ಭಟ್ಕಳ: ತಂಝೀಮ್ ಎ ಇಸ್ಲಾಹ್ ಚುನಾವಣೆಗೆ ದಿನಾಂಕ ನಿಗದಿ; ಸದಸ್ಯತ್ವ ಅಭಿಯಾನ
ಭಟ್ಕಳ: ಮಜ್ಲಿಸ್–ಎ–ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಮುಂದಿನ 3 ವರ್ಷದ ಅವಧಿಗಾಗಿ ವಾರ್ಷಿಕ ಚುನಾವಣೆಯು ಏಪ್ರಿಲ್ 12, 2026 ರಂದು ನಡೆಯಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನದ್ವಿ ತಿಳಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ, ಸದಸ್ಯತ್ವವಿರುವವರ ಎಲ್ಲಾ ಬಾಕಿ ಶುಲ್ಕಗಳನ್ನು ಮುಂಗಡವಾಗಿ ಪಾವತಿಸಬೇಕಾಗಿದ್ದು, ಜನವರಿ 12, 2026 ರ ಮೊದಲು ಬಾಕಿ ಪಾವತಿಸದವರು ಮತದಾನದಲ್ಲಿ ಭಾಗಿಯಾಗಲು ಅರ್ಹರಾಗುವುದಿಲ್ಲ ಎಂದು ನದ್ವಿ ಸ್ಪಷ್ಟಪಡಿಸಿದ್ದಾರೆ.
ಹೊಸ ಸದಸ್ಯರಿಗಾಗಿ ನಿಯಮಾವಳಿ ಪ್ರಕಾರ, ಡಿಸೆಂಬರ್ 6 ರ ಮಧ್ಯರಾತ್ರಿ ಮೊದಲು ಸದಸ್ಯತ್ವ ಅರ್ಜಿ ಸಲ್ಲಿಸಿ, ಡಿಸೆಂಬರ್ 12 ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರ ಸದಸ್ಯತ್ವವನ್ನು ಅನುಮೋದಿಸಿಕೊಂಡರೆ ಮಾತ್ರ ಮತದಾನದ ಹಕ್ಕು ದೊರೆಯುತ್ತದೆ. ಡಿಸೆಂಬರ್ 6 ನಂತರ ಬಂದ ಅರ್ಜಿಗಳು ಈ ಚುನಾವಣೆಗೆ ಮತದಾನ ಮಾಡಲು ಅರ್ಹತೆ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಚುನಾವಣಾ ರಚನೆ ಕೂಡ ಬದಲಿಸಲಾಗಿದೆ: ಹಿಂದಿನ 35 ಸದಸ್ಯರ ಬದಲು, ಈ ಬಾರಿ ವಾರ್ಡ್‌ವಾರು 45 ಸದಸ್ಯರನ್ನು ಸಾರ್ವಜನಿಕವಾಗಿ ಆಯ್ಕೆ ಮಾಡಲಾಗುವುದು ಎಂದು ನ. 25 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಚುನಾವಣಾ ಹಂತಗಳು ಹೀಗಿವೆ: ಮೊದಲು ಹಳೆಯ ಆಡಳಿತದಿಂದ 10 ಸದಸ್ಯರನ್ನು ಆಯ್ಕೆ ಮಾಡಲಾಗುವುದು, ನಂತರ ಭಟ್ಕಳ ನಗರದಲ್ಲಿ ವಾರ್ಡ್‌ವಾರು ಚುನಾವಣೆ ಮೂಲಕ 45 ಸದಸ್ಯರನ್ನು ಆಯ್ಕೆ ಮಾಡಲಾಗುವುದು. ನಂತರ ಹೊಸ ಆಡಳಿತ 10 ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದ್ದು, ಅಧ್ಯಕ್ಷರು 3 ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಲು ಹಕ್ಕು ಹೊಂದಿದ್ದಾರೆ.
ವಿಸರ್ಜಿತ ಆಡಳಿತದಲ್ಲಿ ಎರಡು ಅವಧಿ ಸತತವಾಗಿ ಸೇವೆ ಸಲ್ಲಿಸಿದವರು ಮೂರನೇ ಬಾರಿ ಆ ಪಟ್ಟಿಗೆ ಆಯ್ಕೆ ಆಗುವುದಿಲ್ಲ. ಮುಂದುವರಿಯಲು ಬಯಸಿದರೆ ಅವರು ನೇರ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕು.
ಭಟ್ಕಳದ ಸಮರ್ಥ, ಪ್ರತಿಭಾವಂತ ಯುವಕರನ್ನು ತಂಝೀಮ್ ಸದಸ್ಯರಾಗಿ ಸೇರ್ಪಡೆಗೊಳಿಸಿ, ಮತದಾನದ ಹಕ್ಕನ್ನು ಉಪಯೋಗಿಸಿ, ಸಂಘಟನೆಯನ್ನು ಮುನ್ನೆಡೆಸಲು ಯುವಜನರು ಸಕ್ರಿಯವಾಗಬೇಕು ಎಂದು ಅಬ್ದುಲ್ ರಖೀಬ್ ಎಂ.ಜೆ. ಕರೆ ನೀಡಿದ್ದಾರೆ.