ವಾಯುಮಾಲಿನ್ಯ: ಬಿಎಸ್-5ನ್ನು ಕೈಬಿಟ್ಟು ಬಿಎಸ್-6ನ್ನು ಜಾರಿಗೆ ತರಲಿರುವ ಭಾರತ
ಹೊಸದಿಲ್ಲಿ,ಜ.6: ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ ಸರಕಾರವು ಭಾರತ ಸ್ಟೇಜ್(ಬಿಎಸ್)5 ನಿಯಮಾವಳಿಯನ್ನು ಸಂಪೂರ್ಣವಾಗಿ ಕೈಬಿಟ್ಟು 2020,ಎ.1ರಿಂದ ಬಿಎಸ್-6ರ ಕಠಿಣ ಮಾಲಿನ್ಯ ನಿಯಂತ್ರಣ ನಿಯಮಾವಳಿಯನ್ನು ಜಾರಿಗೆ ತರಲು ಬುಧವಾರ ನಿರ್ಧರಿಸಿದೆ.
ಪ್ರಸಕ್ತ ದೇಶದ ಹಲವು ಭಾಗಗಳಲ್ಲಿ ಬಿಎಸ್ -4 ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದ್ದು, 2017,ಎ.1ಕ್ಕೆ ಇಡೀ ದೇಶವು ಇದರ ವ್ಯಾಪ್ತಿಗೊಳಪಡಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಸಭೆಯು ಬಿಎಸ್-5ನ್ನು ಕೈಬಿಟ್ಟು ಬಿಎಸ್-4ರಿಂದ ನೇರವಾಗಿ ಬಿಎಸ್-6ಕ್ಕೆ ನೆಗೆಯುವ ನಿರ್ಧಾರವನ್ನು ಕೈಗೊಂಡಿತು. ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಭಾರೀ ಕೈಗಾರಿಕೆಗಳ ಸಚಿವ ಅನಂತ ಗೀತೆ ಮತ್ತು ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಎಸ್-6 ನಿಯಮಾವಳಿಗೆ ಅನುಗುಣವಾದ ಇಂಧನಗಳನ್ನು ಪೂರೈಸಲು ಭಾರತೀಯ ತೈಲ ಸಂಸ್ಕರಣಾಗಾರಗಳು 30,000 ಕೋ.ರೂ. ಹೂಡಿಕೆ ಮಾಡಬೇಕಾಗುತ್ತದೆ ಎಂದರು.