×
Ad

ಆರ್‌ಟಿಐ ವ್ಯಾಪ್ತಿಗೆ ಕ್ರಿಕೆಟ್ ಮಂಡಳಿ; ಬಿಸಿಸಿಐ, ಐಪಿಎಲ್ ವಿಭಜನೆ

Update: 2016-01-04 23:46 IST

ಬಿಸಿಸಿಐಯಲ್ಲಿ ಬದಲಾವಣೆಯ ಗಾಳಿ
ಆಮೂಲಾಗ್ರ ಪರಿವರ್ತನೆಗೆ ನ್ಯಾ. ಲೋಧಾ ಸಮಿತಿ ಶಿಫಾರಸು

ಮುಂಬೈ, ಜ. 4: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತದಲ್ಲಿ ಮೂಲಭೂತ ಬದಲಾವಣೆಯಾಗಲು ಸುಪ್ರೀಂ ಕೋರ್ಟ್ ನೇಮಿತ ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿ ಶಿಫಾರಸು ಮಾಡಿದೆ. ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುವುದು, ಬೆಟ್ಟಿಂಗನ್ನು ಕಾನೂನುಬದ್ಧಗೊಳಿಸುವುದು, ಆಟಗಾರರ ಸಂಘವನ್ನು ಸ್ಥಾಪಿಸುವುದು ಮತ್ತು ಇಂಡಿಯನ್ ಪ್ರೀಮಿಯರ್ ಲೀಗನ್ನು ಬಿಸಿಸಿಐಯಿಂದ ಬೇರ್ಪಡಿಸುವುದು- ಈ ನಿಟ್ಟಿನಲ್ಲಿ ಲೋಧಾ ಸಮಿತಿ ಮಾಡಿದ ಮಹತ್ವದ ಶಿಫಾರಸುಗಳಾಗಿವೆ.
ಈ ಮಹತ್ವದ ಬದಲಾವಣೆಗಳು ನಿರೀಕ್ಷಿತ ರೀತಿಯಲ್ಲೇ ಬಂದಿವೆಯಾದರೂ, ಬಿಸಿಸಿಐಯಲ್ಲಿ ನೆಲೆಯೂರಿರುವರು ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಖಚಿತ. ಆರ್‌ಟಿಐ ಮತ್ತು ಮಾನ್ಯತೆ ಪಡೆದ ಆಟಗಾರರ ಸಂಘಕ್ಕೆ ಬಿಸಿಸಿಐ ಈಗಾಗಲೇ ಪ್ರಬಲ ವಿರೋಧ ವ್ಯಕ್ತಪಡಿಸಿದೆ.
‘‘ಸುಧಾರಣೆಗಳ ವಿಷಯದಲ್ಲಿ ಸಮಿತಿ ಮೊದಲು ಮಾಡಿದ್ದು, ಆಡಳಿತದ ವಿವಿಧ ಆಯಾಮಗಳಿಗೆ ಸಂಬಂಧಿಸಿದ 8 ವಿಭಾಗಗಳು ಹಾಗೂ 135 ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯೊಂದನ್ನು ತಯಾರಿಸಿದ್ದು. ಪ್ರಶ್ನಾವಳಿಯ ಪ್ರತಿಗಳನ್ನು ಬಿಸಿಸಿಐ ಪದಾಧಿಕಾರಿಗಳು ಹಾಗೂ ಸಂಬಂಧಿತ ಇತರರು, ಪತ್ರಕರ್ತರು, ಲೇಖಕರು, ವಕೀಲರು, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಾಧೀಶರು, ಮಾಜಿ ರಾಷ್ಟ್ರೀಯ ಆಟಗಾರರು, ಕೋಚ್‌ಗಳು ಮತ್ತು ವಿವಿಧ ರಾಜ್ಯ ಅಸೋಸಿಯೇಶನ್‌ಗಳ ಮುಖ್ಯಸ್ಥರಿಗೆ ಕಳುಹಿಸಲಾಯಿತು’’ ಎಂದು ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ. ಲೋಧಾ ಹೇಳಿದರು.
ನ್ಯಾ. ಲೋಧಾ ಶಿಫಾರಸು ಮಾಡಿದ ಕೆಲವು ಪ್ರಮುಖ ಅಂಶಗಳು ಇಂತಿವೆ:
ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ತರುವುದು
ಬೆಟ್ಟಿಂಗನ್ನು ಕಾನೂನುಬದ್ಧಗೊಳಿಸುವಂತೆ ಶಾಸಕಾಂಗಕ್ಕೆ ಸಲಹೆ ಮಾಡುವುದು
ಆಟಗಾರರ ಸಂಘವನ್ನು ರಚಿಸುವ ಪ್ರಸ್ತಾಪ. ಅನಿಲ್ ಕುಂಬ್ಳೆ, ಮೊಹಿಂದರ್ ಅಮರ್‌ನಾಥ್ ಮತ್ತು ಡಯಾನಾ ಎಡುಲ್ಜಿ ಅವರನ್ನೊಳಗೊಂಡ ಚಾಲನಾ ಸಮಿತಿಯು ಸಂಘವನ್ನು ರಚಿಸುವುದು
ಬಿಸಿಸಿಐ ಮತ್ತು ಐಪಿಎಲ್‌ನ್ನು ಪ್ರತ್ಯೇಕಿಸುವುದು ಹಾಗೂ ಎರಡಕ್ಕೂ ಪ್ರತ್ಯೇಕ ಆಡಳಿತ ಮಂಡಳಿಗಳನ್ನು ರಚಿಸುವುದು
 ಐಪಿಎಲ್‌ನ ಪ್ರಧಾನ ಆಡಳಿತ ಮಂಡಳಿಯನ್ನು ಗವರ್ನಿಂಗ್ ಕೌನ್ಸಿಲ್ ಎಂಬುದಾಗಿ ಕರೆಯಲಾಗುವುದು. ಅದರಲ್ಲಿ ಫ್ರಾಂಚೈಸಿಗಳ 2 ಪ್ರತಿನಿಧಿಗಳು, ಆಟಗಾರರ ಸಂಘದ ಓರ್ವ ಪ್ರತಿನಿಧಿ, ಮಹಾಲೇಖಪಾಲರ ಕಚೇರಿಯ ಓರ್ವ ಪ್ರತಿನಿಧಿ ಸೇರಿದಂತೆ 9 ಸದಸ್ಯರಿರುವರು. ಸೀಮಿತ ಸ್ವಾಯತ್ತೆ ಹೊಂದಿರುವ ಐಪಿಎಲ್ ಆಡಳಿತ ಮಂಡಳಿಯು ಬಿಸಿಸಿಐಗೆ ಉತ್ತರದಾಯಿಯಾಗಿದೆ
ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಸಾಕಷ್ಟು ಪುರಾವೆ ಲಭ್ಯವಾಗದ ಹಿನ್ನೆಲೆಯಲ್ಲಿ ಐಪಿಎಲ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ರಾಮನ್‌ಗೆ ಕ್ಲೀನ್ ಚಿಟ್
ಸಚಿವರು ಅಥವಾ ಸರಕಾರಿ ಅಧಿಕಾರಿಗಳು ಬಿಸಿಸಿಐಯ ಪದಾಧಿಕಾರಿಗಳಾಗುವಂತಿಲ್ಲ. ಪದಾಧಿಕಾರಿಗಳು ಎರಡಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದುವಂತಿಲ್ಲ ಹಾಗೂ 70 ವರ್ಷಕ್ಕಿಂತ ಹೆಚ್ಚಿನವರು ಆಗುವಂತಿಲ್ಲ
ಟೆಸ್ಟ್ ಕ್ರಿಕೆಟ್ ಆಡಿದವರು ಮಾತ್ರ ಆಯ್ಕೆ ಸಮಿತಿಯ ಸದಸ್ಯರು ಆಗಬಹುದು
ತಂಡಗಳ ಆಯ್ಕೆ ಮತ್ತು ಕೋಚಿಂಗ್ ಸೇರಿದಂತೆ ಕ್ರಿಕೆಟ್ ಸಂಬಂಧಿ ವಿಷಯಗಳನ್ನು ಕ್ರಿಕೆಟರುಗಳೇ ನಿಭಾಯಿಸಬೇಕು
ಒಂದು ರಾಜ್ಯದಲ್ಲಿ ಒಂದೇ ಅಸೋಸಿಯೇಶನ್ ಇರುತ್ತದೆ ಹಾಗೂ ಅದು ಬಿಸಿಸಿಐಯ ಪೂರ್ಣ ಸದಸ್ಯತ್ವ ಹೊಂದಿರುತ್ತದೆ ಹಾಗೂ ಮತದಾನದ ಹಕ್ಕಿರುತ್ತದೆ
ಬಿಸಿಸಿಐಗೆ ಮೂರು ಇತರ ಪ್ರಾಧಿಕಾರಗಳನ್ನು ಸೇರ್ಪಡೆಗೊಳಿಸುವುದು ಅವುಗಳೆಂದರೆ- ಓಂಬುಡ್ಸ್‌ಮನ್, ನೀತಿ ವಿಷಯಗಳ ಅಧಿಕಾರಿ ಮತ್ತು ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News