ಉತ್ತರ-ದಕ್ಷಿಣಗಳು ಎಂದಿಗೂ ವೈರಿಗಳಲ್ಲ ; ಕೇಂದ್ರದ ‘ಮೋದಾನಿ’ ಯಾರಿಗೂ ಬಂಧುವಲ್ಲ!

Update: 2024-02-08 09:01 GMT
Editor : Safwan | Byline : ಶಿವಸುಂದರ್

ಭಾಗ - 2

ಬದಲಿಗೆ ಕೇಳಬೇಕಿರುವ ಅಸಲಿ ಪ್ರಶ್ನೆ :

-ಭಾರತವು ಒಂದು ನಿಜವಾದ ಫೆಡರಲ್ ದೇಶವೇ ಆಗಿದ್ದಲ್ಲಿ ಕಾರ್ಪೊರೇಟ್ ಆದಾಯ ತೆರಿಗೆಯನ್ನು ಒಳಗೊಂಡಂತೆ ಎಲ್ಲಾ ಪ್ರತ್ಯಕ್ಷ ತೆರಿಗೆಗಳನ್ನು ಹಾಕುವ ಪರಮಾಧಿಕಾರ ಕೇವಲ ಕೇಂದ್ರ ಸರಕಾರಕ್ಕೆ ಏಕಿದೆ?

-ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎಲ್ಲಾ 44 ರಾಜ್ಯಗಳಿಗೂ ಇರುವಂತೆ ನಮ್ಮ ದೇಶದ 30 ರಾಜ್ಯಗಳಿಗೂ ಕಾರ್ಪೊರೇಟ್ ತೆರಿಗೆ ಹಾಕುವ ಅಧಿಕಾರ ಏಕಿಲ್ಲ? ಎಂಬುದನ್ನು ಪ್ರಧಾನವಾಗಿ ಕೇಳಬೇಕಿದೆ.

ಹಾಗೆಯೇ ಈ ಬಂಡವಾಳಶಾಹಿ ಉದ್ದಿಮೆಗಳು ಅತ್ಯಧಿಕ ಲಾಭ ಗಳಿಸುತ್ತಿರಲು ಕಾರಣ ಇವುಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು, ಕಲ್ಲಿದ್ದಲು ಇತ್ಯಾದಿ ಖನಿಜಗಳನ್ನು ಅತ್ಯಂತ ಹಿಂದುಳಿದ ರಾಜ್ಯಗಳಿಂದ ಲೂಟಿ ಮಾಡುತ್ತಿರುವುದು. ಒಂದು ವೇಳೆ ಈ ಉದ್ಯಮಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಅಥವಾ ಕಬ್ಬಿಣ, ಬಾಕ್ಸೈಟ್ ಇನ್ನಿತರ ಮೂಲವಸ್ತುಗಳ ಲೂಟಿಗೆ ಕೊಡಬೇಕಾದಷ್ಟು ತೆರಿಗೆಯನ್ನು ಇವನ್ನು ಒದಗಿಸುವ ಜಾರ್ಖಂಡ್, ಬಿಹಾರ, ಛತ್ತೀಸ್ಗಡದಂತ ರಾಜ್ಯಗಳಿಗೆ ತೆರುವಂತೆ ಕಾನೂನು ಮಾಡಿದ್ದರೆ ಅವು ಹೆಚ್ಚುವರಿ ಅನುದಾನಕ್ಕೆ ಕೇಂದ್ರದ ಮೇಲೆ ಅವಲಂಬಿಸುವ ಅಗತ್ಯವೇ ಇರುತ್ತಿರಲಿಲ್ಲ.

ಹೀಗಾಗಿ ಅವುಗಳು ಮಾಡುವ ಲಾಭದ ಮೇಲಿನ ತೆರಿಗೆಯ ಒಂದು ಪಾಲು ಅವುಗಳು ಲೂಟಿ ಮಾಡಿ ಲಾಭ ಮಾಡಿದ ಪ್ರದೇಶಗಳಿಗೆ ಸಲ್ಲಬೇಕಿರುವುದು ಸಾಮಾಜಿಕ ನ್ಯಾಯವೂ ಆಗಿರುತ್ತದೆ.

7) ಆದರೆ ಈಗ ಮೋದಿ ಸರಕಾರ ಮಾಡುತ್ತಿರುವ ರಾಜ್ಯಗಳ ತೆರಿಗೆ ಲೂಟಿ ಈಗ ಅತಿರೇಕಕ್ಕೆ ಮುಟ್ಟಿದೆಯೆಂಬುದು ನಿಜವೇ. ಕೇಂದ್ರ ವಿಧಿಸುವ ಸೆಸ್ ರಾಜಕೀಯ ಅದಕ್ಕೆ ಒಂದು ಸಣ್ಣ ಉದಾಹರಣೆ.

ಮೋದಿ ಸರಕಾರ ತೆರಿಗೆಯ ಮೇಲಿನ ಸೆಸ್ ಹಾಗೂ ಸರ್ಚಾರ್ಜ್ಗಳನ್ನು ಹಿಂದಿನ ಯಾವುದೇ ಸರಕಾರಗಳು ಹೆಚ್ಚಿಸದಷ್ಟು ಮಟ್ಟಿಗೆ ಹೆಚ್ಚಿಸಿದೆ. ನಿಯಮಗಳ ಪ್ರಕಾರ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲಿರುತ್ತದೆಯೇ ವಿನಾ ತೆರಿಗೆಯ ಮೇಲಿನ ಈ ಸೆಸ್ ಅಥವಾ ಸರ್ಚಾರ್ಜ್ಗಳಲ್ಲಿ ರಾಜ್ಯಗಳಿಗೆ ಪಾಲಿರುವುದಿಲ್ಲ. ಇಂತಹ ಹಗಲು ದರೋಡೆಯನ್ನು ಸಂವಿಧಾನ ಕರ್ತರೂ ಊಹಿಸಿರಲಿಲ್ಲವಾದ್ದರಿಂದ ತೆರಿಗೆ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿರುವ ಆರ್ಟಿಕಲ್ 268, 269 ಮತ್ತು 271ರಲ್ಲಿ ಅದರ ಬಗ್ಗೆ ಯಾವ ನಿರ್ದಿಷ್ಟ ಸೂಚನೆಯೂ ಸಂವಿಧಾನದಲ್ಲಿರಲಿಲ್ಲ.

ಹೀಗಾಗಿ 1965ರಲ್ಲಿ ನಾಲ್ಕನೇ ಹಣಕಾಸು ಆಯೋಗ ರಚನೆಯಾಗುವವರೆಗೆ ಸೆಸ್ ಮತ್ತು ಸರ್ಚಾರ್ಜ್ಗಳು ಡಿವಿಸಬಲ್ ಪೂಲ್ (ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಜೊತೆ ಹಂಚಿಕೊಳ್ಳುವ ಪಾಲು)ನ ಭಾಗವೇ ಆಗಿತ್ತು. ಆದರೆ ಸೆಸ್ ಮತ್ತು ಸರ್ಚಾರ್ಜ್ಗಳನ್ನು ಒಂದು ನಿರ್ದಿಷ್ಟ ಕಾಲಾವಧಿಗೆ ಮತ್ತು ಒಂದು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ವಿಧಿಸುವ ಉದ್ದೇಶ ಹೊಂದಿರುವುದರಿಂದ ಅದನ್ನು ಸಾಮಾನ್ಯ ಹಂಚಿಕೆಯೊಂದಿಗೆ ಬೆರೆಸಿದರೆ ನಿರ್ದಿಷ್ಟ ಉದ್ದೇಶ ಈಡೇರುವುದಿಲ್ಲ ಎಂಬ ನೆಪದಿಂದ 4ನೇ ಹಣಕಾಸು ಆಯೋಗದಿಂದಾಚೆಗೆ ಸೆಸ್ ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ.

ಅಂದರೆ ಇಂದು ಮೋದಿ ಸರಕಾರ ಮಾಡುತ್ತಿರುವ ಅತಿರೇಕದ ಸೆಸ್ ಲೂಟಿಯ ಮೂಲ ಕಾಂಗ್ರೆಸ್ ಕಾಲದ ರಾಜಕೀಯ-ಆರ್ಥಿಕತೆಯೇ ಆಗಿದೆ.

ಆದರೆ ವಾಜಪೇಯಿ ನೇತೃತ್ವದ ಎನ್ಡಿಎ-1 ಸರಕಾರ ಅಧಿಕಾರಕ್ಕೆ ಬಂದಾಗ ಭಾರತದ ಸಂವಿಧಾನಕ್ಕೆ 80ನೇ ತಿದ್ದುಪಡಿ ತರುವ ಮೂಲಕ ಸಂವಿಧಾನದ ಆರ್ಟಿಕಲ್ 271ಕ್ಕೆ ತಿದ್ದುಪಡಿಯನ್ನು ತಂದು ಸೆಸ್ ಹಾಗೂ

ಸರ್ಚಾರ್ಜ್ಗಳನ್ನು ಡಿವಿಸಬಲ್ ಪೂಲ್ನಲ್ಲಿ ಸೇರಿಸಬಾರದೆನ್ನುವ ಶಾಸನವನ್ನೇ ಮಾಡಿಬಿಡಲಾಯಿತು.

ಮೋದಿ ಸರಕಾರ 14ನೇ ಹಣಕಾಸು ಆಯೋಗದ ಅವಧಿಯಲ್ಲೇ ಸೆಸ್ ಮತ್ತು ಸರ್ಚಾರ್ಜ್ಗಳನ್ನು ಹೆಚ್ಚಿಸುವ ಮೂಲಕ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ತೆರಿಗೆ ಪಾಲಿನಲ್ಲಿ ಸರಾಸರಿ ಶೇ. 8ರಷ್ಟನ್ನು ದರೋಡೆ ಮಾಡಿದೆ.

15ನೇ ಹಣಕಾಸು ಆಯೋಗದಲ್ಲಂತೂ ಈ ಹಗಲು ದರೋಡೆ ದೊಡ್ಡ ಪ್ರಮಾಣದಲ್ಲಿ ಇನ್ನೂ ಐದು ವರ್ಷಗಳ ಕಾಲ ನಡೆಯಲಿದೆ.

15ನೇ ಆಯೋಗದ ಪ್ರಕಾರ ಕೇಂದ್ರ ಸರಕಾರದ ಒಟ್ಟಾರೆ ತೆರಿಗೆ ಸಂಗ್ರಹ 2021-26ರ ಐದು ವರ್ಷದ ಅವಧಿಯಲ್ಲಿ ರೂ. 135.2 ಲಕ್ಷ ಕೋಟಿಯಷ್ಟಾಗಲಿದೆಯೆಂದು ಅಂದಾಜಿಸಲಾಗಿದೆ. ಆಯೋಗವು ರಾಜ್ಯದ ಪಾಲನ್ನು ಶೇ.41 ಎಂದು ನಿಗದಿಗೊಳಿಸಿದೆ. ಆದ್ದರಿಂದ ರಾಜ್ಯಗಳ ಪಾಲು ರೂ. 55 ಲಕ್ಷ ಕೋಟಿಗಳಾಗಬೇಕು. ಅಲ್ಲವೇ?

ಆದರೆ ಹಣಕಾಸು ಆಯೋಗವು ಇದರಲ್ಲಿ ಕೇವಲ 103 ಲಕ್ಷ ಕೋಟಿ ರೂ.ಗಳನ್ನು ಮಾತ್ರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕೆಂದು ತಿಳಿಸಿದೆ. ಏಕೆಂದರೆ ಇನ್ನುಳಿದ 32 ಲಕ್ಷ ಕೋಟಿ ರೂ.ಗಳು ಅಂದರೆ ಶೇ. 23ರಷ್ಟು ಸೆಸ್ ಮತ್ತು ಸರ್ಚಾರ್ಜ್ಗಳಿಂದ ಸಂಗ್ರಹಿಸಲಾಗುವುದೆಂದು ಅಂದಾಜಿಸಿದೆ. ಹೀಗಾಗಿ 2021-26ರ ಅವಧಿಯಲ್ಲಿ ರಾಜ್ಯಗಳ ಪಾಲು 103 ಲಕ್ಷ ಕೋಟಿ ರೂ.ಗಳ ಶೇ. 41ರಷ್ಟು (42.2 ಲಕ್ಷ ಕೋಟಿ ರೂ.ಗಳಿಗೆ) ಇಳಿಯಲಿದೆ.

ಅಂದರೆ ರಾಜ್ಯಗಳಿಗೆ ಸಲ್ಲಬೇಕಿರುವ 12.8 (55-42.2) ಲಕ್ಷ ಕೋಟಿ ರೂ.ಗಳಷ್ಟು ಸಂಪನ್ಮೂಲವನ್ನು ಮೋದಿ ಸರಕಾರ ಹಗಲು ದರೋಡೆ ಮಾಡಲಿದೆ.

ಆದರೆ ಮೊನ್ನೆ ಮೋದಿ ಸರಕಾರವೇ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿರುವಂತೆ ಕೇಂದ್ರ ತೆರಿಗೆಯಲ್ಲಿ ಸೆಸ್ನ ಪಾಲು ಶೇ. 23 ಅಲ್ಲ. ಅದು ಶೇ. 28ಕ್ಕೇ ಏರಿದೆ. ಅಂದರೆ ರಾಜ್ಯಗಳ ಜೊತೆ ಈಗ ಕೇಂದ್ರ ಹಂಚಿಕೊಳ್ಳಲಿರುವುದು 103 ಲಕ್ಷ ಕೋಟಿಯಲ್ಲ. ಬದಲಿಗೆ ಕೇವಲ 97 ಲಕ್ಷ ಕೋಟಿ ರೂ.

ಅಂದರೆ ಕೇವಲ ಸೆಸ್ ಎನ್ನುವ ದರೋಡೆ ನೀತಿಯ ಮುಖಾಂತರ ಮೋದಿ ಸರಕಾರ ಕರ್ನಾಟಕದಂಥ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ 39 ಲಕ್ಷ ಕೋಟಿ ರೂ. ವಂಚಿಸುತ್ತಿದೆ.

8) ಆದರೆ ಮೋದಿ ಸರಕಾರ ಕೇವಲ ಸೆಸ್ ಬಾಬತ್ತಿನಲ್ಲಿ ವಂಚನೆ ಮಾಡಿ ಲೂಟಿ ಮಾಡಿರುವ ಈ 39 ಲಕ್ಷ ಕೋಟಿ ಹಣ ಉತ್ತರದ ರಾಜ್ಯಗಳಿಗೆ ವಿಶೇಷವಾಗಿಯೇನೂ ಹಂಚಿಕೆಯಾಗುವುದಿಲ್ಲ. ಅದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅದಾನಿ ಆ್ಯಂಡ್ ಕೋ ಕಾರ್ಪೊರೇಟ್ ಕುಳಗಳಿಗೆ ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹ ಧನ, ವಿಶೇಷ ಉತ್ತೇಜನ, ನಷ್ಟ ಪರಿಹಾರ, ಅವರು ಪಡೆದ ಸಾಲ ವಾಪಸ್ ಕೊಡದಿದ್ದರೆ ಅದಕ್ಕೆ ಬ್ಯಾಂಕುಗಳಿಗೆ ಪರಿಹಾರ ಇತ್ಯಾದಿಗಳಿಗೆ ವಿನಿಯೋಗವಾಗುತ್ತದೆ.

ಆದ್ದರಿಂದಲೇ ಇದು ಉತ್ತರ ವರ್ಸಸ್ ದಕ್ಷಿಣದ ನಡುವಿನ ಯುದ್ಧವಲ್ಲ. ಬದಲಿಗೆ ಬಡಭಾರತ ವರ್ಸಸ್ ಮೋದಾನಿ ನಡುವಿನ ಆರ್ಥಿಕ ಮತ್ತು ರಾಜಕೀಯ ಯುದ್ಧವಾಗಿದೆ.

ಆದ್ದರಿಂದಲೇ ಈ ಹೋರಾಟ ಜನರ ಪಾಲು ಜನರಿಗೆ ಎಂದಾಗಬೇಕು. ‘ನನ್ನ ತೆರಿಗೆ ನನ್ನ ಹಕ್ಕು- ಕಾರ್ಪೊರೇಟ್ಗಳಿಗೆ ಇದರಲ್ಲಿ ಪಾಲಿಲ್ಲ’ ಎಂದಾಗಬೇಕು. ಜನರ ತೆರಿಗೆ ಜನರ ಕಲ್ಯಾಣಕ್ಕೆ ವ್ಯಯವಾಗಬೇಕೆಂಬ ಸ್ವರೂಪ ಪಡೆಯಬೇಕು.

9) ಅದಾಗಬೇಕೆಂದರೆ ಭಾರತವು ಯೂನಿಯನ್ ಆಫ್ ಸ್ಟೇಟ್ಸ್ - ರಾಜ್ಯಗಳ ಯೂನಿಯನ್ ಆಗದೆ ಫೆಡರೇಶನ್ ಆಫ್ ಸ್ಟೇಟ್ಸ್- ಸ್ವಾಯತ್ತ ರಾಜ್ಯಗಳ ಸಂಯುಕ್ತ ಒಕ್ಕೂಟವಾಗಬೇಕು. ಅದನ್ನು ಸಾಧಿಸಬೇಕೆಂದರೆ ಆಗ್ರಹಿಸಬೇಕಿರುವುದು:

-ಜನರನ್ನು ಸುಲಿಯುವ ಪ್ರತಿಗಾಮಿ ತೆರಿಗೆ ವ್ಯವಸ್ಥೆಯಾದ ಜಿಎಸ್ಟಿಯಲ್ಲಿ ಹೆಚ್ಚಿನ ಪಾಲನ್ನಲ್ಲ.

ಜಿಎಸ್ಟಿಯನ್ನೇ ರದ್ದು ಮಾಡಬೇಕೆಂದು ಆಗ್ರಹಿಸಬೇಕು.

ವರಮಾನಕ್ಕೆ ತಕ್ಕಂತೆ ವಿಧಿಸುವ ತೆರಿಗೆಯ ಪಾಲು ಪ್ರಧಾನವಾಗಬೇಕು

-ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿಗೆ ಬೇಡುವುದಲ್ಲ.

ರಾಜ್ಯಗಳಿಗೂ ಪ್ರತ್ಯಕ್ಷ ತೆರಿಗೆ ವಿಧಿಸುವ ಅಧಿಕಾರ ನೀಡುವಂತೆ ಸಂವಿಧಾನ ತಿದ್ದುಪಡಿಯಾಗಬೇಕು.

-ಸೆಸ್ಗಳ ಪ್ರಮಾಣ ಕಡಿಮೆ ಮಾಡುವುದಲ್ಲ.

ದೇಶದ ಜನರ ಅಭಿವೃದ್ಧಿಯ ಬಾಬತ್ತಿನಲ್ಲಿ ಕೇಂದ್ರಕ್ಕೆ ಸಂವಿಧಾನ ಕೊಟ್ಟಿರುವ ಅಧಿಕಾರ ವ್ಯಾಪ್ತಿ ಸಾಂವಿಧಾನಿಕವಾಗಿ ಕಡಿಮೆಯಾಗಬೇಕು. ಬದಲಿಗೆ ಆ ವಿಷಯಗಳಲ್ಲಿ ರಾಜ್ಯ ಸರಕಾರಗಳಿಗೆ ಹಾಗೂ ಮೂರನೇ ಹಂತದ ಚುನಾಯಿತ ಸಂಸ್ಥೆಗಳಿಗೆ (ಪಂಚಾಯತ್) ಅಧಿಕಾರ ಹಾಗೂ ತೆರಿಗೆ ಹಕ್ಕು ಹೆಚ್ಚಬೇಕು

- ಹಣಕಾಸು ಆಯೋಗವು ಪ್ರಜಾತಾಂತ್ರೀಕರಣಗೊಳ್ಳಬೇಕು ಮತ್ತು ಉತ್ತರದಾಯಿಯಾಗಿರಬೇಕು. ಹಾಲಿ ಹಣಕಾಸು ಆಯೋಗದ ಮಾನದಂಡಗಳು ಸಂಪೂರ್ಣವಾಗಿ ಬದಲಾಗಬೇಕು.

- ಭಾರತವು ಕಾರ್ಪೊರೇಟ್ ಚಾಲಿತ ಪ್ರಜಾತಂತ್ರವಾಗದೆ ನಿಜವಾದ ಜನತಂತ್ರವಾಗಬೇಕು.

ನವ ಉದಾರವಾದಿ ನೀತಿಗಳನ್ನು ಕೈಬಿಟ್ಟು ಸಂವಿಧಾನದ ಪ್ರಭುತ್ವ ನಿರ್ದೇಶನಾ ತತ್ವಗಳ ಆಧಾರದಲ್ಲಿ ಕಲಾ್ಯಣ ರಾಜ್ಯವಾಗುವತ್ತ ಮರಳಬೇಕು.

-ಸಂವಿಧಾನ ಸಭೆಯಲ್ಲಿ ಕೆಟಿ ಶಾ ಮತ್ತು ಮೌಲಾನಾ ಹಝರತ್ ಮೊಹಾನಿಯವರು ಪ್ರತಿಪಾದಿಸಿದಂತೆ ಭಾರತವು "Union Of Indian Socilaistic Republics' (ಸಮಾಜವಾದಿ ಗಣರಾಜ್ಯಗಳ ಭಾರತೀಯ ಯೂನಿಯನ್) ರೀತಿಯಲ್ಲಿ ಪುನರ್ ರಚಿತವಾಗಬೇಕು. ಅಂದರೆ ಭಾರತ ಯೂನಿಯನ್ನೊಳಗಿನ ಪ್ರತಿಯೊಂದು ರಾಜ್ಯವೂ ಸ್ವಾಯತ್ತ ಸಮಾಜವಾದಿ ಗಣರಾಜ್ಯಗಳಾಗಿದ್ದು ಒಕ್ಕೂಟದೊಳಗಿನ ಸಮಭಾಗಿ ಘಟಕಗಳಾಗಿರಬೇಕು.

ಹೀಗಾಗಿ ಇದು ಒಂದು ಜನರ ಪ್ರಜಾತಾಂತ್ರಿಕ ಸಂಘರ್ಷವಾಗಬೇಕು. ಕಾಂಗ್ರೆಸ್ನ ಚುನಾವಣಾ ಹೋರಾಟದ ಒಂದು ಪಯತ್ನವಾಗಿ ಉಳಿಯಬಾರದು. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಶಿವಸುಂದರ್

contributor

Similar News