ಪಠಾಣ್‌ಕೋಟ್ ದಾಳಿ: ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಸಭೆ ವಿಳಂಬ?
ಹೊಸದಿಲ್ಲಿ, ಜ.4: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಮುಂದಿನ ವಾರ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನಗಳ ವಿದೇಶ ಕಾರ್ಯದರ್ಶಿಗಳ ನಡುವಿನ ಮಾತುಕತೆಯನ್ನು ಭಾರತ ವಿಳಂಬಿಸುವ ಸಾಧ್ಯತೆಯಿದೆ.
ವಿದೇಶ ಕಾರ್ಯದರ್ಶಿಗಳ ನಡುವಿನ ಮಾತುಕತೆ ಜನವರಿ 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದೆ. ಆದರೆ, ಅದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ರಾದ ಅಜಿತ್ ದೋವಲ್ ಮತ್ತು ನಾಸಿರ್ ಖಾನ್ ಜಂಜುವ ನಡುವೆ ಸಮಾಲೋಚನೆ ನಡೆಯಲಿ ಎಂದು ಭಾರತ ಸರಕಾರ ಪಾಕಿಸ್ತಾನಕ್ಕೆ ಸೂಚಿಸುವ ಸಾಧ್ಯತೆಯಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಆದಾಗ್ಯೂ, ಈ ಕುರಿತ ಅಂತಿಮ ನಿರ್ಧಾರ ಮುಂದಿನ ಕೆಲವು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಜೊತೆ ಪಾಕಿಸ್ತಾನದ ಅಚ್ಚರಿಯ ಮಾತುಕತೆ ನಡೆಸಿದ ಒಂದು ವಾರದ ಬಳಿಕ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಇದೇ ಮೊದಲಾಗಿತ್ತು.
ಭಯೋತ್ಪಾದಕರ ಸಂಘಟಿತ ದಾಳಿಯಲ್ಲಿ ಏಳು ಯೋಧರು ಹುತಾತ್ಮರಾಗಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಭಯೋತ್ಪಾದಕ ದಾಳಿ ನಡೆದ ನಂತರ ಎಲ್ಲ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.