ಮಅದನಿಯ ವಿಚಾರಣೆ; ವಾರದೊಳಗೆ ನಿರ್ಧಾರ ತೆಗೆದುಕೊಳ್ಳಲು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಜ.14: ಎಂಟು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮಅದನಿ ವಿರುದ್ಧದ ಎಲ್ಲ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವ ನಿರ್ಧಾರವನ್ನು ವಾರದೊಳಗಾಗಿ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಮಅದನಿ ಈ ಬಗ್ಗೆ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮದನಿಯ ವಿರುದ್ಧದ ಪ್ರಕರಣದ ವಿಚಾರಣೆಗೆ ಎಷ್ಟು ದಿನಬೇಕಾಗಬಹುದೆಂದು ಕರ್ನಾಟಕ ಹೈಕೋರ್ಟ್‌ನ್ನು ಕೇಳಿದೆ.
ಇದೇ ವೇಳೆ ಮಅದನಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಮುಂದೂಡಿದೆ.
2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಮಅದನಿ ಸೇರಿದಂತೆ 31ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಸರಣಿ ಬಾಂಬ್ ಸ್ಫೋಟದಿಂದಾಗಿ 20 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮಅದನಿಯನ್ನು 2010ರಲ್ಲಿ ಬಂಧಿಸಲಾಗಿತ್ತು.