×
Ad

ಕೇರಳದ ಮೀನುಗಾರರ ಹತ್ಯೆ ಪ್ರಕರಣ: ಲಾಟೊರೆ ಇಟಲಿ ವಾಸದ ಅವಧಿ ವಿಸ್ತರಣೆ

Update: 2016-01-13 21:28 IST

ಹೊಸದಿಲ್ಲಿ,ಜ.13: 2012,ಫೆಬ್ರುವರಿಯಲ್ಲಿ ಕೇರಳದ ಕರಾವಳಿಯಾಚೆ ಇಬ್ಬರು ಭಾರತೀಯ ಮೀನುಗಾರರ ಹತ್ಯೆ ಆರೋಪಿಯಾಗಿರುವ ಇಟಲಿಯ ನೌಕಾಪಡೆ ಯೋಧ ಮ್ಯಾಸ್ಸಿಮಿಲಾನೊ ಲಾಟೊರೆಯ ಸ್ವದೇಶ ವಾಸದ ಅವಧಿಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಎ.30ರ ವರೆಗೆ ವಿಸ್ತರಿಸಿದೆ. ಮಂಗಳವಾರವಷ್ಟೇ ಇಟಲಿಯ ಸೆನೆಟರ್ ನಿಕೋಲಾ ಲಾಟೊರೆ,ಆತ ವಿಚಾರಣೆಯನ್ನು ಎದುರಿಸಲು ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಿದ್ದರು.


ಆರೋಗ್ಯದ ಕಾರಣಗಳಿಂದಾಗಿ ಮ್ಯಾಸ್ಸಿಮಿಲಾನೊ ಲಾಟೊರೆಗೆ ಸ್ವದೇಶದಲ್ಲಿ ವಾಸಕ್ಕೆ ನೀಡಿದ್ದ ಅವಧಿಯು ಬುಧವಾರ ಅಂತ್ಯಗೊಂಡಿತ್ತು.


ಸೆನೆಟ್‌ನ ರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ನಿಕೊಲಾ ಲಾಟೊರೆಯವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದು ಸರಕಾರದ ಹೇಳಿಕೆಯಲ್ಲ ಎಂದು ಇಟಲಿ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.


ಇಟಲಿಯು ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ ಮತ್ತು ಓರ್ವ ’ರಾಜಕಾರಣಿ’ಯ ಹೇಳಿಕೆಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.


  ಮ್ಯಾಸ್ಸಿಮಿಲಾನೊ ಲಾಟೊರೆ ಭಾರತಕ್ಕೆ ಮರಳುವುದಿಲ್ಲ ಮತ್ತು ಸಾಲ್ವಾತೋರ್ ಗಿರೋನೆಯನ್ನು ಇಟಲಿಗೆ ಮರಳಿಸುವಂತೆ ಕೋರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ನಿಕೊಲಾರನ್ನು ಉಲ್ಲೇಖಿಸಿ ಇಟಲಿಯ ಸುದ್ದಿಸಂಸ್ಥೆಯೊಂದು ಶನಿವಾರ ವರದಿ ಮಾಡಿತ್ತು.


ಮಿದುಳಿನ ಆಘಾತಕ್ಕೊಳಗಾಗಿದ್ದ ಲಾಟೊರೆ ನಾಲ್ಕು ತಿಂಗಳ ಅವಧಿಗೆ ಇಟಲಿಗೆ ಮರಳಲು ಸರ್ವೋಚ್ಚ ನ್ಯಾಯಾಲಯವು 2014,ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿತ್ತು. ಇನ್ನೋರ್ವ ಆರೋಪಿ ಗಿರೋನೆ ದಿಲ್ಲಿಯ ಇಟಲಿ ರಾಯಭಾರಿ ಕಚೇರಿಯಲ್ಲಿ ಸ್ಥಾನಬದ್ಧತೆಯಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News