ಭುವನೇಶ್ವರ ಕೆಐಐಟಿಯಲ್ಲಿ ಮತ್ತೊಬ್ಬಳು ನೇಪಾಳಿ ವಿದ್ಯಾರ್ಥಿನಿ ಮೃತ್ಯು
PC: x.com/htTweets
ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯ ಹಾಸ್ಟೆಲ್ ಕೊಠಡಿಯಲ್ಲಿ 20 ವರ್ಷ ವಯಸ್ಸಿನ ನೇಪಾಳ ಮೂಲದ ಬಿಟೆಕ್ ವಿದ್ಯಾರ್ಥಿನಿಯೊಬ್ಬಳ ಶವ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿರುವುದು ಪತ್ತೆಯಾಗಿದೆ. ಇದೇ ಸಂಸ್ಥೆಯಲ್ಲಿ ಕಳೆದ ಫೆಬ್ರುವರಿ 16ರಂದು ಪ್ರಕೃತಿ ಲಮ್ಸಲ್ ಎಂಬ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು.
ವಿದ್ಯಾರ್ಥಿನಿಯರ ಹಾಸ್ಟೆಲ್ ನ 111ನೇ ಸಂಖ್ಯೆಯ ಕೊಠಡಿಯಲ್ಲಿ ಬಿಟೆಕ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಈಕೆ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಬಿಟೆಕ್ ಪದವಿ ಪಡೆಯುತ್ತಿದ್ದಳು. ಈಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
"ನೇಪಾಳಿ ವಿದ್ಯಾರ್ಥಿನಿಯೊಬ್ಬಳ ಶವ ಪತ್ತೆಯಾಗಿರುವುದು ನಿಜ. ಈಕೆ ಬಹುಶಃ ಕೆಐಐಟಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕು" ಎಂದು ಪೊಲೀಸ್ ಆಯುಕ್ತ ಎಸ್.ದೇವದತ್ತ ಸಿಂಗ್ ಹೇಳಿದ್ದಾರೆ. ನೇಪಾಳಿ ವಿದ್ಯಾರ್ಥಿನಿ ಸಾವಿನ ಬಗ್ಗೆ ಕೆಐಐಟಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.