ಮತ್ತೊಂದು ಉಗ್ರ ದಾಳಿಗೆ ಸಂಚು: ಸೇನೆ ಮಿಂಚಿನ ಕಾರ್ಯಾಚರಣೆ
ಗುರುದಾಸ್‌ಪುರ: ಪಠಾಣ್‌ಕೋಟ್ ದಾಳಿ ನಡೆದ ಒಂದು ವಾರದಲ್ಲೇ ಪಂಜಾಬ್‌ನ ಮತ್ತೊಂದು ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಲು ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸೇನೆ ಮಿಂಚಿನ ಕಾರ್ಯಾಚರಣೆಗೆ ಇಳಿದೆ.
ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿ ನೋಡಿದ್ದಾಗಿ ಜನ ಹೇಳಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಪಡೆದ ಸೇನಾ ಸಿಬ್ಬಂದಿಯ ಒಂದು ತಂಡ ಸೇರಿದಂತೆ ಭದ್ರತಾ ಪಡೆ ಪಂಜಾಬ್‌ನ ಪಂದೇರ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಕಾರ್ಯಾಚರಣೆ ಆರಂಭಿಸಿದೆ.
ಗುರುದಾಸ್‌ಪುರ ಜಿಲ್ಲೆಯ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿದ್ದ ಶಂಕಿತ ಉಗ್ರರನ್ನು ಗ್ರಾಮಸ್ಥರು ಪ್ರಶ್ನಿಸಲು ಮುಂದಾದಾಗ, ಕಬ್ಬಿನ ಗದ್ದೆಯಲ್ಲಿ ಮರೆಯಾಗಿ ತಪ್ಪಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಗ್ಗೆ ಪಂಜಾಬ್ ಡಿಜಿಪಿ ಕ್ವರ್ ವಿಜಯಪ್ರತಾಪ್ ಸಿಂಗ್ ಅವರನ್ನು ಪ್ರಶ್ನಿಸಿದಾಗ, "ಯಾವುದನ್ನೂ ನಿರಾಕರಿಸುವುದಿಲ್ಲ. ವೈಮಾನಿಕ ಗಸ್ತು ಹಾಗೂ ಸೇನಾ ಚಲನವಲನ ಮುಂದುವರಿದಿದೆ" ಎಂದಷ್ಟೇ ಹೇಳಿದರು.
ಶಂಕಿತ ಉಗ್ರರ ಸ್ಥಳವನ್ನು ಡ್ರೋಣ್ ಪತ್ತೆಮಾಡಿದ್ದು, ಸೇನೆ ಈ ಸ್ಥಳವನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.