ಶರೀಫ್ ಜೊತೆ ಚಹಾ ಸೇವನೆಗೆ ಸಿಕ್ಕ ಬಳುವಳಿ ಮೋದಿ ವಿರುದ್ಧ ಕೆಂಡ ಕಾರಿದ ಶಿವಸೇನೆ
ಶರೀಫ್ ಜೊತೆ ಚಹಾ ಸೇವನೆಗೆ ಸಿಕ್ಕ ಬಳುವಳಿ
ಮೋದಿ ವಿರುದ್ಧ ಕೆಂಡ ಕಾರಿದ ಶಿವಸೇನೆ
ಮುಂಬೈ, ಜ. 5: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ, ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಮುಗಿಬಿದ್ದಿದೆ. ಮೋದಿಯ ಲಾಹೋರ್ ರಾಜಕಾರಣವೇ ಈ ಭಯೋತ್ಪಾದಕ ದಾಳಿಗೆ ಕಾರಣವೆಂದು ಹೇಳಿರುವ ಶಿವಸೇನೆ, ‘‘ಜಗತ್ತನ್ನು ಒಗ್ಗೂಡಿಸಲು ಪ್ರಯತ್ನಿಸುವ ಬದಲು’’ ಭಾರತದ ಮೇಲೆ ಗಮನ ಹರಿಸಲು ಮೋದಿಗೆ ಇದು ಪ್ರಶಸ್ತ ಕಾಲ ಎಂದು ವ್ಯಂಗ್ಯವಾಡಿದೆ.
‘‘ನವಾಝ್ ಶರೀಫ್ ಜೊತೆಗೆ ಚಹಾ ಸೇವಿಸಿದ್ದಕ್ಕೆ ಪ್ರತಿಯಾಗಿ ನಮ್ಮ ಏಳು ಸೈನಿಕರು ಹುತಾತ್ಮರಾದರು... ಈಗ ಮಾಡಲಾಗುತ್ತಿರುವ ಒಂದೇ ಒಂದು ರಾಷ್ಟ್ರೀಯ ಕೆಲಸವೆಂದರೆ, ಸೈನಿಕರ ಸಾವುಗಳಿಗೆ ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸುವುದು’’ ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.
‘‘ಆದರೆ, ಈ ಸೈನಿಕರು ಯಾಕೆ ಸತ್ತರು? ಪ್ರಧಾನಿ ಮೋದಿ ಜಗತ್ತನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಭಾರತದ ಮೇಲೆ ಗಮನ ಹರಿಸಬೇಕಾದ ಸಮಯ ಬಂದಿದೆ’’ ಎಂದು ‘ಸಾಮ್ನಾ’ ಹೇಳಿದೆ.
ಇಂದು ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿ ಹಾಗೂ ಸೈನಿಕರ ಸಾವುಗಳಿಗೆ ಪ್ರತೀಕಾರ ತೀರಿಸಿ ಎಂಬ ಬೇಡಿಕೆಗಳು ಬರುತ್ತಿದ್ದವು. ಆದರೆ, ಈಗ ಈ ವಿಷಯದಲ್ಲಿ ಏನೂ ಆಗುತ್ತಿಲ್ಲ ಎಂದು ಶಿವಸೇನೆ ಹೇಳಿದೆ.
ಪಾಕಿಸ್ತಾನವನ್ನು ನಂಬುವುದು ಬೇಡ ಎಂದು ತಾನು ಮೋದಿಗೆ ಎಚ್ಚರಿಕೆ ನೀಡಿದ್ದೆ ಎಂದು ಅದು ಹೇಳಿದೆ. ‘‘ಕಳೆದ ವಾರ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರ ಅತಿಥಿಯಾಗಿ ಪ್ರಧಾನಿ ಮೋದಿ ಲಾಹೋರ್‌ನಲ್ಲಿದ್ದರು. ಪಾಕಿಸ್ತಾನವನ್ನು ನಂಬುವುದು ಬೇಡ ಎಂಬುದಾಗಿ ನಾವು ಆ ಸಮಯದಲ್ಲಿ ಎಚ್ಚರಿಸಿದ್ದೆವು’’ ಎಂದಿದೆ.
ಭಾರತದ ಗಡಿಗಳು ಸುರಕ್ಷಿತವಲ್ಲ ಹಾಗೂ ದೇಶದ ಆಂತರಿಕ ಭದ್ರತೆ ಅಸ್ತವ್ಯಸ್ತವಾಗಿದೆ ಎಂಬುದನ್ನು ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಸಾಬೀತುಪಡಿಸಿದೆ ಎಂದು ಶಿವಸೇನೆ ಹೇಳಿದೆ. ‘‘ಆರು ಭಯೋತ್ಪಾದಕರನ್ನು ಬಲಿಗೊಟ್ಟು ಪಾಕಿಸ್ತಾನ ಭಾರತದ ಸ್ವಾಭಿಮಾನಕ್ಕೆ ಪೆಟ್ಟುಕೊಡುವಲ್ಲಿ ಯಶಸ್ವಿಯಾಗಿದೆ’’ ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸದಿದ್ದರೆ, ಗಣರಾಜ್ಯೋತ್ಸವ ದಿನದಂದು ಭಾರತ ಪ್ರದರ್ಶಿಸುವ ಸೇನಾ ಶಕ್ತಿ, ಶಸ್ತ್ರಾಸ್ತ್ರಗಳ ನೈಪುಣ್ಯತೆ ಹಾಗೂ ಮದ್ದುಗುಂಡುಗಳು ವ್ಯರ್ಥ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.