×
Ad

ಇವರ ಮೇಲೆ ಯಾಕೆ ಕ್ರಮ ಕೈಗೊಳ್ಳುವುದಿಲ್ಲ?

Update: 2016-01-05 23:44 IST


ಮಾನ್ಯರೆ, ಪ್ರತಿಯೊಂದು ಹಿಂದೂ ಸಮಾಜೋತ್ಸವದಲ್ಲಿಯೂ ದಕ್ಷಿಣ ಕನ್ನಡದ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರು ಮುಸ್ಲಿಮರ ಸುನ್ನತ್ ವಿಧಿಯನ್ನು ಅಪಹಾಸ್ಯ ಮಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸುವುದನ್ನು ಮರೆಯುವುದಿಲ್ಲ. ಇವರು ಎಷ್ಟೇ ಪ್ರಚೋದಕ ಭಾಷಣ ಮಾಡಿದರೂ ನಮ್ಮ ಪೊಲೀಸರು ಮಾತ್ರ ಇವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ.
 ಡಿಸೆಂಬರ್ ತಿಂಗಳ ಕೊನೆಯಲ್ಲಿ ಹೊಸಪೇಟೆಯಲ್ಲಿ ಒಬ್ಬ ಮುಸ್ಲಿಮ್ ಫೋಟೊಗ್ರಾಫರ್‌ರ ಹೆಸರಲ್ಲಿ ಸಂಘ ಪರಿವಾರದವರೇ ಹಿಂದೂಗಳ ವಿರುದ್ಧ ಪ್ರಚೋದಕ ಕರಪತ್ರ ಮುದ್ರಿಸಿ ಕೋಮು ಗಲಭೆ ಸೃಷ್ಟಿಸಿದ್ದನ್ನು ಚರ್ಚಿಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ವೇಳೆ, ಕಲ್ಲಡ್ಕದ ಆರೆಸ್ಸೆಸ್‌ನ ಈ ಮುಖಂಡರ ಹೀನ ಕೋಮು ಪ್ರಚೋದಕ ಚಟುವಟಿಕೆಯ ಬಗ್ಗೆಯೂ ಅವರ ಗಮನ ಸೆಳೆದಾಗ, ಕರಾವಳಿಯಲ್ಲಿಯ ಆರೆಸ್ಸೆಸ್‌ನ ಎಲ್ಲ ಚಟುವಟಿಕೆ ತಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇನ್ನು ಒಂದೇ ಒಂದು ಸಭೆಯಲ್ಲೂ ಕಲ್ಲಡ್ಕದ ಮುಖಂಡ ಕೋಮು ಪ್ರಚೋದಕ ಭಾಷಣ ಮಾಡಿದರೆ ಸಾಕು ಅವರ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ದ.ಕ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಆದೇಶ ಕೊಡುವುದಾಗಿ ಮುಖ್ಯಮಂತ್ರಿಗಳು ಕೋಸೌವೇಗೆ ವಾಗ್ದಾನ ಮಾಡಿದ್ದರು. ಆದರೆ ಮೊನ್ನೆ ರವಿವಾರ (ಜನವರಿ ಮೂರರಂದು) ಉಡುಪಿಯ ಹಿರಿಯಡ್ಕದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡುತ್ತಾ- ‘‘ಹಿಂದೂಗಳಲ್ಲಿ ಕಿವಿ ತೂತು ಮಾಡುವುದಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನ್ವಯ ಆಗುವುದಾದರೆ, ಚರ್ಮದ ತುಂಡು ಹೋಗುವುದಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಯಾಕೆ ಅನ್ವಯವಾಗುವುದಿಲ್ಲ’’ ಎಂದು ಮುಸ್ಲಿಮರನ್ನು ಗುರಿಮಾಡಿ ಲೇವಡಿ ಮಾಡಿದ್ದಾರೆ. ಇದು ಹೀನ ಕೋಮು ಪ್ರಚೋದನೆ ಅಲ್ಲವೇ? ಹಾಗಾದರೆ ಮುಖ್ಯ ಮಂತ್ರಿಗಳು ತಮ್ಮ ವಾಗ್ದಾನದಂತೆ ದ.ಕ. ಪೊಲೀಸರಿಗೆ ಇನ್ನೂ ಯಾಕೆ ಕಲ್ಲಡ್ಕದ ಮುಖಂಡನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶಿಸಿಲ್ಲ?
   
 ಕಳೆದ 35 ವರ್ಷದಿಂದ ಅಮೆರಿಕದಲ್ಲಿ ನೆಲೆಸಿರುವ ನನ್ನ ಒಬ್ಬ ಡಾಕ್ಟರ್ ಮಿತ್ರ ಹೇಳಿರುವಂತೆ- ಅಮೆರಿಕದಲ್ಲಿ ಹುಟ್ಟಿದ ಗಂಡು ಮಗುವಿನ ಪಾಲಕರು ಕ್ರೈಸ್ತ, ಮುಸ್ಲಿಮ್, ಬೌದ್ಧ, ಹಿಂದೂ ಹೀಗೆ ಯಾವುದೇ ಧರ್ಮದವರಿರಲಿ ಮಗು ಹುಟ್ಟಿದ ಮರುದಿನವೇ ಮಕ್ಕಳ ತಜ್ಞರು ಗಂಡು ಮಗುವಿನ ಮುಂದೊಗಲು ಕತ್ತರಿಸುವುದು ಸಾಮಾನ್ಯ. ಮಗುವಿನ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಅಲ್ಲಿಯ ಜನಸಂಖ್ಯೆಯ ಶೇ. 80 ಜನರು ಈ ಪದ್ಧ್ದತಿ ಅನುಸರಿಸುತ್ತಾರೆ (ಈ ಮಾಹಿತಿ ನಂಬದವರು ಈ ವಿಷಯವನ್ನು ಇಂಟರ್‌ನೆಟ್‌ನಲ್ಲಿ ಕೆದಕಿ ನೋಡಬಹುದು). ಸುನ್ನತ್ ಇದು ಮೂಲತಃ ಯಹೂದಿಗಳ ಐದು ಸಾವಿರ ವರ್ಷ ಹಳೆಯ ವಿಧಿಯೆಂದಾದರೂ ಆರೆಸ್ಸೆಸ್‌ನವರಿಗೆ ಗೊತ್ತಿದೆಯೇ? ಇಂತಹ ಗಹನ ಆರೋಗ್ಯದ ವಿಷಯ ಕಲ್ಲಡ್ಕದ ಮುಖಂಡರಿಗೆ ಗೊತ್ತಿಲ್ಲದಿರುವುದು ಖೇದಕರ. ಅವರು ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ನಮ್ಮದೇ ಕರಾವಳಿಯ ಹವ್ಯಕ ಮತ್ತು ಬಂಟ ಜಾತಿಯವರನ್ನು ವಿಚಾರಿಸಿಕೊಂಡು ತನ್ನ ಸಂಕುಚಿತ ಜ್ಞಾನ ವಿಸ್ತರಿಸಿ ಆಮೇಲೆ ಬೇರೆ ಧರ್ಮದವರ ಬಗ್ಗೆ ಕೊಳಕು ಜೋಕ್ ಮಾಡಿದರೆ ಒಳಿತು. -ಜಿ. ರವಿಕಿರಣ್ ರೈ,
ಕೋಟೆಕಾರ್, ಮಂಗಳೂರು


ಭ್ರಷ್ಟರ ಸಮರ್ಥನೆ
ಇವರಿಗೆ ಶೋಭೆಯೇ?
ಮಾನ್ಯರೆ,
ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮೇಲೆ ಅವರದೇ ಪಕ್ಷದ ಸಂಸತ್ ಸದಸ್ಯರೊಬ್ಬರು ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಮಾತನಾಡಿದ ಬೆನ್ನಲ್ಲಿಯೇ ಕೇಂದ್ರದ ಕಾನೂನು ಸಚಿವರ ಸ್ನೇಹವನ್ನು ದುರುಪಯೋಗ ಮಾಡಿಕೊಂಡು ಜೇಟ್ಲಿಯವರು ಅರ್ಹತೆ ಇಲ್ಲದಿದ್ದರೂ ತಮ್ಮ ಮಗನನ್ನು ಸುಪ್ರೀಂಕೋರ್ಟ್‌ನ ಸರಕಾರಿ ವಕೀಲರನ್ನಾಗಿ ನೇಮಕ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಬಹಿರಂಗಗೊಂಡಿರುತ್ತದೆ.
ಈ ಹಿಂದೆ ಯು.ಪಿ.ಎ. ಸರಕಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿ ಪ್ರತಿಯೊಂದು ಸಂದರ್ಭದಲ್ಲಿಯೂ ಟೀಕಿಸುತ್ತಿದ್ದ ಬಿ.ಜೆ.ಪಿ. ನಾಯಕರು ಅನ್ಯ ಪಕ್ಷಗಳಂತೆ ನಾವು ಭಿನ್ನವಲ್ಲ ಎಂಬುದನ್ನು ಜೇಟ್ಲಿಯವನ್ನು ಸಮರ್ಥಿಸುವುದರ ಮೂಲಕ ಸಾಬೀತುಪಡಿಸಿದ್ದಾರೆ. ಜೊತೆಗೆ ಭ್ರಷ್ಟಾಚಾರದ ವಿಚಾರದಲ್ಲಿ ಮಾತನಾಡಿದ ಅವರದೇ ಪಕ್ಷದ ಎಂ.ಪಿ.ಗೆ ಉಚ್ಚಾಟನೆಯ ಕೊಡುಗೆಯನ್ನು ನೀಡಿದ್ದಾರೆ. ಸುಷ್ಮಾ ಸ್ವರಾಜ್, ರಮಣ್‌ಸಿಂಗ್ ಹಾಗೂ ವಸುಂಧರಾ ರಾಜೇರವರ ವಿಚಾರದಲ್ಲಿ ಇದೇ ರೀತಿಯ ಧೋರಣೆಯನ್ನು ಅನುಸರಿಸಿದ ಬಿ.ಜೆ.ಪಿ. ನಾಯಕರು, ತಾವು ಅಧಿಕಾರವನ್ನು ಗಳಿಸುವ ಸಲುವಾಗಿ ಮಾತ್ರ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದುದೆಂದು ಸಾಬೀತು ಮಾಡಿದ್ದಾರೆ. ಅಲ್ಲದೆ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಭ್ರಷ್ಟರನ್ನು ಸಮರ್ಥಿಸಿಕೊಳ್ಳುವ ಮೂಲಕ, ತಾವೇನೂ ಭಿನ್ನರಲ್ಲ ಎಂಬುದನ್ನು ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ದೃಢಪಡಿಸಿದಂತೆ ಈಗಲೂ ವೌನವಾಗಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ನಾಜೂಕಿನ ಹೆಜ್ಜೆಗಳನ್ನಿಟ್ಟಿದ್ದಾರೆ.
-ಕೆ.ಎಸ್. ನಾಗರಾಜ್,
ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News