ಮೀಸಲಾತಿಯು ಜಾತೀಯತೆಯನ್ನು ಸ್ಥಿರೀಕರಿಸುವುದೇ?
ಮೀಸಲಾತಿಗೆ ಹೆಚ್ಚೆಂದರೆ ಒಂದು ಶತಮಾನದ ಇತಿಹಾಸ ಇರಬಹುದಷ್ಟೇ. ಮೀಸಲಾತಿ ವಿರೋಧಿಯ ಸಿನಿಕರು ಮೀಸಲಾತಿಯ ಅಂತರಾಳದ ಸ್ವರೂಪವನ್ನು ಅರಿಯದೆ, ಅದರಿಂದ ಜಾತಿಗಳು ಸ್ಥಿರಗೊಳ್ಳುತ್ತವೆ ಎಂಬ ತಳಬುಡವಿಲ್ಲದ ವಾದ ಮಂಡಿಸುತ್ತಾರೆ. ಆದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗೆ ಸಾವಿರ ವರ್ಷಗಳ ಇತಿಹಾಸವೇ ಇದೆ. ಹಾಗಾದರೆ, ಮೀಸಲಾತಿ ಜಾರಿಗೆ ಬರುವ ಮುನ್ನ ನೆಲೆಗೊಂಡಿದ್ದ ಜಾತೀಯತೆಯ ಕರಾಳ ಸ್ವರೂಪದ ಕಬಂಧ ಬಾಹುಗಳನ್ನು ತುಂಡರಿಸಲಿಲ್ಲವೇಕೆ? ಎಂಬ ಸಹಜ ಪ್ರಶ್ನೆ ಉದ್ಭವಿಸುವುದಿಲ್ಲವೇ? ಉತ್ತರವನ್ನು ಯಾರಿಂದ ನಿರೀಕ್ಷೆ ಮಾಡೋಣ?
ಮೀಸಲಾತಿಯು ಜಾತಿ ವ್ಯವಸ್ಥೆಯನ್ನು ಶಾಶ್ವತಗೊಳಿಸುತ್ತದೆ ಎಂಬುದಕ್ಕೆ ಉತ್ತರಿಸಿರುವ ಸಾಮಾಜಿಕ ಕಾರ್ಯಕರ್ತ, ಪ್ರಸಿದ್ಧ ವಕೀಲ ದಿವಂಗತ ಹರೂಭಾಯಿ ಮೆಹ್ತಾ ಭಾರತೀಯ ಸಾಮಾಜಿಕ ಪದ್ಧತಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಜಾತಿ ಶ್ರೇಣಿಯ ಪರಿಣಾಮವಾಗಿ ಬೆಳೆಯುತ್ತಿರುವ ಅಸಮಾನತೆಗಳನ್ನು ಹೋಗಲಾಡಿಸಲೆತ್ನಿಸುವ ಮೀಸಲಾತಿಯ ಉದ್ದೇಶವನ್ನು ಯಾರೂ ಅವಹೇಳನ ಮಾಡಬಾರದು. ಆದ್ದರಿಂದ ಮೀಸಲಾತಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರನ್ನು, ಜಾತಿ ರಚನೆಯ ಪರಿಣಾಮವಾಗಿ ಸಂಕಲಿತ ಹಿಂದುಳಿದಿರುವಿಕೆಯಿಂದ ಬಳಲುತ್ತಿರುವ ಜನರನ್ನು ಮುಂದುವರಿದ ವರ್ಗಗಳ ಮಟ್ಟಕ್ಕೆ ತರಲು ಉದ್ದೇಶಿಸಲಾಗಿದೆ. ರಾತ್ರೋರಾತ್ರಿ ಮೀಸಲಾತಿಯನ್ನು ರದ್ದುಗೊಳಿಸಿದರೆ ಅದರ ಪರಿಣಾಮ ಈ ವರ್ಗಗಳ ಹಿಂದುಳಿದಿರುವಿಕೆಯನ್ನು ಶಾಶ್ವತಗೊಳಿಸುವುದು. ಜಾತಿ ರಚನೆಯ ಕಾರಣದಿಂದ ಕಳೆದ ಶತಮಾನಗಳಲ್ಲಿ ಉಂಟಾದ ಅಸಮಾನತೆಗಳನ್ನು ನಾವು ಅಳಿಸಿ ಹಾಕಬೇಕಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಜನರು ಎಂದೆಂದೂ ಕೆಳಮಟ್ಟದಲ್ಲಿರಬೇಕು ಮತ್ತು ಎಲ್ಲರಿಗೂ ಸಮಾನವಾಗಿ ಕಾಣುವ ತತ್ವಕ್ಕೆ ಅನುಗುಣವಾಗಿ ಯಾಂತ್ರಿಕವಾಗಿ ಉಪಚರಿಸಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ಈ ಹಂತದಲ್ಲಿ ಎಲ್ಲಾ ವರ್ಗದವರಿಗೂ ಸಮಾನವಾದ ಪ್ರಗತಿಯ ಶ್ರೇಣಿ ಲಭ್ಯವಾದರೆ ಮತ್ತು ಮೀಸಲಾತಿಯಂತಹ ಕ್ರಮಗಳು ಅದನ್ನು ದೊರಕಿಸುವವರೆಗೆ ಹಿಂದುಳಿದ ವರ್ಗಗಳು ಹಾಗೂ ಮುಂದುವರಿದ ವರ್ಗಗಳ ನಡುವೆ ಅಭಿವೃದ್ಧಿಯ ವಿಷಯದಲ್ಲಿ ಅಂತರ ದೀರ್ಘಕಾಲದವರೆಗೆ ಇರುತ್ತದೆ. ಜಾತಿ ಸಂಯೋಜನೆಯಿಂದ ಉಂಟಾಗುವ ಅಸಮಾನತೆಯನ್ನು, ಜಾತಿರಹಿತ ರಚನೆಯನ್ನು ನೆಲೆಗೊಳಿಸುವ ಪ್ರಕ್ರಿಯೆಯಲ್ಲಿ ಅವಶ್ಯವಾಗಿ ಪರಿಶೀಲಿಸಬೇಕು. ಆದ್ದರಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಮುಂದುವರಿಸಬೇಕೆಂದು ಯಾರಾದರೂ ಪ್ರತಿಪಾದಿಸಿದರೆ ಅದು ಜಾತೀಯತೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ.
ಜಾತಿ ಪದ್ಧತಿ ತನ್ನ ಹೊಸ ರೂಪದಲ್ಲಿ ಮತ್ತೆ ಹೊರಹೊಮ್ಮಿದೆ
ಶಿಕ್ಷಣ, ಸಾಂಸ್ಕೃತೀಕರಣ, ಜಾಗತೀಕರಣ ಮುಂತಾದವುಗಳಿಂದಾಗಿ ಇಂದು ಜಾತೀಯತೆಯ ಅಡ್ಡಿ ಆತಂಕಗಳು ದೇಶದಿಂದ ಸಂಪೂರ್ಣವಾಗಿ ನಾಶವಾಗಿವೆ ಎಂದು ಜನರು ವಾದಿಸುತ್ತಿರುವುದನ್ನು ನಾವು ಕೇಳಿದ್ದೇವೆ. ಹೌದು, ಈ ಎಲ್ಲಾ ಅಂಶಗಳು ಸಮಾಜದಲ್ಲಿ ಕೆಲವು ದಶಕಗಳ ಹಿಂದೆ ಇರಬೇಕಾಗಿದ್ದ ಜಾತಿಯ ಅಡೆತಡೆಗಳನ್ನು ಸಂಕುಚಿತಗೊಳಿಸಲು ಖಂಡಿತವಾಗಿಯೂ ಕೊಡುಗೆ ನೀಡಿವೆ. ಆದರೆ, ಭಾರತೀಯ ಜಾತೀಯತೆಯ ಬೇರುಗಳು ತುಂಬಾ ಆಳವಾದವು ಮತ್ತು ದೀರ್ಘಾವಧಿಯ ಸಾವಿರ ಸಾವಿರ ವರ್ಷಗಳಿಂದ ಪೋಷಿಸಲ್ಪಟ್ಟಿವೆ, ಅದರ ಅಸ್ತಿತ್ವವನ್ನು ನಿರಾಕರಿಸಲಾಗದು. ಇದಕ್ಕೆ ವಿರುದ್ಧವಾಗಿ ಜಾತೀಯತೆಯ ಹೊಸ ವಿದ್ಯಮಾನವು ನಿಧಾನವಾಗಿ ಆಧುನಿಕ ಸ್ವರೂಪ ಪಡೆದುಕೊಳ್ಳುತ್ತಿದೆ.
ಈಗ ಜಾತಿ ಆಧಾರಿತ ಸ್ವಯಂ ಸಂಸ್ಥೆಗಳು ಹೆಚ್ಚೆಚ್ಚು ಬರುತ್ತಿವೆ. ಈ ಜಾತಿ ಆಧಾರಿತ ಸಂಘಗಳು ತಮ್ಮ ಜಾತಿಯ ಗಣ್ಯರ ಸಮುದಾಯ ಸಭೆಗಳು, ಸಾಮೂಹಿಕ ವಿವಾಹಗಳು ಮುಂತಾದ ಜಾತಿ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸುತ್ತವೆ. ಜಾತಿಯ ಹೆಸರಿನಲ್ಲಿ ಇಂತಹ ಕಾರ್ಯಾಚರಣೆಯು ಮೇಲ್ಜಾತಿಗಳಲ್ಲಿ ನಿರ್ಬಂಧಿತವಾಗಿಲ್ಲ. ಆದರೆ, ಇಂಥವುಗಳು ಸಾರ್ವತ್ರಿಕವಾಗಿ ಕೆಳಜಾತಿಗಳಲ್ಲಿ ಮತ್ತು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಲ್ಲೂ ಕಂಡು ಬರುತ್ತವೆ. ಈ ಜಾತಿ ಸಂಘಟನೆಗಳು ತಮ್ಮ ಜಾತಿಯ ಅಗತ್ಯವಿರುವ ಸದಸ್ಯರಿಗೆ ಪುಸ್ತಕಗಳು, ಶಾಲಾಶುಲ್ಕಗಳು ಮತ್ತು ವಿದ್ಯಾರ್ಥಿನಿಲಯ ಸೌಕರ್ಯಗಳಂತಹ ಶೈಕ್ಷಣಿಕ ಮತ್ತು ಆರ್ಥಿಕ ಸಹಾಯವನ್ನು ಸಹ ಒದಗಿಸುತ್ತವೆ. ಅಂತಹ ಜಾತಿ ಆಧಾರಿತ ಸಂಘಗಳು ಮತ್ತು ಸಂಬಂಧಗಳು ಚುನಾವಣಾ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ಸಂಘಗಳು ಮತ್ತು ಅದರ ರಾಜಕೀಯ ಪ್ರೇರಿತ ಮತ್ತು ಸಂಪರ್ಕ ಹೊಂದಿದ ಜನರು ಅಂತಹ ಕಾರ್ಯಾಚರಣೆಯನ್ನು ಕೆಲವೊಮ್ಮೆ ವೈಯಕ್ತಿಕವಾಗಿ ಅಥವಾ ಗುಂಪಾಗಿ ಆದಷ್ಟು ಲಾಭ ಪಡೆಯಲು ಬಳಸಿಕೊಳ್ಳುತ್ತಾರೆ.
ಜಾತಿ ಸಮೀಕರಣದ ಭಾರತೀಯ ಸಾಮಾಜಿಕ ಪ್ರವೃತ್ತಿಯು ದೇಶದ ಗಡಿಯೊಳಗೆ ಮಾತ್ರ ಉಳಿದಿಲ್ಲ. ಉದಾಹರಣೆಗೆ ಹಿಂದೂಗಳು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲಾ (ಅಮೆರಿಕದಲ್ಲಿ ಬಹು ಮುಖ್ಯವಾಗಿ) ಬ್ರಾಹ್ಮಣ ಸಮಾಜ, ರಜಪೂತ್ ಸಂಘ ಮತ್ತು ಪಾಟಿದಾರ್ ಸಮಾಜದಂಥ ಸಂಘಟನೆಗಳು ರಚಿತಗೊಂಡಿವೆ.
ಇದು ತಮ್ಮ ಜಾತಿಯವರಿಗೆ ಉದ್ಯೋಗ ಮತ್ತು ಇತರ ಅವಶ್ಯ ನೆರವು ನೀಡುವ ನೈಸರ್ಗಿಕ ಪ್ರವೃತ್ತಿಯನ್ನು ಬೆಳೆಸುತ್ತದೆ. ಅಂತಹ ಎಲ್ಲ ರೀತಿಯ ನೆರವನ್ನು ಯಾವುದೇ ವ್ಯಕ್ತಿಯು ತನ್ನ ಜಾತಿಗೆ ಸೇರಿದವರಿಗೆ ಮಾಡಲು ಶಕ್ತನಾಗುತ್ತಾನೆ. ಇದು ಜಾತಿ ಪ್ರಜ್ಞೆಯನ್ನು ಮೂಡಿಸುವುದು. ಆದರೆ, ಅಶಕ್ತ ಜಾತಿಗಳು ತಮ್ಮ ಜಾತಿಗಳೊಳಗೆ ಸಂಘಗಳನ್ನು ಸಂಘಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ಗಮನಾರ್ಹ ವಿಷಯವೆಂದರೆ ಭಾರತೀಯ ಸಮಾಜದಲ್ಲಿ ಜಾತಿ ಅಂಶವನ್ನು ಯಾವುದೇ ರೀತಿಯಲ್ಲಾದರೂ ಜೀವಂತವಾಗಿ ನೆಲೆಗೊಳಿಸಲು ಪ್ರಜ್ಞಾಪೂರ್ವಕ ಪ್ರಯತ್ನಗಳು ಕಂಡು ಬರುತ್ತವೆ.
ಜಾತಿ ಆಧಾರಿತ ಹಿಂದುಳಿದಿರುವಿಕೆಗೆ ಬಾಹ್ಯ ಬೆಂಬಲ ಬೇಕು
ಜಾತಿ ತಾರತಮ್ಯವನ್ನು ಏಕಾಏಕಿ ಅಳಿಸಿ ಹಾಕಲು ಸಾಧ್ಯವಿಲ್ಲ. ದೀರ್ಘಕಾಲದವರೆಗೆ ಅಸಮಾನವಾಗಿ ನಡೆಸಿಕೊಂಡ ಕಾರಣ ಈ ದಮನಿತ ವರ್ಗಗಳು ಪೀಳಿಗೆಯಿಂದ ಪೀಳಿಗೆಗೆ ಬಲವಂತದಿಂದ ಹಿಂದುಳಿದಿರುವಿಕೆಗೆ ಬಲಿಯಾದವು. ಈಗ ಎಲ್ಲಾ ರೀತಿಯ ಪ್ರವೇಶಗಳನ್ನು ಯಾವುದೇ ಮೀಸಲಾತಿ ಇಲ್ಲದೆ ಅರ್ಹತೆ ಆಧಾರದ ಮೇಲೆ ಮಾತ್ರ ಕಟ್ಟುನಿಟ್ಟಾಗಿ ನಿಯಂತ್ರಿಸಿದರೆ, ಅರ್ಹತೆ ಮತ್ತು ದಕ್ಷತೆಯಿಂದ ಹೆಚ್ಚಿನ ಪ್ರವೇಶ ಪಡೆದುಕೊಳ್ಳುವ ಮುಂದುವರಿದ ವರ್ಗಗಳಿಗೆ ಸೇರಿದ ಜನರು ನೇಮಕಾತಿ ಮತ್ತು ಪ್ರವೇಶಗಳಲ್ಲಿ ಏಕಸ್ವಾಮ್ಯ ಸಾಧಿಸುತ್ತಾರೆ ಎಂಬುದು ಅದರ ಅರ್ಥ. ತಳ ಸಮುದಾಯಗಳಿಗೆ ಸೇರಿದವರು ಅವರ ಸಂಚಯಿಸಿದ ಹಿಂದುಳಿದಿರುವಿಕೆಯಿಂದಾಗಿ ಮೇಲ್ಜಾತಿ - ಮೇಲ್ವರ್ಗದೊಂದಿಗೆ ಸ್ಪರ್ಧೆಯಲ್ಲಿ ಒಂದು ನಿರ್ದಿಷ್ಟ ದೂರದಲ್ಲಿಯೂ ಸಹ ನಿಲ್ಲಲಾಗುವುದಿಲ್ಲ. ಇಂದಿನ ಅಸಮಾನ ಸ್ಥಾನವು ಮುಂದಿನ ಕೆಲವು ದಶಕಗಳಲ್ಲಿ ಪಡೆದುಕೊಳ್ಳುವ ತಾರತಮ್ಯದ ಪರಿಹಾರವೂ ಸಹ ಶತಮಾನಗಳಿಂದ ಅಸಮಾನವಾಗಿ ನಡೆಸಿಕೊಂಡ ಪ್ರಯುಕ್ತ ಉಂಟಾಗಿರುವ ಹಾನಿಯನ್ನು ರದ್ದುಗೊಳಿಸುವವರೆಗೆ ಶಾಶ್ವತವಾಗಿರುತ್ತದೆ ಎಂದು ತೋರುತ್ತದೆ.
ಎಷ್ಟೇ ಆರ್ಥಿಕ ಏರಿಳಿತಗಳು ಬಂದರೂ ಅವರ ಉದ್ಯೋಗ ಮತ್ತು ಪ್ರವೇಶಕ್ಕಾಗಿ ಮುಕ್ತ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಗೂಡನ್ನು ಹರಿದು ಹಾಕಲು ಸಾಧ್ಯವಿಲ್ಲ. ಆದ್ದರಿಂದ ಮೇಲ್ಜಾತಿಗಳ ಮಟ್ಟಕ್ಕೇರಲು ಸಹಾಯ ಮಾಡುವ ಖಚಿತವಾದ ಮಾರ್ಗವೆಂದರೆ ಶತಮಾನಗಳಿಂದ ಅವರ ಮೇಲೆ ಹೇರಲ್ಪಟ್ಟ ಸಂಚಯಿಸಿದ ಹಿಂದುಳಿದಿರುವಿಕೆಯ ದುಷ್ಪರಿಣಾಮಗಳಿಂದ ಈ ವರ್ಗಗಳು ವಿಮೋಚನೆ ಹೊಂದುವವರೆಗೆ ಮೀಸಲಾತಿಯನ್ನು ಒದಗಿಸುವುದೊಂದೇ ಬಾಕಿ.
ಜಾತಿಯೇ ಎಲ್ಲಾ ಸಮಸ್ಯೆಗೂ ಮೂಲ
ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳು ಮೀಸಲಾತಿ ಮುಂತಾದ ಶಾಸನಬದ್ಧ ಅವಕಾಶಗಳ ಮೂಲಕ ಬೆಂಬಲಗಳಿಸಲು ಒಂದು ಸಾಮಾನ್ಯ ಲಕ್ಷಣವನ್ನು ಹೊಂದಿವೆ. ಅಂದರೆ ಎಲ್ಲಾ ಮೂರೂ ವರ್ಗಗಳ ಜನರು ತಮ್ಮ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಅವಕಾಶಗಳಿಂದ ವಂಚಿತರಾಗಿರುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಿಂದುಳಿದಿರುವಿಕೆಗೆ ಮುಖ್ಯವಾಗಿ ಈ ಸಮುದಾಯಗಳನ್ನು ಸಂಪೂರ್ಣವಾಗಿ ಸಾಮಾಜಿಕವಾಗಿ ತಿರಸ್ಕರಿಸಿರುವುದೇ ಕಾರಣ ಎಂದು ಹೇಳಲಾಗುತ್ತದೆ. ಇದಕ್ಕೂ ಮೇಲಾಗಿ ಅಸ್ಪಶ್ಯತೆಯಂತಹ ಅಮಾನವೀಯತೆಗೆ ಒಳಪಡಿಸಲಾಗಿದೆ. ಆದ್ದರಿಂದ ಅವರ ಉನ್ನತಿಗಾಗಿ ಕೇವಲ ಆರ್ಥಿಕ ಅಭಿವೃದ್ಧಿ ಕ್ರಮಗಳಷ್ಟೇ ಸಾಕಾಗುವುದಿಲ್ಲ. ಮಾನವ ಘನತೆ ಮತ್ತು ಗೌರವವನ್ನು ಮರಳಿ ಪಡೆಯಲು ಅವರನ್ನು ಸಾಮಾಜಿಕವಾಗಿಯೂ ಉನ್ನತೀಕರಿಸಬೇಕಾಗಿದೆ.
ಪರಿಶಿಷ್ಟ ಪಂಗಡಗಳ ವಿಷಯದಲ್ಲಿ ಅವರ ಸ್ಥಾನ ಸ್ವಲ್ಪ ಭಿನ್ನವಾಗಿದೆ. ಅವರು ಅಸ್ಪಶ್ಯತೆಗೆ ಒಳಗಾಗುವುದಿಲ್ಲ. ಬದಲಾಗಿ ಹೊರಗಿನ ಆಕ್ರಮಣಕಾರರು ಅವರು ಕಾಡು-ಮೇಡುಗಳಲ್ಲೇ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಮಾನವ ಅಭಿವೃದ್ಧಿಗೆ ಅಗತ್ಯವಾದ ಮುಖ್ಯ ವಾಹಿನಿಗಳಾದ ಸಾಮಾಜೀಕರಣ, ಸಂಸ್ಕೃತಿ, ನಾಗರಿಕತೆ, ಶಿಕ್ಷಣ ಇತ್ಯಾದಿಗಳಿಂದ ಅವರು ಸಂಪೂರ್ಣವಾಗಿ ದೂರ ಉಳಿಯುವರು. ಪರಿಶಿಷ್ಟ ಪಂಗಡಗಳು ಸಾಮಾನ್ಯ ಸಾಮಾಜಿಕ ಜೀವನದಿಂದ ದೂರವಿರುವುದರಿಂದ ಮೇಲ್ಜಾತಿಗಳಿಂದ ತೊಂದರೆಗೆ ಒಳಗಾಗುತ್ತಾರೆ ಮತ್ತು ಮೇಲ್ಜಾತಿಗಳಿಗೆ ಗುಲಾಮಗಿರಿ ರೀತಿಯ ಉಪಚಾರ ಮಾಡಲು ಹತ್ತಿರದಲ್ಲಿರುತ್ತಾರೆ. ಅವರ ವಿಷಯದಲ್ಲಿ ಕೇವಲ ಆರ್ಥಿಕ ಉನ್ನತಿ ಸಾಕಾಗುವುದಿಲ್ಲ. ಆದ್ದರಿಂದ ಅವರಿಗೂ ಆರ್ಥಿಕ ಮಾನದಂಡಗಳನ್ನೂ ಮೀರಿದ ಸಾಂವಿಧಾನಿಕವಾಗಿ ಖಾತ್ರಿಪಡಿಸಿದ ಹಕ್ಕುಗಳಿಂದ ಬೆಂಬಲದ ಅಗತ್ಯವಿದೆ.
ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ, ಅವರ ಸ್ಥಾನ ಕೂಡ ಭಿನ್ನವಾಗಿರುತ್ತದೆ. ಅವರು ಪರಿಶಿಷ್ಟ ಜಾತಿಯವರಂತೆ ಅಸ್ಪಶ್ಯರೂ ಅಲ್ಲ; ಅತ್ತ ಪರಿಶಿಷ್ಟ ಪಂಗಡದವರ ರೀತಿ ಸಾಮಾಜಿಕವಾಗಿ ದೂರ ಇರಿಸಲ್ಪಟ್ಟವರೂ ಅಲ್ಲ. ಆದರೆ, ಹಿಂದೂ ಸಮಾಜದ ವರ್ಣಾಶ್ರಮ ಪದ್ಧತಿ ಅನ್ವಯ ತಲೆತಲಾಂತರದಿಂದ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಾಲ್ಕು ವರ್ಣಗಳಲ್ಲಿ ಇತರ ಹಿಂದುಳಿದ ವರ್ಗ ಶೂದ್ರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಜಾತಿ ಶ್ರೇಣೀಕೃತ ಸಮಾಜದಲ್ಲಿ ಕಡೆಯವರಾಗಿದ್ದಾರೆ. ಈ ವರ್ಗದ ಅಡಿಯಲ್ಲಿ ಬರುವ ಕಾಯಕ ಸಂಬಂಧಿತ ಜಾತಿಗಳು ಶತಮಾನಗಳಿಂದ, ಕಮ್ಮಾರಿಕೆ, ಕ್ಷೌರ ಮಾಡುವುದು, ದನ-ಕರುಗಳನ್ನು ಮೇಯಿಸುವುದು, ಮರಗಳನ್ನು ಕತ್ತರಿಸುವುದು, ಪಾದರಕ್ಷೆಗಳನ್ನು ಮಾಡುವುದು, ಬಟ್ಟೆಗಳನ್ನು ಮಡಿ ಮಾಡುವುದು ಇವೇ ಮುಂತಾದ ಕಾಯಕಗಳನ್ನು ಮಾಡಿಕೊಂಡು ಬರುತ್ತಿವೆ. ಈ ವೃತ್ತಿಪರರು ಇನ್ನಿತರ ಜಾತಿಗಳಿಗೆ ಸಲ್ಲಿಸುವ ಒಂದು ರೀತಿ ಕಸುಬುದಾರಿಕೆ ಸೇವೆಯಾಗಿರುತ್ತವೆ ಇವು.
ಇತಿಹಾಸದುದ್ದಕ್ಕೂ ವಿವಿಧ ರೀತಿಯ ತಾರತಮ್ಯಕ್ಕೆ ಬಲಿಯಾದ ಜನರಲ್ಲಿ ಮೀಸಲಾತಿಯು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಭಾವನೆಯನ್ನು ಮೂಡಿಸುತ್ತದೆ. ಸಾಮಾಜಿಕವಾಗಿ ಯಾವುದೇ ಅಮೂಲ್ಯವಾದ ಆಸ್ತಿಯನ್ನು ಹೊಂದಿರದವರಿಗೆ ಅದು ಅನ್ವಯಿಸುತ್ತವೆ. ಈ ಸಮುದಾಯಗಳು ಸಾಮಾಜಿಕವಾಗಿ ಮುನ್ನಡೆಯಲು ಸಹಾಯ ಮಾಡಲು ಸಾಮಾಜಿಕ ಕೌಶಲ್ಯ ಮತ್ತು ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಸಂಪ್ರದಾಯ-ರೀತಿ ನೀತಿಗಳಲ್ಲಿ ಅವಕಾಶ ಕೊಡುತ್ತಿರಲಿಲ್ಲ.
ಈ ದೌರ್ಬಲ್ಯ ಅವರಿಗೆ ಇಂದಿಗೂ ಭಾರವಾಗಿದೆ. ಆದ್ದರಿಂದ ಪ್ರಜಾಪ್ರಭುತ್ವ ಸಮಾಜದಲ್ಲಿ ತಮ್ಮ ಯುಕ್ತವಾದ ಸ್ಥಾನ ಪಡೆಯಲು ಮತ್ತು ಮೇಲಕ್ಕೆ ಬರಲು ಅವರಿಗೆ ಹೆಚ್ಚಿನ ಪ್ರೇರಣೆ ಪಡೆಯುವಂತಾಗಲು ಸಕಾರಾತ್ಮಕ ತಾರತಮ್ಯದ ಅಗತ್ಯವಿದೆ. ಸ್ವಾತಂತ್ರ್ಯವನ್ನು ಕಾನೂನಿನ ಮೂಲಕ ಮತ್ತು ಸಮಾನತೆಯನ್ನು ಆಜ್ಞಾಪಿಸುವ ಮೂಲಕ ಸ್ಥಾಪಿಸಬಹುದು, ಆದರೆ ಭ್ರಾತೃತ್ವವು ಸಂಭವಿಸಬೇಕಾದರೆ ಅದಕ್ಕೆ ಪೌರತ್ವದ ಗಣನೀಯ ಸಾಧನೆ ಅಗತ್ಯವಿದೆ. ಮೀಸಲಾತಿಯು ಬಡತನ ಹೋಗಲಾಡಿಸುವ ಕಾರ್ಯಕ್ರಮವಲ್ಲ; ಬದಲಾಗಿ ಐತಿಹಾಸಿಕವಾಗಿ ವಂಚಿತರಾದವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುವುದಾಗಿದೆ.
ಜಾತಿ ಆಧಾರಿತ ಮೀಸಲಾತಿ, ಅತ್ಯುತ್ತಮ ಜಾತ್ಯತೀತ ಪರಿಹಾರ
ಎ.ಬಿ. ಬರ್ಧನ್ ಅವರ ಪ್ರಕಾರ ‘‘ಮೀಸಲಾತಿಯು ಜನರಿಗೆ ತಮ್ಮ ಜಾತಿಯ ಬಗ್ಗೆ ಮತ್ತು ಅದನ್ನು ಅವರು ತಮ್ಮ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳುವುದು ಎಂಬುದನ್ನು ನಿರಂತರವಾಗಿ ನೆನಪಿಸುವ ಮೂಲಕ ಜಾತಿವಾದವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ ಎಂಬ ಭಾವನೆ ಇದೆ. ಇದು ಹಾಗಲ್ಲ. ಮೇಲ್ಜಾತಿಗಳು ತಮ್ಮ ಜಾತಿ ಸಂಘಟನೆಗಳನ್ನು ಸ್ಥಾಪಿಸಿದಾಗ ಮತ್ತು ಸಮುದಾಯ ಸಂಘಟನೆಗಳನ್ನು ನಡೆಸಿದಾಗ, ಕಲ್ಯಾಣ ಕಾರ್ಯಕ್ರಮದ ಹೆಸರಿನಲ್ಲಿ ಸುಧಾರಕರಾಗಿ, ರಾಜಕೀಯವಾಗಿ ಅಥವಾ ಮತ್ಯಾವುದಕ್ಕೋ ಇರುವಾಗ ಅದು ಜಾತೀಯತೆಯನ್ನು ಬಲಪಡಿಸುವುದಿಲ್ಲವೇ? ಚುನಾವಣೆಗಳು ಅಷ್ಟೊಂದು ಮುಕ್ತವಾಗಿಲ್ಲದಿದ್ದಾಗ, ಕೆಲವೊಮ್ಮೆ ಜಾತಿಯ ನೆಂಟರಿಷ್ಟರಿಗೆ ಮುಕ್ತ ಮನವಿಗಳನ್ನು ಮಾಡಿದಾಗ ಅದು ಜಾತೀಯತೆಯನ್ನು ಉತ್ತೇಜಿಸುವುದಿಲ್ಲವೇ? ಮತ್ತು ಭೂಮಾಲಕರು, ಮೇಲ್ಜಾತಿಗಳ ಸ್ಥಾಪಿತ ಹಿತಾಸಕ್ತಿಗಳು ‘ರಣವೀರ ಸೇನಾ’ಗಳಂತಹ ಜಾತಿ ಸಂಘಟನೆಗಳನ್ನು ಸಂಘಟಿಸಿ ಹಳ್ಳಿಯ ಬಡವರನ್ನು ಭಯಭೀತಗೊಳಿಸಿ ದೀನ ದಲಿತರಿಗೆ ಪಾಠ ಕಲಿಸಲು ಪ್ರಯತ್ನಿಸಿದಾಗ ಅದು ಜಾತಿವಾದದ ಅತ್ಯಂತ ಕ್ರೂರ ಮತ್ತು ಕೊಳಕು ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲವೇ?’’ ಬರ್ಧನ್ ಮತ್ತಷ್ಟು ಹೇಳುತ್ತಾರೆ, ‘‘ಜಾತೀಯತೆಯ ವಿರುದ್ಧದ ಹೋರಾಟವು ಬಹುಮುಖಿ ಹೋರಾಟವಾಗಿದೆ. ಸಾಮಾಜಿಕ ಸಮಾನತೆ ಮತ್ತು ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತದೆ, ದುರ್ಬಲರು ಮತ್ತು ವಂಚಿತರಿಗೆ ಸಹಾಯ ಹಸ್ತ ಚಾಚುತ್ತದೆ ಇತ್ಯಾದಿ. ನಿಜವಾದ ಜಾತಿ ಆಧಾರಿತ ಅಸಮಾನತೆಯ ಪರಿಸ್ಥಿತಿಯಲ್ಲಿ ಮೀಸಲಾತಿ ವಾಸ್ತವವಾಗಿ ಜಾತ್ಯತೀತ ಪರಿಹಾರವಾಗಿದೆ. ಏಕೆಂದರೆ ಇದು ಜಾತೀಯ ಕಾರಣದಿಂದಾಗಿ ತಾರತಮ್ಯವನ್ನು ಹೊಡೆದು ಹಾಕುವ ಗುರಿಯನ್ನು ಹೊಂದಿದೆ. ಇದು ಪ್ರಜಾಸತ್ತಾತ್ಮಕವಾಗಿದ್ದು, ತಳಸಮುದಾಯಗಳನ್ನು ಮೇಲಕ್ಕೆತ್ತಿ ಅವರನ್ನು ಉಳಿದವರೊಂದಿಗೆ ಒಂದು ಮಟ್ಟಕ್ಕೆ ತರುವ ಗುರಿಯನ್ನು ಹೊಂದಿದೆ.’’
ಮೀಸಲಾತಿಗೆ ಹೆಚ್ಚೆಂದರೆ ಒಂದು ಶತಮಾನದ ಇತಿಹಾಸ ಇರಬಹುದಷ್ಟೇ. ಮೀಸಲಾತಿ ವಿರೋಧಿಯ ಸಿನಿಕರು ಮೀಸಲಾತಿಯ ಅಂತರಾಳದ ಸ್ವರೂಪವನ್ನು ಅರಿಯದೆ, ಅದರಿಂದ ಜಾತಿಗಳು ಸ್ಥಿರಗೊಳ್ಳುತ್ತವೆ ಎಂಬ ತಳಬುಡವಿಲ್ಲದ ವಾದ ಮಂಡಿಸುತ್ತಾರೆ. ಆದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗೆ ಸಾವಿರ ವರ್ಷಗಳ ಇತಿಹಾಸವೇ ಇದೆ. ಹಾಗಾದರೆ, ಮೀಸಲಾತಿ ಜಾರಿಗೆ ಬರುವ ಮುನ್ನ ನೆಲೆಗೊಂಡಿದ್ದ ಜಾತೀಯತೆಯ ಕರಾಳ ಸ್ವರೂಪದ ಕಬಂಧ ಬಾಹುಗಳನ್ನು ತುಂಡರಿಸಲಿಲ್ಲವೇಕೆ? ಎಂಬ ಸಹಜ ಪ್ರಶ್ನೆ ಉದ್ಭವಿಸುವುದಿಲ್ಲವೇ? ಉತ್ತರವನ್ನು ಯಾರಿಂದ ನಿರೀಕ್ಷೆ ಮಾಡೋಣ?