ಈ ಕ್ರಿಸ್ಮಸ್ ಗೆ ‘ಮಾರ್ಕ್’ ವರ್ಸಸ್ ‘45’; ಕನ್ನಡದ ಎರಡು ಮೆಗಾ ಸಿನಿಮಾಗಳ ಬಿಡುಗಡೆ
Photo: X
ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕನ್ನು Zee ಕೊಂಡುಕೊಂಡಿದೆ.
ಇದೇ ಡಿಸೆಂಬರ್ 25ರಂದು ಕನ್ನಡದ ಎರಡು ಮೆಗಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಸುದೀಪ್ ಅವರ ‘ಮಾರ್ಕ್’ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೀಗ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ‘45’ ಸಿನಿಮಾದ ಟ್ರೇಲರ್ ಸೋಮವಾರ (ಡಿ. 15) ಬಿಡುಗಡೆಯಾಗಿದೆ.
ಬಿಡುಗಡೆಗೂ ಮುನ್ನವೇ ‘45’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟ್ಲೈಟ್ ಹಕ್ಕನ್ನು Zee ಕೊಂಡುಕೊಂಡಿದೆ. ಯುಗಾಂಡದ ‘ಘೆಟೊ ಕಿಡ್ಸ್’ ಜೊತೆಗಿನ ‘ಆ್ಯಪ್ರೊ ಟಪಾಂಗ್’ ಹಾಡಿನ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಸೋಮವಾರ ಟ್ರೇಲರ್ ಬಿಡುಗಡೆ ಮಾಡಿದೆ.
ಟ್ರೇಲರ್ ನಲ್ಲಿ ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಪಾತ್ರಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಹಾಸ್ಯವೂ ಸೇರಿದ ಗಂಭೀರ ಕತೆ ಇರುವಂತೆ ಕಾಣಿಸುತ್ತದೆ. “ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತದೆ. ಅದುವೇ ಜೀವನ” ಎಂದು ಉಪೇಂದ್ರ ಅವರು ಹೇಳುವ ಸಂಭಾಷಣೆ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್ ಕುಮಾರ್ ಸೀರೆ ಉಟ್ಟು ಹುಡುಗಿ ವೇಷದಲ್ಲಿ ಕಂಡುಬರುವ ಅವತಾರ ಮೆಚ್ಚುಗೆ ಪಡೆದಿದೆ.
ಈಗಾಗಲೇ ‘ಮಾರ್ಕ್’ ಸಿನಿಮಾ ಟ್ರೇಲರ್ ಭರ್ಜರಿ ಮೆಚ್ಚುಗೆ ಪಡೆದಿದೆ. ಆ ಚಿತ್ರ ಕೂಡ ಡಿಸೆಂಬರ್ 25ರಂದು ತೆರೆ ಮೇಲೆ ಬರುತ್ತಿದೆ. ಅದರ ಜೊತೆಗೆ ‘45’ ಸಿನಿಮಾ ಕೂಡ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿವೆ.
ಈ ಸಿನಿಮಾದ ಮೂಲಕ ಅರ್ಜುನ್ ಜನ್ಯಾ ನಿರ್ದೇಶಕರಾಗಿ ಭಡ್ತಿ ಹೊಂದಿದ್ದಾರೆ. ಹುಟ್ಟು ಹಾಗೂ ಸಾವಿನ ನಡುವಿನ ಕತೆಯಿದೆ ಎಂದು ಹೇಳಲಾಗುತ್ತದೆ.
ಆಗಸ್ಟ್ ತಿಂಗಳಲ್ಲೇ ‘45’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗಿದೆ. ‘45’ ಚಿತ್ರದ ಟ್ರೇಲರ್ ಉದ್ದಕ್ಕೂ ಗ್ರಾಫಿಕ್ಸ್ ಮುಖ್ಯವಾಗಿ ಎದ್ದು ಕಾಣುತ್ತದೆ.
ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ‘45’ ಸಿನಿಮಾ ನಿರ್ಮಿಸಿದ್ದಾರೆ.