ಗಾಂಧಿ-ನೆಹರೂ ಸೇರಿ ಸರ್ದಾರ್ ಪಟೇಲರಿಗೆ ಮೋಸ ಮಾಡಿದ್ದರೇ?
ಚರಿತ್ರೆಯಲ್ಲಿ ದಾಖಲಾಗದ ಸುಳ್ಳನ್ನು ಸೇರಿಸಿ ಹೇಳುವುದಷ್ಟೇ ಇತಿಹಾಸದ ತಿರುಚುವಿಕೆ ಎನಿಸಿಕೊಳ್ಳುವುದಿಲ್ಲ. ಇತಿಹಾಸದ ಪುಟಗಳಿಂದ selective factಗಳನ್ನು ಹೆಕ್ಕಿಕೊಂಡು, ಅದಕ್ಕೆ ತಮಗೆ ಬೇಕಾದ ಕಥೆಯನ್ನು ಹೆಣೆದು, ತಮ್ಮ ದುರ್ಲಾಭಕ್ಕಾಗಿ ಜನರನ್ನು ಗೊಂದಲಗೊಳಿಸುವುದೂ ಕೂಡಾ ಇತಿಹಾಸದ ತಿರುಚುವಿಕೆ. ಯಾಕೆಂದರೆ, ಇತಿಹಾಸ ಎನ್ನುವುದು ಕೇವಲ factಗಳಲ್ಲಿ ಮಾತ್ರ ಅಡಗಿರುವುದಿಲ್ಲ, ಆ factನ ಹಿಂದಿರುವ Contextನಲ್ಲಿಯೂ ಅವಿತಿರುತ್ತದೆ. ದೇಹ ಮತ್ತು ಜೀವವಿದ್ದಂತೆ. ದೇಹವನ್ನು ನಾವು ಸುಲಭವಾಗಿ ಕಾಣಬಹುದು. ಆದರೆ ಅದರೊಳಗೆ ಜೀವವಿದೆಯಾ ಎಂದು ಪತ್ತೆಹಚ್ಚಲು ನಮ್ಮ ವಿವೇಚನೆ, ಅಧ್ಯಯನ, ಪರಾಮರ್ಶೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಾಮನ್‌ಸೆನ್ಸ್‌ಗಳು ಕೆಲಸ ಮಾಡಬೇಕಾಗುತ್ತದೆ. ಜೀವವಿಲ್ಲದ ದೇಹವೊಂದು ವ್ಯಕ್ತಿ ಎನಿಸಿಕೊಳ್ಳುವುದಿಲ್ಲ; ಶವ ಎನಿಸಿಕೊಳ್ಳುತ್ತದೆ. ಹಾಗಾಗಿ fact ಎಂಬ ದೇಹವನ್ನು Context ಎಂಬ ಜೀವವಿಲ್ಲದೆ ನೋಡಲು ಮುಂದಾಗುವುದು ಸತ್ಯವನ್ನು ನೋಡಿದಂತಲ್ಲ; ಶವದ ಅಂತಿಮ ದರ್ಶನ ಮಾಡಿದಂತೆ. ಸಂಘ ಪರಿವಾರ ವ್ಯವಸ್ಥಿತವಾಗಿ ಇಂತಹ selective factಗಳ ಹಿಂದಿರುವ ಜೀವಂತಿಕೆಯ Contextನ್ನು ಕಿತ್ತೆಸೆದು, ಸುಲಭಕ್ಕೆ ನಿರಾಕರಿಸಲಾಗದಂತಹ ಕಥೆಗಳ ಮೂಲಕ ಚರಿತ್ರೆಯನ್ನು ವಿರೂಪಗೊಳಿಸುತ್ತಿದೆ. ಇದು ಉದ್ದೇಶಪೂರ್ವಕವಾಗಿ, ಜಾಣತನದಿಂದ ಮಾಡುತ್ತಿರುವ ವಿರೂಪೀಕರಣ. ನಮ್ಮ ವಿವೇಚನೆ, ಅಧ್ಯಯನ, ಪರಾಮರ್ಶೆ, ಕಾಮನ್‌ಸೆನ್ಸ್‌ಗಳು ಹೆಚ್ಚು ಶ್ರಮಹಾಕಿ ಈ ವಿರೂಪೀಕರಣವನ್ನು ಮುಖಾಮುಖಿಯಾಗಬೇಕಿದೆ.
ಸಂಘ ಪರಿವಾರದ ಇಂತಹ ಸುಳ್ಳಿನ ಇತಿಹಾಸದ ಪ್ರಧಾನ ಗುರಿಗಳು ಗಾಂಧಿ ಮತ್ತು ನೆಹರೂ. ಅವರ ಚಾರಿತ್ರ್ಯವಧೆಯಿಂದ ಹಿಡಿದು ಅವರ ಕೊಡುಗೆಗಳ ಅಪವ್ಯಾಖ್ಯಾನದವರೆಗೆ ಎಷ್ಟುಸಾಧ್ಯವೋ ಅಷ್ಟು ವಿರೂಪಗೊಳಿಸಲಾಗುತ್ತಿದೆ. ಪ್ರಧಾನಿ ಹುದ್ದೆಯನ್ನು ತಪ್ಪಿಸಿ ಸರ್ದಾರ್ ಪಟೇಲರಿಗೆ ಅವರಿಬ್ಬರು ವಂಚಿಸಿದರು ಎನ್ನುವ ಸುಳ್ಳಿನ ಕಥೆಯೂ ಇದರಲ್ಲಿ ಒಂದು. ಪ್ರದೇಶ ಕಾಂಗ್ರೆಸ್ ಸಮಿತಿಗಳ ನಾಮನಿರ್ದೇಶನ ಶಿಫಾರಸಿನ fact ಅನ್ನು ಬಳಸಿಕೊಂಡು ಈ ಕಥೆಯನ್ನು ನಿಜದಂತೆ ನಂಬಿಸಲಾಗುತ್ತಿದೆ. ಆ ಸುಳ್ಳಿನ ಸಾರಾಂಶ ಹೀಗಿದೆ: ‘‘ಸ್ವತಂತ್ರ ಭಾರತದ ಪ್ರಧಾನಿ ಯಾರಾಗಬೇಕೆಂದು ಕಾಂಗ್ರೆಸ್‌ನೊಳಗೆ ಚುನಾವಣೆ ನಡೆದಾಗ, 15 ಪ್ರದೇಶ ಕಾಂಗ್ರೆಸ್ ಸಮಿತಿಗಳ ಪೈಕಿ 12 ಸಮಿತಿಗಳು ಸರ್ದಾರ್ ಪಟೇಲರ ಪರ ಮತ ಹಾಕಿದ್ದವು. ಆದರೆ ಆ ಮತದಾನವನ್ನು ಗಾಂಧಿ Override ಮಾಡಿ, ನೆಹರೂ ಅವರನ್ನು ಪ್ರಧಾನಿಯಾಗಿ ಮಾಡಿದರು.’’
ಇದು ನಿಜವೇ?
ಮೊದಲೇ ಹೇಳಿದಂತೆ selective factಗಳನ್ನು ಸೇರಿಸಿ ಹೆಣೆದ ನಾಜೂಕಿನ ಕಥೆ ಇದು. ಹಾಗಾದ್ರೆ ನಿಜ ಸಂಗತಿಯೇನು? ಇಡೀ Context ಸಮೇತ ನೋಡಿದಾಗ ನಮಗೆ ಸತ್ಯದ ಚಿತ್ರಣ ಗೋಚರಿಸುತ್ತದೆ.
ಅಸಲಿಗೆ, ಭಾರತದ ಪ್ರಧಾನಿ ಯಾರಾಗಬೇಕೆಂದು ಇಂತಹದ್ದೊಂದು ಮತದಾನ ನಡೆದಿದ್ದೇ ಸುಳ್ಳು. ಇಲ್ಲಿ ಉಲ್ಲೇಖಿಸಲಾಗಿರುವ ಪ್ರದೇಶ ಕಾಂಗ್ರೆಸ್ ಸಮಿತಿಗಳ ಘಟನೆಯು 1946ರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರಾಗಬೇಕು ಎಂಬ ಚರ್ಚೆಗೆ ಸಂಬಂಧಿಸಿದ್ದು. ಆದರೆ ಭಾರತವು ಸ್ವಾತಂತ್ರ್ಯದ ಸನಿಹಕ್ಕೆ ಬಂದು ನಿಂತಿದ್ದರಿಂದ, ಯಾರು ಆಗ ಕಾಂಗ್ರೆಸ್‌ನ ಅಧ್ಯಕ್ಷರಾಗುತ್ತಾರೋ, ಅವರೇ ಭವಿಷ್ಯದಲ್ಲಿ ಭಾರತದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಹಾಗಾಗಿ ಆ ಆಯ್ಕೆ ಗಮನ ಸೆಳೆದಿದ್ದು ಸುಳ್ಳಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಆಯ್ಕೆಗೆ ಒಂದು ಪ್ರಜಾತಾಂತ್ರಿಕ ಮಾನದಂಡವನ್ನು ಅನುಸರಿಸಿಕೊಂಡು ಬರಲಾಗಿತ್ತು. ಪ್ರದೇಶ ಕಾಂಗ್ರೆಸ್ ಸಮಿತಿಗಳು ನಾಮನಿರ್ದೇಶನ ಶಿಫಾರಸನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ಸಲ್ಲಿಸುತ್ತವೆ. ಆ ಶಿಫಾರಸುಗಳ ಮೇಲೆ ಅಲ್ಲಿ ಚರ್ಚೆ ನಡೆದು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಒಂದುವೇಳೆ, ಅವಿರೋಧ ಆಯ್ಕೆಗೆ ಒಮ್ಮತಕ್ಕೆ ಬರಲಾಗದಿದ್ದರೆ ಆಗ ಅಧಿಕೃತ ಆಂತರಿಕ ಚುನಾವಣೆ ನಡೆಸಿ, ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದು ಚಾಲ್ತಿಯಲ್ಲಿದ್ದ ಪ್ರಕ್ರಿಯೆ. 1946ರಲ್ಲೂ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರ ಆಯ್ಕೆ ಶುರುವಾಗಿತ್ತು. ಆಗ 15 ಸಮಿತಿಗಳ ಪೈಕಿ 12 ಸಮಿತಿಗಳು ಪಟೇಲರ ನಾಮನಿರ್ದೇಶನವನ್ನು ಶಿಫಾರಸು ಮಾಡಿದ್ದವು. ಅದು ಮತದಾನವಾಗಿರಲಿಲ್ಲ; ಪಕ್ಷದ ಆಂತರಿಕ ನಾಮನಿರ್ದೇಶನ ಶಿಫಾರಸು ಮಾತ್ರ. ನೆಹರೂ ಹೆಸರನ್ನು ಯಾವೊಂದು ಸಮಿತಿಯೂ ಶಿಫಾರಸು ಮಾಡಿರಲಿಲ್ಲ. ಇಷ್ಟು ಮಾತ್ರ ಇದು ಸತ್ಯ.
ಆದರೆ ಆಯ್ಕೆಯಲ್ಲಿ ಸಮಿತಿಗಳ ಶಿಫಾರಸು ಮಾತ್ರವೇ ಅಂತಿಮವಾಗಿರಲಿಲ್ಲ. ಆ ಶಿಫಾರಸುಗಳನ್ನು ಆಧರಿಸಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಅಲ್ಲಿ ಒಮ್ಮತಕ್ಕೆ ಬರಲಾಗದಿದ್ದರೆ ಚುನಾವಣೆಯೂ ನಡೆಯಬಹುದಿತ್ತು. ಒಂದುವೇಳೆ, ಚುನಾವಣೆ ನಡೆದಿದ್ದರೆ ಪಟೇಲರೇ ಗೆಲ್ಲುತ್ತಿದ್ದರು ಎಂಬುದರಲ್ಲಿ ಅನುಮಾನವಿರಲಿಲ್ಲ. ಯಾಕೆಂದರೆ ಪಕ್ಷದ ತಳಮಟ್ಟದಲ್ಲಿ ಪಟೇಲರಿಗೆ ಉತ್ತಮ ಸಂಪರ್ಕ ಮತ್ತು ಸಂಘಟನಾ ಪ್ರಭಾವವಿತ್ತು. 1945ರ ಪ್ರಾಂತೀಯ ಚುನಾವಣೆಗಳಲ್ಲಿ ಒಟ್ಟು 1,585 ಸ್ಥಾನಗಳ ಪೈಕಿ ಕಾಂಗ್ರೆಸ್ 923 (ಶೇ. 58.23) ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಸರ್ದಾರ್ ಪಟೇಲರ ಸಂಘಟನಾ ಕ್ರಿಯಾಶೀಲತೆ ಪ್ರಧಾನ ಪಾತ್ರ ವಹಿಸಿತ್ತು. ಸ್ವತಃ ನೆಹರೂ ಅವರೇ ‘‘ಕಾಂಗ್ರೆಸ್ ಪಕ್ಷದಲ್ಲಿ ಮತ್ತು ದೇಶದಲ್ಲಿ ಸರ್ದಾರ್ ಪಟೇಲರಿಗೆ ಅಗಾಧವಾದ ಪ್ರಭಾವವಿತ್ತು. ಆ ಪ್ರಭಾವದ ಬಗ್ಗೆ ನನಗೆ ಗೌರವವಿತ್ತು’’ ((Selected Works of Jawaharlal Nehru, Vol. 2) ಎಂದು ಉಲ್ಲೇಖಿಸಿರುವ ಮಾತು ಇದಕ್ಕೆ ಸಾಕ್ಷಿ.
ಈಗಾಗಲೇ ತಿಳಿಸಿದಂತೆ ಆ ಬಾರಿಯದ್ದು ಕೇವಲ ಕಾಂಗ್ರೆಸ್‌ನ ಅಧ್ಯಕ್ಷಗಿರಿ ಮಾತ್ರವಲ್ಲದೆ, ಭವಿಷ್ಯದಲ್ಲಿ ಸ್ವತಂತ್ರ ಭಾರತದ ನಾಯಕತ್ವವನ್ನು ಮುನ್ನಡೆಸುವ ಹೊಣೆಯೂ ಅಧ್ಯಕ್ಷರ ಹೆಗಲೇರಲಿತ್ತಾದ್ದರಿಂದ ಸಹಜವಾಗಿಯೇ ಆಯ್ಕೆಯಲ್ಲಿ ಕಾಂಗ್ರೆಸ್ ತುಂಬಾ ಎಚ್ಚರಿಕೆ ವಹಿಸಿತ್ತು.
ಮಹಾತ್ಮಾ ಗಾಂಧಿಯವರ ಪಾತ್ರ ಪ್ರವೇಶವಾಗುವುದೇ ಈ ಹಂತದಲ್ಲಿ. ಗಾಂಧೀಜಿ ಕಾಂಗ್ರೆಸ್‌ನ ಆಡಳಿತಾತ್ಮಕ ಹುದ್ದೆಯಲ್ಲಿ ಇಲ್ಲದೆ ಹೋದರೂ, ಅವರು ಕಾಂಗ್ರೆಸ್‌ನ ಆತ್ಮವಾಗಿದ್ದರು. ಸ್ವಾತಂತ್ರ್ಯ ಚಳವಳಿಯ ಪ್ರಧಾನ ಶಕ್ತಿಯಾಗಿದ್ದರು. ಪಟೇಲ್, ನೆಹರೂ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಗಾಂಧಿಯವರ ಮಹತ್ವ, ಮಾರ್ಗದರ್ಶನಗಳನ್ನು ಗೌರವಿಸುತ್ತಿದ್ದರು. ಗಾಂಧಿಯವರ ಬಳಿ ಈ ಪ್ರಸ್ತಾವ ಚರ್ಚೆಗೆ ಬರುತ್ತದೆ. ಬಹುಶಃ, ಈ ಹಿಂದಿನಂತೆ ಅದು ಮತ್ತೊಂದು ಅವಧಿಗೆ ಇನ್ನೋರ್ವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾತ್ರವಾಗಿದ್ದರೆ, ಗಾಂಧೀಜಿಯೂ ಪಟೇಲರ ಹೆಸರನ್ನೇ ಅನುಮೋದಿಸುತ್ತಿದ್ದರೇನೊ; ಆದರೆ ಅದು ಸ್ವತಂತ್ರ ದೇಶದ ಭವಿಷ್ಯವನ್ನು ನಿರ್ಧರಿಸಬಹುದಾದ ಸನ್ನಿವೇಶವಾಗಿತ್ತು. ಆಗ ಅವರು ಪಟೇಲರ ಜೊತೆ ಚರ್ಚಿಸಿ, ಅವರ ಸಮ್ಮತಿಯ ನಂತರವೇ ನೆಹರೂ ಹೆಸರನ್ನು ಶಿಫಾರಸು ಮಾಡುತ್ತಾರೆ. ಇದು ಕೂಡಾ ಶಿಫಾರಸು ಮಾತ್ರವಾಗಿತ್ತು; ಅಂತಿಮ ತೀರ್ಮಾನವಾಗಿರಲಿಲ್ಲ. ಆದರೆ ಗಾಂಧಿಯವರ ಮುನ್ನೋಟದ ಬಗ್ಗೆ ಅರಿವಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅದನ್ನು ಪರಿಗಣಿಸಿ ನೆಹರೂ ಅವರನ್ನು ಅವಿರೋಧ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ. ಅಲ್ಲಿ ಚುನಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಂದೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ನೆಹರೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ಗಾಂಧಿ ಯಾಕೆ ಪಟೇಲರ ಬದಲು ನೆಹರೂ ಹೆಸರನ್ನು ಶಿಫಾರಸು ಮಾಡಿದರು? ಈ ಮಹತ್ವದ ಪ್ರಶ್ನೆಗೆ ದಾಟುವುದಕ್ಕು ಮುನ್ನ, ಮೇಲಿನ ವಿವರಣೆಯಿಂದ ನಾವು ಎರಡು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಪ್ರಧಾನಿ ಹುದ್ದೆಗಾಗಿ ಯಾವುದೇ ಚುನಾವಣೆ ನಡೆದಿರಲಿಲ್ಲ ಮತ್ತು ಗಾಂಧಿಯವರು ಅಂತಹ ಯಾವುದೇ ಮತದಾನದ ತೀರ್ಪನ್ನು ಉಲ್ಲಂಘಿಸಿ ನೆಹರೂ ಅವರನ್ನು ಪ್ರಧಾನಿ ಮಾಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಶಿಫಾರಸುಗಳ ಹಂತದಲ್ಲಿ ತಮ್ಮದೂ ಒಂದು ಶಿಫಾರಸು ಮುಂದಿಟ್ಟಿದ್ದರಷ್ಟೇ.
ಸರಿ ಹಾಗಾದರೆ, ಗಾಂಧಿ ಯಾಕೆ ನೆಹರೂ ಹೆಸರು ತೆಗೆದುಕೊಂಡರು? ಇದರಿಂದ ಪಟೇಲರಿಗೆ ಬೇಸರವಾಗಿರಲಿಲ್ಲವೇ?
‘Collected Works of Mahatma Gandhi’ ಕೃತಿಯಲ್ಲಿ ‘‘ಮುಂಬರುವ ಸವಾಲಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ನಾಯಕತ್ವದ ಭಾರವನ್ನು ಹೊರಬಹುದಾದ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡಾಗ ನೆಹರೂ ನನ್ನ ಆಯ್ಕೆಯಾಗಿದ್ದರು’’ ಎಂದು ಉಲ್ಲೇಖವಾಗಿರುವ ಗಾಂಧಿಯವರ ಮಾತು ಈ ಪ್ರಶ್ನೆಗೆ ಉತ್ತರವಾಗುತ್ತದೆ. ಸ್ವತಂತ್ರಗೊಂಡ ನಂತರ ಭಾರತದ ಮುಂದೆ ಎರಡು ಸವಾಲುಗಳನ್ನು ಗಾಂಧಿ ಮುಂಗಂಡಿದ್ದರು. ದೇಶವನ್ನು ಪ್ರಗತಿಶೀಲ ದಿಕ್ಕಿನಲ್ಲಿ ಕೊಂಡೊಯ್ಯುವ ಆಂತರಿಕ ಆಡಳಿತಾತ್ಮಕ ಸವಾಲು ಮೊದಲನೆಯದ್ದಾದರೆ, ಜಗತ್ತಿನ ಇತರ ದೇಶಗಳ ಮುಂದೆ ಭಾರತಕ್ಕೆ ತನ್ನದೇ ಆದ ಗೌರವಪೂರ್ಣ ಅಸ್ಮಿತೆಯನ್ನು ರೂಪಿಸಿಕೊಳ್ಳುವುದು ಮತ್ತೊಂದು ಸವಾಲು. ಆಡಳಿತ ಸೂಕ್ಷ್ಮತೆಗಳ ಜೊತೆಗೆ, ಅಂತರ್‌ರಾಷ್ಟ್ರೀಯ approach ಕೂಡಾ ಭಾರತದ ನಾಯಕತ್ವಕ್ಕೆ ಬೇಕಾಗಿತ್ತು. ಆಗ ಮಾತ್ರ, ವಿಶ್ವಯುದ್ಧಗಳಿಂದ ಜರ್ಜರಿತವಾದ ಜಗತ್ತಿಗೆ ಶಾಂತಿ-ಸಹಕಾರದ ಹೊಸ ಮಾದರಿಯನ್ನು ಭಾರತ ಮುಂದಿಡಬಹುದು ಮತ್ತು ಆ ಮೂಲಕ ತೃತೀಯ ಶಕ್ತಿಯಾಗಿ ತನ್ನ ಛಾಪು ಮೂಡಿಸಬಹುದು ಎಂಬುದು ಗಾಂಧಿಯವರ ದೂರದೃಷ್ಟಿ.
ಆವತ್ತಿನ ಸಮಕಾಲೀನ ಅಂತರ್‌ರಾಷ್ಟ್ರೀಯ ನಾಯಕರ ಜೊತೆ ಉತ್ತಮ ಒಡನಾಟ, ವಿದೇಶಿ ನೀತಿಗಳ ಅಪಾರ ಅರಿವು, ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದ ನೆಹರೂ ಅವರೇ ಉತ್ತಮ ಆಯ್ಕೆಯಾಗಿ ಗಾಂಧಿಯವರಿಗೆ ಗೋಚರಿಸಿದ್ದರ ಬಗ್ಗೆ ಸ್ವತಃ ಪಟೇಲರಿಗೂ ಸಮ್ಮತಿಯಿತ್ತು. ಸರ್ದಾರ್ ಪಟೇಲರಿಗೆ ಗಾಂಧೀಜಿಯ ವ್ಯಕ್ತಿತ್ವದ ಮೇಲೆ ಮಾತ್ರವಲ್ಲದೆ, ಅವರ ಮುನ್ನೋಟದ ಮೇಲೆಯೂ ಸಾಕಷ್ಟು ಗೌರವವಿತ್ತು. ‘‘ನಾನು ಪ್ರದೇಶ ಸಮಿತಿಗಳ ಬೆಂಬಲ ಹೊಂದಿರಬಹುದು, ಒಂದುವೇಳೆ, ಬಾಪೂ ಬೇರೆಯದನ್ನೇ ಇಚ್ಛಿಸಿದರೆ ನಾನು ಆಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತೇನೆ’’ ಎಂಬ ಅವರ ಮಾತು ಇದಕ್ಕೆ ಸಾಕ್ಷಿ. ಗಾಂಧಿಯವರು ಪಟೇಲರ ಜೊತೆ ಚರ್ಚಿಸಿ, ಅವರ ಸಮ್ಮತಿಯ ನಂತರವೇ ನೆಹರೂ ಹೆಸರನ್ನು ಶಿಫಾರಸು ಮಾಡಿದ್ದರು. ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ತಮ್ಮ ‘India wins Freedom’ ಕೃತಿಯಲ್ಲಿ ‘‘ಗಾಂಧಿಯವರ ಅಭಿಪ್ರಾಯವನ್ನು ಗೌರವಿಸಿ, ಸ್ವತಃ ಪಟೇಲರು ತಮ್ಮ ನಾಮನಿರ್ದೇಶನವನ್ನು ಪ್ರತಿಪಾದಿಸಲು ಮುಂದಾಗಲಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ದೇಶದ ಹಿತದೃಷ್ಟಿಯ ಎದುರು ಅವರು ಯಾವತ್ತೂ ತಮ್ಮ ವೈಯಕ್ತಿಕ ವಿಚಾರಗಳನ್ನು ಪರಿಗಣಿಸಿದವರಲ್ಲ’’ ಎಂದು ಅಭಿಪ್ರಾಯಪಟ್ಟಿರುವುದು ಪಟೇಲರ ಸಮ್ಮತಿಗೆ ಸಾಕ್ಷಿ. ಇನ್ನು ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಕೂಡಾ ತಮ್ಮ ‘India after Gandhi’ ಕೃತಿಯಲ್ಲಿ ‘‘ಅವರ ಬಯಕೆಯನ್ನು ಕಡೆಗಣಿಸಿ, ಪ್ರಧಾನಿ ಹುದ್ದೆಯಿಂದ ಪಟೇಲರನ್ನು ವಂಚಿಸಲಾಯಿತು ಎಂದು ವಾದಿಸುವುದು ಇತಿಹಾಸವನ್ನು ತಿರುಗುಮುರುಗಾಗಿಸಿದಂತೆ’’ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದುರ್ಗಾದಾಸ್ ಅವರು ಸಂಪಾದಿಸಿರುವ ‘Sardar Patel’s Correspondence Vol. 6’ ಕೃತಿಯಲ್ಲಿ ಉಲ್ಲೇಖವಾಗಿರುವ ಪಟೇಲರ 1948ರ ಪತ್ರವೊಂದರಲ್ಲಿ ‘‘ನೆಹರೂ ನನ್ನ ನಾಯಕ. ನಾನದನ್ನು ಒಪ್ಪಿ ಸ್ವೀಕರಿಸಿದ್ದೇನೆ’’ ಎಂದು ಅವರೇ ಬರೆದುಕೊಂಡಿದ್ದಾರೆ. ‘Collected Works of Sardar Vallabhbhai Patel, Vol. 10’’ ಕೃತಿಯಲ್ಲಿ ಉಲ್ಲೇಖವಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಪಟೇಲರು ‘‘ನನ್ನ ಮತ್ತು ಪಂಡಿತ್ ನೆಹರೂ ಅವರ ನಡುವೆ ಯಾವುದೇ ರೀತಿಯ ಮನಸ್ತಾಪವಿಲ್ಲ. ದೇಶದ ಸೇವೆಗೆ ಇಬ್ಬರೂ ಸಹಚರರಾಗಿ ದುಡಿಯುತ್ತಿದ್ದೇವೆ’’ ಎಂದು ಹೇಳಿದ್ದರು.
ಗಾಂಧಿಯವರ ನೆಹರೂ ಆಯ್ಕೆಗೆ ಇತಿಹಾಸಕಾರರು ಇನ್ನೊಂದು ಆಯಾಮದ ವಿಶ್ಲೇಷಣೆಯನ್ನೂ ಮುಂದಿಡುತ್ತಾರೆ. ಗಾಂಧಿಯವರಾಗಲಿ ಅಥವಾ ಬೇರಾವುದೇ ಕಾಂಗ್ರೆಸ್ ನಾಯಕರಾಗಲಿ ಇದನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ ‘‘ಮುಂಬರುವ ಸವಾಲಿನ ದಿನಗಳಲ್ಲಿ ದೇಶದ ಭವಿಷ್ಯ ಮುಖ್ಯ’’ ಎಂಬ ಗಾಂಧಿಯವರ ಒತ್ತಾಸೆಗೆ ಈ ವಿಶ್ಲೇಷಣೆ ಪೂರಕವಾಗಿದೆ. ಅದು ಪಟೇಲರ ವಯಸ್ಸು ಮತ್ತು ಆರೋಗ್ಯ.
ಬ್ರಿಟಿಷರ ನಿರಂತರ ವಸಾಹತುಶಾಹಿ ಶೋಷಣೆ ಮತ್ತು ಜಾತಿವ್ಯವಸ್ಥೆಯ ಸಾಮಾಜಿಕ ಅಸಮಾನತೆಯಿಂದಾಗಿ ತಾಂಡವವಾಡುತ್ತಿದ್ದ ಬಡತನದ ಜೊತೆಗೆ, ಅಷ್ಟೊತ್ತಿಗಾಗಲೇ ಮುನ್ನೆಲೆಗೆ ಬಂದಿದ್ದ ದೇಶವಿಭಜನೆ, ಕೋಮುಗಲಭೆಗಳಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವುದೆಂದರೆ ದೂರದೃಷ್ಟಿಯ ಯೋಜನೆಯಾಗಿತ್ತು. ಅದಕ್ಕಾಗಿ ದೀರ್ಘಕಾಲೀನ ಉತ್ಸಾಹಿ ನಾಯಕತ್ವ ಬೇಕಾಗಿತ್ತು. 1946ರ ವೇಳೆಗಾಗಲೇ ಸರ್ದಾರ್ ಪಟೇಲರಿಗೆ 71 ವರ್ಷ ವಯಸ್ಸಾಗಿತ್ತು. ವಯಸ್ಸಿಗಿಂತ ಮುಖ್ಯವಾಗಿ, ನಿರಂತರ ಸ್ವಾತಂತ್ರ್ಯ ಚಳವಳಿಯಿಂದಾಗಿ ಪಟೇಲರ ದೇಹಸ್ಥಿತಿ ವಯಸ್ಸನ್ನು ಮೀರಿ ಕೃಶವಾಗಿತ್ತು. 1946ರಲ್ಲಿ ಅವರಿಗೆ ಮೊದಲ ಸಲ ಹೃದಯಾಘಾತವಾಗಿತ್ತು. ಇತಿಹಾಸಕಾರ ರಾಜಮೋಹನ್ ಗಾಂಧಿಯವರು ತಮ್ಮ ‘Patel : A Life’ ಕೃತಿಯಲ್ಲಿ ‘‘1946ರ ವೇಳೆಗಾಗಲೇ ಪಟೇಲರ ಹೃದಯ ದುರ್ಬಲಗೊಂಡಿತ್ತು. ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಅವರದನ್ನು ಗಂಭೀರವಾಗಿ ಪರಿಗಣಿಸಲಿಲ್ಲ’’ ಎಂದು ಉಲ್ಲೇಖಿಸಿದ್ದಾರೆ. ಅಧಿಕಾರ ಹಂಚಿಕೆಯ ಕ್ಯಾಬಿನೆಟ್ ಮಿಷನ್ ಚರ್ಚೆ, ದೇಶ ವಿಭಜನೆಯ ಒತ್ತಡ, ಭುಗಿಲೆದ್ದ ಕೋಮುಗಲಭೆಗಳು, ನಿರಾಶ್ರಿತ ಸಮಸ್ಯೆಗಳು ಅವರಿಗೆ ವಿಶ್ರಾಂತಿಯ ಆಸ್ಪದ ಕೊಡಲಿಲ್ಲ. Mountbatten Papers: Official papers: India, 1947 ದಾಖಲೆಗಳಲ್ಲಿ ಸ್ವತಃ ಲಾರ್ಡ್ ಮೌಂಟ್‌ಬ್ಯಾಟನ್ ‘‘ಅಧಿಕಾರ ಹಂಚಿಕೆಯ ನಿರ್ಣಾಯಕ ಕೊನೇ ಘಟ್ಟದಲ್ಲಿ ಪಟೇಲರು ವಿಪರೀತ ಶ್ರಮಪಟ್ಟು ತಮ್ಮನ್ನು ತಾವು ದಂಡಿಸಿಕೊಂಡರು’’ ಎಂದು ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯ ಸಿಗುವ ವೇಳೆಗಾಗಲೇ ಹಲವು ಬಾರಿ ಲಘು ಹೃದಯಾಘಾತವಾಗಿದ್ದ ಅವರಿಗೆ 1948ರ ನವೆಂಬರ್‌ನಲ್ಲಿ ಗಂಭೀರ ಹೃದಯಾಘಾತವಾಗುತ್ತದೆ. ಆಗಂತೂ ವೈದ್ಯರು, ಇನ್ನೊಂದು ಹೃದಯಾಘಾತವಾದರೆ ನೀವು ಬದುಕುಳಿಯುವುದೇ ಕಷ್ಟ ಎಂದು ಎಚ್ಚರಿಸುತ್ತಾರೆ. ‘‘ಸರ್ದಾರ್ ಅವರ ಆರೋಗ್ಯದ ಬಗ್ಗೆ ನನಗೆ ಅತೀವ ಆತಂಕವಾಗುತ್ತಿದೆ. ಈ ವಯಸ್ಸಿನ ವ್ಯಕ್ತಿಯೊಬ್ಬರು ಹೊರಬಾರದಷ್ಟು ಹೊರೆಯನ್ನು ಅವರು ಹೊರುತ್ತಿದ್ದಾರೆ’’ ಎಂದು ನೆಹರೂ ಕಳವಳ (Selected Works of Jawaharlal Nehru) ಹೊರಹಾಕಿ ದ್ದುಂಟು. ಕೊನೆಗೆ 1950ರಲ್ಲಿ, ಅಂದರೆ ಸ್ವಾತಂತ್ರ್ಯ ಲಭಿಸಿ ಕೇವಲ ಮೂರು ವರ್ಷಗಳಲ್ಲಿ ಹೃದಯಾಘಾತದಿಂದ ನಮ್ಮನ್ನು ಅಗಲಿದರು.
ಆಗಷ್ಟೇ ಸ್ವಾತಂತ್ರ್ಯ ಪಡೆದು ಬಡತನ, ಹಸಿವು, ಕೋಮುಗಲಭೆ, ಗಡಿವಿವಾದ, ಅಂತರ್‌ರಾಷ್ಟ್ರೀಯ ನೀತಿಗಳ ಚರ್ಚೆ, ಆಂತರಿಕ ಆಡಳಿತ ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿದ್ದ ದೇಶವೊಂದು ಹಠಾತ್ತನೆ ತನ್ನ ನಾಯಕನನ್ನು ಕಳೆದುಕೊಂಡು ಅನಾಥಪ್ರಜ್ಞೆಗೆ ಜಾರಿದ್ದರೆ ದೇಶದ ಪರಿಸ್ಥಿತಿಯನ್ನು ಆ ಕಾಲಘಟ್ಟಕ್ಕೆ ಹೋಗಿ ಒಮ್ಮೆ ಊಹಿಸಿಕೊಂಡು ನೋಡಿ.
ಆದರೆ ಈ ಕಾರಣಕ್ಕಾಗಿಯೇ ಗಾಂಧೀಜಿಯವರು, ಪಟೇಲರಗಿಂತ ಹದಿನಾಲ್ಕು ವರ್ಷ ಕಿರಿಯರಾದ ನೆಹರೂ ಅವರನ್ನು ಶಿಫಾರಸು ಮಾಡಿದರು ಎಂದು ಹೇಳಲಾಗದು. ಯಾಕೆಂದರೆ ಎಲ್ಲಿಯೂ ಈ ಬಗ್ಗೆ ಚಾರಿತ್ರಿಕ ಉಲ್ಲೇಖಗಳಿಲ್ಲ.
ಆಂತರಿಕ ಆಡಳಿತ ನಿರ್ವಹಣೆಯ ಜೊತೆಗೆ ದೇಶಕ್ಕೆ ಒಂದು ಪ್ರಗತಿಶೀಲ, ವೈಜ್ಞಾನಿಕ ದಿಕ್ಕನ್ನು ತೋರಿಸಿಕೊಡುವುದು ಮತ್ತು ಜಾಗತಿಕ ಅಸ್ಮಿತೆಯನ್ನು ಗುರುತಿಸುವುದು ಗಾಂಧಿಯವರ ಶಿಫಾರಸಿನ ಆಶಯವಾಗಿತ್ತು. ನೆಹರೂ ಅವರ ಜಾಗತಿಕ ದೂರದೃಷ್ಟಿಯ ಜೊತೆಗೆ ಪಟೇಲರ ಆಡಳಿತಾತ್ಮಕ ದೃಢತೆಗಳು ದೇಶವನ್ನು ನಿರ್ಮಿಸಲೆಂಬ ಕಾರಣಕ್ಕೆ ಅವರನ್ನು ಉಪಪ್ರಧಾನಿಯಾಗಿ ಕಾಂಗ್ರೆಸ್ ಆರಿಸಿಕೊಂಡಿತು. ಸಂಸ್ಥಾನಗಳ ಏಕೀಕರಣದ ಮೂಲಕ ಪಟೇಲರು ಅದನ್ನು ರುಜುವಾತು ಪಡಿಸಿದರೆ, ಆಲಿಪ್ತ ನೀತಿ ಹಾಗೂ ಪಂಚವಾರ್ಷಿಕ ಯೋಜನೆಗಳ ಮೂಲಕ ನೆಹರೂ ಅವರು ಗಾಂಧೀಜಿಯ ಕನಸನ್ನು ಸಾಕಾರಗೊಳಿಸಿದರು. ‘‘ಸರ್ದಾರರು ಆಡಳಿತದ ಭಾರೀ ಒತ್ತಡಗಳನ್ನು ನಿಭಾಯಿಸಿದರೆ, ಪಂಡಿತ್‌ಜೀ ದೇಶದ ವರ್ಚಸ್ಸನ್ನು ಹಿಗ್ಗಿಸಿದರು’’ ಎಂಬ ಬಾಬು ರಾಜೇಂದ್ರ ಪ್ರಸಾದ್ ಅವರ ಮಾತು ಇದಕ್ಕೆ ಸಾಕ್ಷಿ.