×
Ad

ಶಬರಿಮಲೆ ಮಹಿಳೆ ಪ್ರವೇಶ ಹೋರಾಟಗಾರನಿಗೆ 500 ಬೆದರಿಕೆ ಕರೆ

Update: 2016-01-16 00:23 IST

ಕೇರಳ: ಕೇರಳದ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರೂ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿರುವ ವಕೀಲನಿಗೆ ಸುಮಾರು 500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಸುಪ್ರೀಂಕೋರ್ಟ್‌ಗೆ ಶುಕ್ರವಾರ ತಿಳಿಸಲಾಗಿದೆ.

ಇಂಡಿಯನ್ ಯಂಗ್ ಲಾಯರ್ಸ್‌ ಅಸೋಸಿಯೇಶನ್ ಅಧ್ಯಕ್ಷ ನೌಶದ್ ಅಹ್ಮದ್ ಖಾನ್ ಸುಪ್ರೀಂಕೋರ್ಟ್‌ಗೆ ನೀಡಿದ ಮಾಹಿತಿಯಂತೆ, ನನ್ನ ಮನೆಯನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಕೈಬಿಡುವಂತೆ ಬೆದರಿಕೆ ಹಾಕಲಾಗಿದೆ.

ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯ, ಪ್ರಾರ್ಥನಾ ಸ್ಥಳಗಳಿಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವುದು ಸಂವಿಧಾನಬಾಹಿರ ಎಂದು ಹೇಳಿತ್ತು. ಖಾನ್ ಅವರಿಗೆ ಯಾವ ಬಗೆಯ ಭದ್ರತೆ ನೀಡಬೇಕು ಎನ್ನುವುದನ್ನು ಸೋಮವಾರ ನಿರ್ಧರಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

ಈ ಮಧ್ಯೆ ಅಯ್ಯಪ್ಪ ದೇವಸ್ಥಾನವನ್ನು ಮಹಿಳೆಯರು ಪ್ರವೇಶಿಸುವುದಕ್ಕೆ ಯಾಕೆ ನಿರ್ಬಂಧ ಹೇರಲಾಗಿದೆ ಎಂಬ ಬಗ್ಗೆ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುತ್ತಿರುವ ತಿರುವಾಂಕೂರ್ ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟ್ ಕೇಳಿದೆ. ಆದರೆ ಕೇರಳ ಸರಕಾರದ ಅಧಿಕಾರಿಗಳು ಹಾಗೂ ದೇವಸ್ವಂ ಮಂಡಳಿಯ ಅಧಿಕಾರಿಗಳು ದಶಕಗಳಿಂದ ನಡೆದುಕೊಂಡುಬಂದ ಸಂಪ್ರದಾಯವನ್ನು ಮುಂದುವರಿಸುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಈ ಸಂಪ್ರದಾಯದಂತೆ ಋತುಮತಿಯಾಗುವ ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಟ್ಟದ ತುದಿಯ ಈ ದೇಗುಲಕ್ಕೆ 10ಕ್ಕಿಂತ ಕಡಿಮೆ ವಯಸ್ಸಿನ ಹಾಗೂ 50ಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ.

ಕೇರಳದ ದೇವಾಲಯ ವ್ಯವಹಾರ ಖಾತೆ ಸಚಿವ ವಿ.ಎಸ್.ಶಿವಕುಮಾರ್ ಅವರು, ಸರಕಾರ ನಂಬಿಕೆ ಹಾಗೂ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯರು ಮುಟ್ಟಾಗುವುದು ನಿಂತಿದೆಯೇ ಎನ್ನುವುದನ್ನು ಯಂತ್ರದ ಸಹಾಯದಿಂದ ಪರಿಶೀಲಿಸಿ, ದೇವಾಲಯದ ಒಳಕ್ಕೆ ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಮುಖ್ಯಸ್ಥ ಹೇಳಿಕೆ ನೀಡಿದ ಬಳಿಕ ಕಳೆದ ನವೆಂಬರ್‌ನಲ್ಲಿ ಹಲವು ಮಂದಿ ಮಹಿಳೆಯರು ಹ್ಯಾಪಿ ಟೂ ಬ್ಲೀಡ್ ಎಂಬ ಸಾಮಾಜಿಕ ಜಾಲತಾಣ ಆಂದೋಲನ ಆರಂಭಿಸಿದ್ದರು. ಈ ಪ್ರಸಿದ್ಧ ಯಾತ್ರಾಸ್ಥಳಕ್ಕೆ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News