ಅಂಕೋಲಾ: ಕಂದಕಕ್ಕೆ ಉರುಳಿದ ಬಸ್; ಚಾಲಕ, ನಿರ್ವಾಹಕ ಸೇರಿ 49 ಪ್ರಯಾಣಿಕರಿಗೆ ಗಾಯ
ಅಂಕೋಲಾ: ಇಲ್ಲಿನ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಕಂದಕಕ್ಕೆ ಉರುಳಿ ಮೂರು ಬಾರಿ ಪಲ್ಟಿಯಾದ ಪರಿಣಾಮ ಚಾಲಕ, ನಿರ್ವಾಹಕ ಸೇರಿ ಒಟ್ಟು 49 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಅಂಕೋಲಾ ತಾಲೂಕಿನ ವಡ್ಡಿ ಘಾಟ್‌ನ ಅಪಾಯಕಾರಿ ತಿರುವಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ವಿವರ:
ಕುಮಟಾ-ಶಿರಸಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಶಿರಸಿಗೆ ತೆರಳುವ ಬಸ್‌ಗಳ ಮಾರ್ಗವನ್ನು ವಡ್ಡಿ ಮೂಲಕ ಬದಲಿಸಲಾಗಿತ್ತು. ಈ ಮಾರ್ಗದ ರಾಜ್ಯ ಹೆದ್ದಾರಿಯ ಘಟ್ಟದ ಪ್ರದೇಶದಲ್ಲಿ ಅಪಾಯಕಾರಿಯಾದ ಹಾಗೂ ಕಡಿದಾದ ತಿರುವುಗಳಿವೆ. ಈ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದು, ಮೂರು ಬಾರಿ ಪಲ್ಟಿಯಾಗಿದೆ.
ಬಳ್ಳಾರಿಯಿಂದ ಕುಮಟಾ ಕಡೆಗೆ ಬರುತ್ತಿದ್ದ ಕುಮಟಾ ಘಟಕಕ್ಕೆ ಸೇರಿದ ಈ ಬಸ್‌ನಲ್ಲಿ ಘಟನೆಯ ವೇಳೆ ಒಟ್ಟು 49 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ಮೇಲೆತ್ತಿದ್ದಾರೆ. ನಂತರ ಖಾಸಗಿ ವಾಹನಗಳ ಮೂಲಕ ಅವರನ್ನು ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಂಕೋಲಾ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಮಾರ್ಗದ ವಡ್ಡಿ ಘಾಟ್‌ನ ತಿರುವುಗಳು ತೀರಾ ಅಪಾಯಕಾರಿ ಸ್ವರೂಪದಲ್ಲಿರುವ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗಲೀಕರಣ ಮತ್ತು ದುರಸ್ತಿಗೊಳಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಜಿ.ಪಂ ಸದಸ್ಯ ಜಿ.ಎಂ.ಶೆಟ್ಟಿ ಅವರು ಘಟನಾ ಸ್ಥಳದಲ್ಲೇ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.