×
Ad

ಕಲಿಗಳಾಗಿ ಶಿವರಾಜ್-ಸುದೀಪ್

Update: 2015-12-20 15:57 IST

ಹ್ಯಾಟ್ರಿಕ್  ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಕೇಳಿಯೇ ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳು ಸಖತ್ ಥ್ರಿಲ್ ಆಗಿದ್ದಾರೆ. 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಮೆಗಾ ಚಿತ್ರಕ್ಕೆ ‘ಕಲಿ’ ಎಂದು ಹೆಸರಿಡಲಾಗಿದೆ. ಕರಿಯ, ಜೋಗಿ ಖ್ಯಾತಿಯ ಪ್ರೇಮ್, ಕಲಿಯನ್ನು ನಿರ್ದೇಶಿಸುತ್ತಿದ್ದಾರೆ.

    

ಬೆಂಗಳೂರಿನಲ್ಲಿ ಕಳೆದ ರವಿವಾರ ನಡೆದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಚಿತ್ರದ ಹೆಸರನ್ನು ಅನಾವರಣ ಗೊಳಿಸಿದರು. ಎಚ್.ಡಿ. ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್, ಮುನಿರತ್ನ ಸೇರಿದಂತೆ ಚಲನ ಚಿತ್ರ, ರಾಜಕೀಯ ರಂಗದ ಅನೇಕ ಗಣ್ಯರು ಕಾರ್ಯ ಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿದರು.

ಸಿ.ಆರ್.ಮನೋಹರ್ ನಿರ್ಮಾಪಕರಾಗಿರುವ ಈ ಚಿತ್ರದ ಇತರ ವಿವರಗಳನ್ನು ಪ್ರೇಮ್, ಇನ್ನೂ ರಹಸ್ಯವಾಗಿಯೇ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಕಮಲಹಾಸನ್ ಕೂಡಾ ನಟಿಸಲಿದ್ದಾರೆಂಬ ಬಲವಾದ ವದಂತಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದ್ದರೂ, ಈ ಬಗ್ಗೆ ಪ್ರೇಮ್ ಮಾತ್ರ ತುಟಿಬಿಚ್ಚುತ್ತಿಲ್ಲ.

ಜೊತೆಗೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬರು, ‘ಕಲಿ’ಗೆ ನಾಯಕಿಯಾಗುವ ಸಾಧ್ಯತೆಯಿದೆ. ಶಿವರಾಜ್ ಈ ಮೊದಲು ಪ್ರೇಮ್ ನಿರ್ದೇಶನದ ಜೋಗಿ ಹಾಗೂ ಅದರ ಮುಂದುವರಿದ ಭಾಗವಾದ ಜೋಗಯ್ಯದಲ್ಲಿ ನಟಿಸಿದ್ದಾರೆ. ಆದರೆ ಸುದೀಪ್, ಇದೇ ಮೊದಲ ಬಾರಿಗೆ ಪ್ರೇಮ್‌ರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವೆಂಬ ದಾಖಲೆ ಸ್ಥಾಪಿಸಿರುವ ಕಲಿ, 2017ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News