ಶ್ರೀರಾಮ ಮಂದಿರ ನಿರ್ಮಾಣದ ಗಡುವು ತಿಳಿಸಲು ಆರೆಸ್ಸೆಸ್ ನಕಾರ
ಪುಣೆ, ಜ.5: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕಟ್ಟಲಾಗುವುದು. ಈ ಕೆಲಸವನ್ನು ಮುಸ್ಲಿಮರು ಹಾಗೂ ಕ್ರೈಸ್ತರ ಕೈಜೋಡಿಸುವಿಕೆಯೊಂದಿಗೆ ಶಾಂತಿಯುತವಾಗಿ ನಡೆಯಲಿದೆಯೆಂದು ಹಿರಿಯ ಆರೆಸ್ಸೆಸ್ ನಾಯಕರೊಬ್ಬರು ಇಂದು ಹೇಳಿದ್ದಾರೆ. ಆದಾಗ್ಯೂ, ಅದರ ಗಡುವನ್ನು ತಿಳಿಸಲು ಅವರು ನಿರಾಕರಿಸಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣವಾಗಲಿದೆಯೆಂದು ತಾನು ಪ್ರಮಾಣ ಮಾಡುತ್ತೇನೆ. ಆದರೆ, ತಾವು ದಿನಾಂಕದ ಬಗ್ಗೆ ಕೇಳಿದರೆ.... ಒಬ್ಬನಿಗೆ ಆತನ ಸಾವಿನ ದಿನಾಂಕ ಎಂದೂ ತಿಳಿದಿರುವುದಿಲ್ಲವೆಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು. ಆದರೆ, ನಿರ್ಮಾಣವು ಶಾಂತಿಯುತವಾಗಿ ನಡೆಯಬೇಕು. ಶ್ರೀರಾಮ ಮಂದಿರ ರಚನೆಗಾಗಿ, ಸಾವಿರಾರು, ಲಕ್ಷಗಟ್ಟಲೆ ಮುಸ್ಲಿಮರು ಬೀದಿಗಳಲ್ಲಿ ಬರಲಿದ್ದಾರೆ. ಕ್ರೈಸ್ತರೂ ಕೈ ಜೋಡಿಸಲಿದ್ದಾರೆ. ಅವರು ಮಾತ್ರವಲ್ಲದೆ, ಎಲ್ಲ ಪಕ್ಷಗಳ ಸದಸ್ಯರೂ ತಮ್ಮಾಂದಿಗೆ ಸೇರಲಿದ್ದಾರೆಂದು ಆರೆಸ್ಸೆಸ್ ಮುಸ್ಲಿಂ ಘಟಕವಾಗಿರುವ ರಾಷ್ಟ್ರೀಯ ಮುಸ್ಲಿಂ ಮಂಚ್‌ನ ಸ್ಥಾಪಕ ಕುಮಾರ್ ಹೇಳಿದರು.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸಹ ಉಪಸ್ಥಿತರಿದ್ದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ದೇಶದ ಜನರು ತಮ್ಮ ಮತ ಯಾವುದಿದ್ದರೂ ‘ಒಂದೇ’ ಪೀಳಿಗೆಯವರಾಗಿದ್ದಾರೆಂದು ಪ್ರತಿಪಾದಿಸಿದರು.
ತನ್ನ ಜೀವಮಾನದಲ್ಲೇ ದೇವಾಲಯ ನಿರ್ಮೀಸುವ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್‌ರ ಪ್ರತಿಜ್ಞೆಯನ್ನು ಜ್ಞಾಪಿಸಿದ ಕುಮಾರ್, ನೇರವಾಗಿ ಉತ್ತರಿಸುವುದರಿಂದ ನುಣುಚಿಕೊಂಡು ಪ್ರತಿಜ್ಞೆಯ ಪಾವಿತ್ರವನ್ನು ಒಬ್ಬ ಅರ್ಥಮಾಡಿಕೊಳ್ಳಬೇಕೆಂದರು.
ರಾಮಜನ್ಮ ಭೂಮಿ ವಿವಾದದ ಬಗ್ಗೆ ಅನೇಕ ಬಾರಿ ಚರ್ಚೆ, ಸಮಾಲೋಚನೆಗಳು ನಡೆದಿವೆ. ಈಗ ಅದು ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿದೆ. ಅದು ಎಲ್ಲ ವಾಸ್ತವಗಳನ್ನು ಪರಿಶೀಲಿಸಲಿ, ಎಲ್ಲ ಪಕ್ಷಗಳ ವಾದಗಳನ್ನು ಆಲಿಸಲಿ ಹಾಗೂ ಬಳಿಕ ನಿರ್ಧಾರ ಕೈಗೊಳ್ಳಲಿ ಎನ್ನುವುದು ತನ್ನ ವೈಯಕ್ತಿಕ ಅನಿಸಿಕೆಯಾಗಿದೆ. ಆದರೆ, ದುರದೃಷ್ಟವಶಾತ್ ಕೆಲವು ಜನರು ವಿವಾದವನ್ನು ಪುನಃ ರಾಜಕೀಯಗೊಳಿಸಲು ಇಚ್ಛಿಸುತ್ತಿದ್ದಾರೆಂದು ಅವರು ಟೀಕಿಸಿದರು.
ಕುಮಾರ್ ಹಾಗೂ ಸಿಂಗ್ ಮಾತ್ರವಲ್ಲದೆ ಸಮಾರಂಭದಲ್ಲಿ ವಿಎಚ್‌ಪಿ ವಕ್ತಾರ ವಿಜಯಶಂಕರ್ ತಿವಾರಿ, ಹಿಂದೂ ಮಹಾಸಭಾದ ಅಧ್ಯಕ್ಷ ಚಂದ್ರಪ್ರಕಾಶ್ ಕೌಶಿಕ್, ಇತಿಹಾಸಕಾರ ಶರದೇಂದು ಮುಖರ್ಜಿ, ಪುರಾತತ್ವ ಶಾಸ್ತ್ರಜ್ಞ ಕೆ.ಎಸ್.ದೀಕ್ಷಿತ್ ಹಾಗೂ ಪತ್ರಕರ್ತ ಮನೋಜ್ ರಘುವಂಶ ಮಾತನಾಡಿದರು.