆಯೊಂದಿಗೆ ‘ನಾನು ಸಾಕಷ್ಟಿಲ್ಲ, ನನ್ನಲ್ಲಿ ಕೊರತೆಯಿದೆ’ ಎಂಬ ಭಾವದ ಜೊತೆಗೆ ಅಜ್ಞಾತ ಸಂಬಂಧ ನಿರ್ಮಾಣವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ತತ್ವವೇ ಪಾವ್ಲಾವ್ ವಿಜ್ಞಾನಿಯ ಕ್ಲಾಸಿಕಲ್ ಕಂಡೀಶನಿಂಗ್. ಕೆಲವರ ಸಂಬಂಧಗಳಲ್ಲಿ ತಮಗೆ ನೋವು ಕೊಡುವವರೇ ಕೆಲವೊಮ್ಮೆ ಪ್ರೀತಿ, ಭದ್ರತೆ ಅಥವಾ ಸ್ವೀಕಾರವನ್ನೂ ಹೊಂದಿದ್ದರೆ ಮನಸ್ಸು ನೋವಿನೆಳೆಯ ಜೊತೆಗೇ ಪ್ರೀತಿಯನ್ನೂ ಬೆಸೆದುಕೊಂಡುಬಿಟ್ಟಿರುತ್ತದೆ. ಶಿಕ್ಷಿಸುವ ಅಪ್ಪ ಮತ್ತು ಅಮ್ಮ, ಕಾಡುವ ಪ್ರೇಮಿ; ಇವರನ್ನೆಲ್ಲಾ ವ್ಯಕ್ತಿ ನೋವು ಮತ್ತು ಸಂಬಂಧ ಒಂದಾಗಿ ಬೆಸೆದುಕೊಂಡಿರುವರು. ಪ್ರೀತಿಸುವಾಗ ನೋವು ಸಹಜ ಎಂದು ಭಾವಿಸುವ ಮನಸ್ಸಿನ ಸಂಬಂಧಾತ್ಮಕ ಸಂಸ್ಕರಣೆಯ ಅತ್ಯಂತ ಗಾಢ ಹಾಗೂ ಅಪಾಯಕಾರಿ ರೂಪವು ಸಂಬಂಧಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ, ದೌರ್ಜನ್ಯ ಮಾಡುತ್ತಿದ್ದರೂ ಪ್ರೇಮದೆಳೆ ಮತ್ತು ನೋವಿನೆಳೆಗಳನ್ನು ಬೆಸೆದುಕೊಂಡು ಬರೀ ಸಹಿಸಿಕೊಳ್ಳುವುದು ಮಾತ್ರವಲ್ಲ, ಸಹಜವೆಂದು ಒಪ್ಪಿಕೊಂಡೂ ಬಿಟ್ಟಿರುತ್ತಾರೆ. ಅದಕ್ಕೇ ಬಾಧೆಬಂಧ (Trauma Bonding) ಎನ್ನುವುದು. ಇನ್ನು ಪೋಷಕರು ಮತ್ತು ಮಕ್ಕಳ ವಿಷಯದಲ್ಲಾದರೆ, ಮಕ್ಕಳು ಈ ಬಾಧೆಬಂಧಕ್ಕೆ ಒಗ್ಗಿಕೊಂಡು ನೋವಿನೆಳೆ ಮತ್ತು ಪ್ರೇಮದೆಳೆಯನ್ನು ಬೆಸೆದುಕೊಂಡು ತಮ್ಮ ಮುಂದಿನ ಪೀಳಿಗೆಗೂ ಅದನ್ನು ಮುಂದುವರಿಸುವ ಸಾಧ್ಯತೆ ಉಂಟು. ಆಗ ಹೊಸ ತಲೆಮಾರಿನ ಮಕ್ಕಳು ತಮ್ಮ ಪೋಷಕರ ದೃಷ್ಟಿಕೋನವನ್ನು ಮತ್ತು ವರ್ತನೆಯನ್ನು ಒಪ್ಪದೇ ಹೋಗುವ ಕಾರಣ ಸಂಘರ್ಷಗಳಿಗೆ ಕಾರಣವಾಗುತ್ತದೆ. ಮನದೆಳೆಯು ಜೈವಿಕ ಮತ್ತು ನರವಿಜ್ಞಾನ ದೃಷ್ಟಿಕೋನದ (Biological & Neurological Threads) ಆಯಾಮದಲ್ಲಿ ನೋಡುವುದಾದರೆ ಮನಸ್ಸು ತನಗೆ ದೊರಕುವ ಅಥವಾ ತನ್ನಲ್ಲಿರುವ ಅನುಭವದ, ಅರಿವಿನ ಮತ್ತು ಅಧ್ಯಯನದ ಎಳೆಗಳನ್ನು ಮೆದುಳಿನ ಸ್ಮರಣೆಯ ಕೇಂದ್ರದಲ್ಲಿ (ಹಿಪೊಕ್ಯಾಂಪಸ್) ನೆನಪುಗಳನ್ನು ಜೋಡಿಸುತ್ತದೆ. ಅದರೊಟ್ಟಿಗೆ ಕೆಲಸ ಮಾಡುವುದು ಭಾವನೆಗಳ ಭದ್ರತಾ ಕೇಂದ್ರವಾದ ಅಮಿಗ್ಡಲಾ. ಅದು ಭಾವನಾತ್ಮಕವಾದ ತೀವ್ರತೆಯನ್ನು ಕೂಡಿಸುತ್ತದೆ. ಭಾವನೆ ಗಾಢವಾಗಿರುವ ಅನುಭವಗಳಲ್ಲಿ ಮೆದುಳಿನ ಸಂವಹನದ ಸೇತುವೆಗಳು (Synaptic Connections) ಬಲವಾಗುತ್ತವೆ. ಇದನ್ನು (Hebbian Learning) ಎಂದು ಕರೆಯುತ್ತಾರೆ. ನ್ಯೂರಾನುಗಳು ಒಟ್ಟಿಗೆ ಪ್ರೇರಣೆಗೊಂಡಾಗ ಒಟ್ಟಿಗೆ ಬೆಸೆದುಕೊಳ್ಳುತ್ತವೆ (Neurons that fire together, wire together

). ನೀವು ಮೊದಲ ಬಾರಿ ಸೈಕಲ್ ಓಡಿಸುವಾಗ, ಮೆದುಳಿನಲ್ಲಿನ ನರಕೋಶಗಳು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತವೆ. ಅದಕ್ಕೆ ಕಷ್ಟವಾಗುತ್ತದೆ. ಆದರೆ ಪ್ರತಿದಿನ ಅಭ್ಯಾಸ ಮಾಡಿದಂತೆ, ಅದೇ ನರಕೋಶಗಳ ನಡುವೆ ಸಂಪರ್ಕಗಳು ಬಲವಾಗುತ್ತವೆ. ಆ ಕೆಲಸ ಸುಲಭವಾಗುತ್ತದೆ. ಇದಕ್ಕೇ ಹೇಳುವುದು; ಯಾವ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತೇವೋ, ಅದರ ಸಂವಹನದ ಸೇತುವೆಗಳು (Synaptic Connections) ಬಲವಾಗುತ್ತವೆ.

ಹಾಗೆಯೇ ಬಾಲ್ಯದಲ್ಲಿ ಯಾವಾಗಲೂ ಗದರಿಕೆಯೊಂದಿಗೆ ಹೊಡೆತ ತಿನ್ನುತ್ತಿದ್ದ ವ್ಯಕ್ತಿಗೆ, ವಯಸ್ಕನಾದ ನಂತರವೂ ಯಾರಾದರೂ ಧ್ವನಿಯನ್ನು ಎತ್ತಿದರೆ ಸಾಕು- ಹೃದಯ ಬಡಿತ ಜೋರಾಗುತ್ತದೆ. ಏಕೆಂದರೆ ಜೋರಾಗಿ ಮಾತನಾಡುವುದರ ನಂತರ ಏಟು ತಿನ್ನುವ ಅಪಾಯ ಎಂದು ಮೆದುಳಿನಲ್ಲಿ ಸಂವಹನದ ಸೇತುವೆ ಈಗಾಗಲೇ ಬಲವಾಗಿ ರೂಪಗೊಂಡಿರುತ್ತದೆ. ಸಂವಹನದ ಸೇತುವೆ ಬಲವಾಗಿದ್ದರೆ, ಆ ಯೋಚನೆ ಅಥವಾ ಭಾವನೆ ತಕ್ಷಣ ಬರುತ್ತದೆ. ದುರ್ಬಲವಾಗಿದ್ದರೆ, ಅದು ನಿಧಾನವಾಗಿ ಅಥವಾ ಅಪರೂಪವಾಗಿ ಬರುತ್ತದೆ. ಹಾಗೆಯೇ ಇದು ಶಾಶ್ವತ ಎಂದೇನೂ ಅಲ್ಲ. ಹೊಸ ಅಭ್ಯಾಸ, ಹೊಸ ಆಲೋಚನೆಗಳನ್ನು ಮಾಡಿದರೆ ಹೊಸ ಸಂಪರ್ಕಗಳು ನಿರ್ಮಾಣವಾಗುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಾಸ್ಟರ್,

contributor

Similar News

ಬೇರುಗಳು

ಬಯಕೆಗಳು

ಒಂಟಿ