×
Ad

ಸೇನಾ ಸಮವಸ್ತ್ರ ಹೋಲುವ ಉಡುಗೆ ಧರಿಸದಿರಲು ನಾಗರಿಕರಿಗೆ ಸೂಚನೆ

Update: 2016-01-08 23:44 IST

ಚಂಡಿಗಡ,ಜ.8: ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಶುಕ್ರವಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಸೇನೆಯು ಸೇನಾ ಸಮವಸ್ತ್ರವನ್ನು ಹೋಲುವ ಬಟ್ಟೆಗಳನ್ನು ಧರಿಸದಂತೆ ನಾಗರಿಕರಿಗೆ ಸೂಚನೆಯನ್ನು ನೀಡಿದೆ,ಅಲ್ಲದೆ ಇಂತಹ ಉಡುಪುಗಳನ್ನು ಮಾರಾಟ ಮಾಡದಂತೆ ಅಂಗಡಿಕಾರರಿಗೆ ಎಚ್ಚರಿಕೆಯನ್ನು ನೀಡಿದೆ.
ಪಠಾಣ್‌ಕೋಟ್‌ನ ಭಾರತೀಯ ವಾಯುಪಡೆಯ ವಾಯುನೆಲೆಯ ಮೇಲೆ ಭಯೋತ್ಪಾದಕರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಡ್ಡಾಯವಾಗಿ ಅನ್ವಯವಾಗುವ ಈ ಮಾರ್ಗಸೂಚಿಯು ಹೊರಬಿದ್ದಿದೆ.
ಸೇನಾ ಸಮವಸ್ತ್ರಗಳು ಮತ್ತು ಉಪಕರಣಗಳ ಮಾರಾಟವು ಕಾನೂನು ಬಾಹಿರವಾಗಿದೆ ಎಂದು ಸೇನೆಯು ಅಂಗಡಿಕಾರರಿಗೆ ಸ್ಪಷ್ಟಪಡಿಸಿದೆ.
ಖಾಸಗಿ ಭದ್ರತಾ ಸಂಸ್ಥೆಗಳು,ಪೊಲೀಸ್ ಮತ್ತು ಇತರ ಕೇಂದ್ರೀಯ ಪಡೆಗಳಿಗೂ ಸೇನಾ ಸಮವಸ್ತ್ರಗಳನ್ನು ಬಳಸದಂತೆ ಸೂಚಿಸಲಾಗಿದೆ.
 
ಸೇನಾ ಸಮವಸ್ತ್ರ ಮಾರಾಟ ಮಾಡಲು ಬಯಸುವ ಎಲ್ಲ ವ್ಯಾಪಾರಿಗಳು ಮತ್ತು ಅಂಗಡಿಕಾರರು ಸ್ಥಳೀಯ ಮಿಲಿಟರಿ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ ಮತ್ತು ಸೇನಾ ಘಟಕಗಳು ಮತ್ತು ಕಂಟೋನ್ಮೆಂಟ್‌ಗಳಿಂದ ಅನುಮತಿ ಪಡೆದ ಪ್ರದೇಶಗಳಲ್ಲಿ ಅಂಗಡಿಗಳಿಗಾಗಿ ಮನವಿ ಸಲ್ಲಿಸಬಹುದು ಎಂದು ಅದು ಹೇಳಿದೆ. ಅನಧಿಕೃತ ವ್ಯಕ್ತಿಗಳಿಗೆ ಸೇನಾ ಸಮವಸ್ತ್ರಗಳ ಮಾರಾಟವು ಅಕ್ರಮವಾಗುತ್ತದೆ ಎಂದು ಹೇಳಿದ ಅಧಿಕೃತ ವಕ್ತಾರರು, ಸಾರ್ವಜನಿಕ ಹಿತಾಸಕ್ತಿಯಲ್ಲಿ ಮತ್ತು ಭಯೋತ್ಪಾದಕ ದಾಳಿಗಳನ್ನು ತಡೆಯಲು ಈ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಸಶಸ್ತ್ರ ಪಡೆಗಳ ಸಿಬ್ಬಂದಿಯ ಸಂಬಂಧಿಕರು ಮತ್ತು ಮಾಜಿ ಯೋಧರಿಗೂ ಸೇನಾ ಸಮವಸ್ತ್ರದ ವಸ್ತುಗಳನ್ನು ಬಳಸದಂತೆ ಸೂಚಿಸಲಾಗಿದೆ.

ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೇನೆಯು ಪೊಲೀಸ್ ಮತ್ತು ನಾಗರಿಕ ಆಡಳಿತವನ್ನು ಕೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News