×
Ad

ಡಿಡಿಸಿಎ ತನಿಖೆಗೆ ಎನ್‌ಎಸ್‌ಎ ನೆರವು ಕೋರಿದ ಸುಬ್ರಮಣ್ಯಂ

Update: 2015-12-30 16:15 IST

ಹೊಸದಿಲ್ಲಿ,ಡಿ.29: ತನಿಖೆಯಲ್ಲಿ ತನಗೆ ನೆರವಾಗಲು ಗುಪ್ತಚರ ಸಂಸ್ಥೆ(ಐಬಿ),ಸಿಬಿಐ ಮತ್ತು ದಿಲ್ಲಿ ಪೊಲೀಸ್‌ನ ತಲಾ ಐವರು ಅತ್ಯುತ್ತಮ ಅಧಿಕಾರಿಗಳ ಪೂರ್ವೋತ್ತರ ದಾಖಲೆಗಳನ್ನು ತನಗೆ ಒದಗಿಸುವಂತೆ ಕೋರಿ ಡಿಡಿಸಿಎ ಹಗರಣ ಕುರಿತು ತನಿಖೆಗೆ ದಿಲ್ಲಿ ಸರಕಾರವು ನೇಮಿಸಿರುವ ವಿಚಾರಣಾ ಆಯೋಗದ ಮುಖ್ಯಸ್ಥರಾಗಿರುವ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣ್ಯಂ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಪತ್ರವನ್ನು ಬರೆದಿದ್ದಾರೆ.


ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ಪತ್ರವನ್ನು ಬರೆದಿರುವ ಅವರು, ಭ್ರಷ್ಟಾಚಾರ ನಿಗ್ರಹ ಶಾಖೆಯ ಐವರು ಅತ್ಯುತ್ತಮ ತನಿಖಾಧಿಕಾರಿಗಳ ಪೂರ್ವೋತ್ತರ ದಾಖಲೆಗಳನ್ನು ತನಗೆ ಕಳುಹಿಸುವಂತೆ ಕೋರಿದ್ದಾರೆ.


ಡಿಡಿಸಿಎ ಅವ್ಯವಹಾರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರಕಾರವೇ ದಿಲ್ಲಿ ಸರಕಾರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾನು ದೋವಲ್‌ಗೆ ಪತ್ರವನ್ನು ಬರೆದಿರುವುದಾಗಿ ಸುಬ್ರಮಣ್ಯಂ ಕೇಜ್ರಿವಾಲ್‌ಗೆ ತಿಳಿಸಿದ್ದಾರೆ.


ತನಿಖೆಯಿಂದ ಬೆಳಕಿಗೆ ಬರಬಹುದಾದ ಕೆಲವು ವಿಷಯಗಳು ರಾಷ್ಟ್ರೀಯ ಭದ್ರತೆಗೂ ಸಂಬಂಧಿಸಿರಬಹುದು ಎಂದು ದೋವಲ್‌ಗೆ ತಿಳಿಸಿರುವ ಅವರು, ನೀವು ಮಧ್ಯೆ ಪ್ರವೇಶಿಸಬೇಕು ಮತ್ತು ಸೂಕ್ತ ಅಧಿಕಾರಿಗಳನ್ನು ಒದಗಿಸಬೇಕು ಎಂದು ನಾನು ನಿಮ್ಮನ್ನು ಕೇಳಿಕೊಳ್ಳುವುದು ಮುಖ್ಯವಾಗಿದೆ ಎಂದಿದ್ದಾರೆ.


ಇತರ ಯಾವುದೇ ರಾಜ್ಯ ಕೇಡರ್‌ಗಳಿಂದ ದಕ್ಷರು ಎಂದು ನೀವು ಭಾವಿಸುವ ಯಾವುದೇ ಅಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ನಿಮಗೇ ಬಿಟ್ಟಿದ್ದೇನೆ ಎಂದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News