ಜೀವಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಅತಿ ಕಿರಿಯ ಬಾಲಕ ತೇರ್ಗಡೆ
ಕೋಟ (ರಾಜಸ್ಥಾನ), ಜ. 4: ರಾಜಸ್ಥಾನದ ಕೋಟದ 12 ವರ್ಷದ ಬಾಲಕ ಜೀವೇಶ್ ಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ (ಐಬಿಒ)ನ ಎರಡನೆ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಪ್ರಮುಖವಾಗಿ 12ನೆ ತರಗತಿಯ ವಿದ್ಯಾರ್ಥಿಗಳು ಭಾಗವಹಿಸುವ ಸ್ಪರ್ಧೆ ಇದಾಗಿದೆ.
‘‘ಐಬಿಒದ ಮೊದಲ ಸುತ್ತಿನಲ್ಲಿ ತೇರ್ಗಡೆಯಾದ ಅತ್ಯಂತ ಕಿರಿಯ ವಿದ್ಯಾರ್ಥಿ ಜೀವೇಶ್. ಏಳು ವರ್ಷಗಳ ಹಿಂದೆ ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬರು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು’’ ಎಂದು ಹೋಮಿ ಭಾಭಾ ಸೆಂಟರ್ ಫಾರ್ ಸಯನ್ಸ್ ಎಜುಕೇಶನ್ (ಎಚ್‌ಬಿಸಿಎಸ್‌ಇ)ನ ಮಾಜಿ ರಾಷ್ಟ್ರೀಯ ಸಮನ್ವಯಕಾರ ಹಾಗೂ ರಾಮಸ್ವಾಮಿ ರಿಸರ್ಚ್ ಫೆಲೋಶಿಪ್‌ನಲ್ಲಿ ವಿಜ್ಞಾನಿಯಾಗಿರುವ ವಿಜಯ್ ಸಿಂಗ್ ಹೇಳಿದರು.
ಎಚ್‌ಬಿಸಿಎಸ್‌ಇ ನಡೆಸುವ ಪರೀಕ್ಷೆಗೆ 15,000 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಅವರು ತಿಳಿಸಿದರು. ಈ ಪೈಕಿ ಕೇವಲ 3,000 ಮಂದಿ ಎರಡನೆ ಸುತ್ತಿಗೆ ಅರ್ಹತೆ ಗಳಿಸಿಕೊಂಡಿದ್ದಾರೆ ಹಾಗೂ ಅವರಲ್ಲಿ ಜೀವೇಶ್ ಅತಿ ಕಿರಿಯ.
ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪದಕ ಪಡೆಯಲು ಐದು ಸುತ್ತುಗಳಲ್ಲಿ ತೇರ್ಗಡೆಯಾಗಬೇಕಾಗಿದೆ.