550 ಕೋಟಿ ರೂಪಾಯಿ ದಾಖಲೆ ಗಳಿಕೆಯತ್ತ ʼಧುರಂಧರ್ʼ
ಮುಂಬೈ: ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡುತ್ತಿರುವ 'ಧುರಂಧರ್' ಚಿತ್ರ ಯಶಸ್ವಿಯಾಗಿ ಶುಕ್ರವಾರ ಎರಡನೇ ವಾರಾಂತ್ಯವನ್ನು ಪೂರೈಸಿದ್ದು, ಎರಡನೇ ಸೋಮವಾರ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಆರಂಭಿಕ ದಿನದ ಗಳಿಕೆಯ ದಾಖಲೆಯನ್ನೂ ಮೀರಿ ಎರಡನೇ ಸೋಮವಾರ ಭಾರಿ ಗಳಿಕೆ ಸಾಧಿಸಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ 400 ಕೋಟಿ ಹಾಗೂ ವಿಶ್ವಾದ್ಯಂತ 550 ಕೋಟಿ ರೂಪಾಯಿಯ ಮೈಲುಗಲ್ಲು ಸಾಧಿಸುವತ್ತ ಮುನ್ನಡೆದಿದೆ.
ಸ್ಕ್ಯಾನ್‍ಲಿಕ್ ಪ್ರಕಾರ, 11ನೇ ದಿನ ಅಂದರೆ ಎರಡನೇ ಸೋಮವಾರ ಈ ಚಿತ್ರ 29 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದಿತ್ಯ ಧರ್ ನಿರ್ಮಾಣದ ಚಿತ್ರ ಭಾರತೀಯ ಬಾಕ್ಸ್ ಆಫೀಸ್‍ನಲ್ಲಿ ಆರಂಭಿಕ ದಿನದ ಗಳಿಕೆಯಾದ 28 ಕೋಟಿ ರೂಪಾಯಿ ಮೈಲುಗಲ್ಲನ್ನು ಎರಡನೇ ಸೋಮವಾರ ದಾಟಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್.ಮಾಧವನ್ ತಾರಾಗಣದಲ್ಲಿರುವ ಚಿತ್ರ ವಾರದ ದಿನ ಇಷ್ಟೊಂದು ಗಳಿಕೆ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಚಿತ್ರ ಈಗಾಗಲೇ 379.5 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಜತೆಗೆ ಸಾಗರೋತ್ತರ ಪ್ರದೇಶಗಳಲ್ಲಿ 123.25 ಕೋಟಿ ರೂಪಾಯಿ ಆದಾಯ ಗಳಿಸಿರುವ ಚಿತ್ರ, ಭಾರತದ ಒಟ್ಟು ಸಂಗ್ರಹವಾದ 420.75 ಕೋಟಿ ಸೇರಿಸಿದರೆ ಒಟ್ಟು 544 ಕೋಟಿ ರೂಪಾಯಿ ತಲುಪಿದೆ. ಅಂದರೆ ಚಿತ್ರ ವಿಶ್ವಾದ್ಯಂತ 550 ಕೋಟಿ ರೂಪಾಯಿ ಮೈಲುಗಲ್ಲು ದಾಟುವ ದಿನ ದೂರವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೊದಲನೇ ರವಿವಾರ ದಾಖಲೆ 43 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮೊದಲ ವಾರ ಚಿತ್ರ 207.25 ಕೋಟಿ ರೂಪಾಯಿ ಆದಾಯ ದಾಖಲಿಸಿತ್ತು. ಎರಡನೇ ಶುಕ್ರವಾರ 32.5 ಕೋಟಿ ಹಾಗೂ ಎರಡನೇ ಶನಿವಾರ ಹಾಗೂ ರವಿವಾರ ದಾಖಲೆಯ 53 ಕೋಟಿ ಹಾಗೂ 58 ಕೋಟಿ ಆದಾಯ ಗಳಿಸಿತ್ತು. ಆರಂಭಿಕ ಅಂದಾಜಿನಂತೆ ಎರಡನೇ ಸೋಮವಾರದ ಗಳಿಕೆ 29 ಕೋಟಿ ರೂಪಾಯಿ ತಲುಪಿದೆ.