×
Ad

ಸೇನಾ ನೆಲೆಗಳ ಭದ್ರತಾ ಸಮೀಕ್ಷೆ

Update: 2016-01-16 00:17 IST

ಹೊಸದಿಲ್ಲಿ, ಜ.15: ಶತ್ರುಗಳಿಂದ ಸುಲಭ ದಾಳಿಗೊಳಗಾಗಬಹುದಾದ ಸಶಸ್ತ್ರ ಸೇನೆ, ಅರೆ ಸೈನಿಕ ಪಡೆ ಹಾಗೂ ಪೊಲೀಸ್‌ನ ಸೇನಾ ನೆಲೆಗಳ ಭದ್ರತಾ ಸಮೀಕ್ಷೆಯನ್ನು ನಡೆಸಲಾಗುವುದೆಂದು ಸರಕಾರವಿಂದು ಘೋಷಿಸಿದೆ. ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಬಳಿಕ ದೇಶದ ಪರಿಸ್ಥಿತಿಯನ್ನು ಪರಾಮರ್ಷಿಸಲು ನಡೆಸಲಾಗಿದ್ದ ಉನ್ನತ ಮಟ್ಟದ ಸಭೆ ಯೊಂದರ ಬಳಿಕ ಅದು ಈ ಘೋಷಣೆಯನ್ನು ಮಾಡಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಅವರ ಅಧ್ಯಕ್ಷತೆ ಹಾಗೂ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಮತ್ತು ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಇತರ ಉನ್ನತಾಧಿಕಾರಿಗಳು ಉಪಸ್ಥಿತರಿದ್ದ ಸಭೆಯು ವಾಯು ನೆಲೆಯ ಮೇಲೆ ಜ.2ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಪರಿಣಾಮಗಳ ಕುರಿತು ಚರ್ಚಿಸಿತು.

ಗಡಿಯಾಚೆಯಿಂದ ಉಗ್ರವಾದಿ ಶಕ್ತಿಗಳ ಮುಂದುವರಿಯುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ, ವಿಶೇಷವಾಗಿ ತಂತ್ರಜ್ಞಾನದಲ್ಲಿ-ಗುಪ್ತಚರ ಹಾಗೂ ತಡೆ ಸಾಮರ್ಥ್ಯಗಳನ್ನು ಇನ್ನಷ್ಟು ಉನ್ನತೀಕರಿಸುವ ಅಗತ್ಯವಿದೆಯೆಂದು ಒತ್ತಿ ಹೇಳಲಾಗಿದೆ. ಸಶಸ್ತ್ರ ಸೇನೆ, ಅರೆ ಸೇನಾಪಡೆ ಹಾಗೂ ಪೊಲೀಸ್‌ನ ಎಲ್ಲ ಸುಲಭ ಗುರಿಯ ಕೇಂದ್ರಗಳ ಭದ್ರತಾ ತಪಾಸಣೆಯನ್ನು ನೀಡಲಾದ ಸಮಯ ಮಿತಿಯೊಳಗೆ ಮಾಡಲಾಗುವುದು ಎಂದು ಗೃಹಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News