ಬಿಹಾರದಲ್ಲಿ ಮತ್ತೊಬ್ಬ ಎಂಜಿನಿಯರ್‌ನ ಹತ್ಯೆ
ಪಾಟ್ನಾ, ಡಿ.29: ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಇಬ್ಬರು ಎಂಜಿನಿಯರ್‌ಗಳ ಹತ್ಯೆ ನಡೆದ ಬೆನ್ನಿಗೇ ಮಂಗಳವಾರ ಮತ್ತೊಬ್ಬ ಎಂಜಿನಿಯರ್‌ನ ಗಾಯಗೊಂಡಿದ್ದ ಮೃತ ದೇಹ ವೈಶಾಲಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಹತ ಎಂಜಿನಿಯರ್‌ನನ್ನು ರಿಯಲನ್ಸ್ ಐಟಿಯ ಕ್ವಾಲಟಿ ಎಂಜಿನಿಯರಾಗಿದ್ದ 42ರ ಹರೆಯದ ಅಂಕಿತ್‌ಕುಮಾರ್ ಝಾ ಎಂದು ಗುರುತಿಸಲಾಗಿದೆ.
ಅವರ ಮೃತ ದೇಹವು ಹಣ್ಣಿನ ತೋಟವೊಂದರಲ್ಲಿ ಪತ್ತೆಯಾಗಿದೆ. ರಾಜಪಕರ್ ಪೊಲೀಸ್ ವ್ಯಾಪ್ತಿಯ ಕಾಶಿಪುರ ಗ್ರಾಮದ ಹಣ್ಣಿನ ತೋಟವೊಂದರಲ್ಲಿ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೆಂದು ಪೊಲೀಸ್ ಅಧಿಕೃತ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಅಲ್ಲಿಗೆ ಹೋದ ಪೊಲೀಸರು ಶವದ ಕಿಸೆಯಲ್ಲಿದ್ದ ಡೈರಿ ಹಾಗೂ ಗುರುತಿನ ಚೀಟಿಗಳ ಆಧಾರದಲ್ಲಿ ಹತರಾಗಿರುವವರು ಝಾ ಎಂದು ಗುರುತಿಸಿದರು.
ಶವದ ಕುತ್ತಿಗೆ ಹಾಗೂ ಹೊಟ್ಟೆಗೆ ಹರಿತ ಆಯುಧದಿಂದಾದ ಗಾಯಗಳಿದ್ದವು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರದ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಶತ್ರುಘ್ನ ಝಾ ಎಂಬವರ ಮಗನಾಗಿದ್ದ ಅಂಕಿತ್‌ಕುಮಾರ್ ಝಾ, ನೆರೆಯ ಮುಝಫ್ಫರ್‌ಪುರ ಜಿಲ್ಲೆಯ ನಿವಾಸಿಯಾಗಿದ್ದರೆಂದು ಅವರು ವಿವರಿಸಿದ್ದಾರೆ.
ಝಾರ ಹತ್ಯೆಯ ಕಾರಣದ ಕುರಿತು ತನಿಖೆ ನಡೆಯುತ್ತಿದೆ.
ಎಂಜಿನಿಯರ್‌ಗಳ ಹತ್ಯೆಗಳ ಕುರಿತು ಬಿಹಾರದ ಮುಖ್ಯಮಂತ್ರಿ ನೀತೀಶ್ ಕುಮಾರ್ ಹಾಗೂ ಆರ್‌ಜೆಡಿ ವರಿಷ್ಠ ಲಾಲುಪ್ರಸಾದರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ, ರಾಜ್ಯದಲ್ಲಿ ಮತ್ತೆ ‘ಜಂಗಲ್ ರಾಜ್’ ಬಂದಿರುವುದಕ್ಕೆ ಇದು ಪುರಾವೆಯಾಗಿದೆ ಎಂದಿದ್ದಾರೆ.