ಪೋರ್ಚುಗಲ್ ಸರಕಾರ ಗೋವಾದ ಕ್ಷಮೆ ಕೋರಲಿ: ಸಚಿವ ಧವಳಿಕರ್ ಆಗ್ರಹ
ಪಣಜಿ5: ಪೋರ್ಚುಗಲ್‌ನ ಪ್ರಧಾನಿಯಾಗಿ ಆಯ್ಕೆಯಾಗಿರುವ, ಗೋವಾ ಮೂಲದ ಅಂಟೋನಿಯೊ ಕೋಸ್ತಾರಿಗೆ ಅಭಿನಂದನೆ ಸಲ್ಲಿಸುವ ಗೊತ್ತುವಳಿಯೊಂದನ್ನು ಗೋವಾ ವಿಧಾನಸಭೆಯು ಇಂದು ಮಂಜೂರು ಮಾಡಿದೆ. ಈ ನಡುವೆಯೇ, 450ಕ್ಕೂ ಹೆಚ್ಚು ಕಾಲ ‘ಕರುಣಾ ಹೀನನಾಗಿ’ ಆಡಳಿತ ನಡೆಸಿದ್ದುದಕ್ಕಾಗಿ ಪೋರ್ಚುಗೀಸರು ಗೋವನ್ನರಲ್ಲಿ ಕ್ಷಮೆ ಯಾಚಿಸಬೇಕೆಂದು ರಾಜ್ಯದ ಸಚಿವರೊಬ್ಬರು ಆಗ್ರಹಿಸಿದ್ದಾರೆ.
ಕೋಸ್ತಾರಿಗೆ ಅಭಿನಂದನಾ ಗೊತ್ತುವಳಿಯ ಮೇಲಿನ ಚರ್ಚೆಯ ವೇಳೆ ಬಿಜೆಪಿಯ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ನಾಯಕ ಹಾಗೂ ಗೋವಾದ ಲೋಕೋಪಯೋಗಿ ಸಚಿವ ರಾಮಕೃಷ್ಣ ಧವಳಿಕರ್ ಈ ಹೇಳಿಕೆ ನೀಡಿದ್ದಾರೆ.
ಸುದೀರ್ಘ ಪೋರ್ಚುಗೀಸ್ ಆಡಳಿತದ ಕುರಿತಾದ ಕೆಲವು ಗಾಯಗಳು ಗೋವನ್ನರಿಗೆ ಈಗಲೂ ಇದೆ. ಆದರೆ, ಅದು ಆ ದೇಶದಲ್ಲಿ ಅಂತಹ ಉನ್ನತ ಸ್ಥಾನವೊಂದನ್ನು ಪಡೆದಿರುವ ‘ಮಣ್ಣಿನ ಮಗನನ್ನು’ ಅಭಿನಂದಿಸುವುದಕ್ಕೆ ತಡೆಯಾಗಬಾರದೆಂದು ಚರ್ಚೆಯ ವೇಳೆ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಹೇಳಿದರು.
450ಕ್ಕೂ ಹೆಚ್ಚು ವರ್ಷಗಳ ಕಾಲ ಗೋವೆಯನ್ನು ಕರುಣೆಯಿಲ್ಲದೆ ಆಳಿದ್ದುದಕ್ಕಾಗಿ ಪೋರ್ಚುಗಲ್, ಗೋವನ್ನರ ಕ್ಷಮೆಯಾಚಿಸಬೇಕು. ಅವರು ಯುದ್ಧದಲ್ಲಿ ರಾಜ್ಯವನ್ನು ಗೆದ್ದಿರಲಿಲ್ಲ. 1510ರಲ್ಲಿ ಆಗಿನ ರಾಜ ಆದಿಲ್ ಶಾ, ಅವರಿಗೆ ಆಳ್ವಿಕೆಗಾಗಿ ನಿರ್ದಿಷ್ಟ ಭಾಗವೊಂದನ್ನು ನೀಡಿದ್ದರು. ಬಳಿಕ ಪೋರ್ಚುಗೀಸರು ತಮ್ಮ ಸಾಮ್ರಾಜ್ಯಕ್ಕೆ ಭೂ ಪ್ರದೇಶಗಳನ್ನು ಸೇರಿಸುತ್ತಲೇ ಹೋದರೆಂದು ಧವಳಿಕರ್ ವಿಧಾನ ಸಭೆಯಲ್ಲಿ ಆರೋಪಿಸಿದರು.
ಕೇವಲ ಅವರು ಗೋವೆಯ ‘ಮಣ್ಣಿನ ಮಗ’ ಎಂಬ ಕಾರಣಕ್ಕಾಗಿ ಪ್ರಧಾನಿಯಾಗಿ ಆಯ್ಕೆಯಾಗಿರುವ ಕೋಸ್ತಾರನ್ನು ಅಭಿನಂದಿಸುವುದು ಒಳ್ಳೆಯದಲ್ಲವೆಂದು ತಾನು ಭಾವಿಸುವುದಿಲ್ಲ. ಆದರೆ ಅದೇ ವೇಳೆ ಪೋರ್ಚುಗೀಸರ ಆಡಳಿತವು ತಮ್ಮನ್ನು ಹಿಂದುಳಿಸಲು ಪ್ರಯತಿಸಿತ್ತೆಂಬುದನ್ನು ಮರೆಯಬಾರದೆಂದು ಅವರು ಹೇಳಿದರು.
ಗೋವಾ ಸ್ವತಂತ್ರವಾಗದಿರುತ್ತಿದ್ದರೆ ತಮಗೆ ಆಗಸ್ಟ್ ಹೌಸ್‌ನಲ್ಲಿ ಕುಳಿತು ಈ ವಿಷಯ ಚರ್ಚಿಸಲು ಎಂದೂ ಸಾದ್ಯವಾಗುತ್ತಿರಲಿಲ್ಲ. ಪೋರ್ಚುಗೀಸರ ಆಡಳಿತ ವೇಳೆ ತಾವು ವಿದ್ಯಾಭ್ಯಾಸಕ್ಕಾಗಿ ಇತರ ದೇಶಗಳಿಗೆ ಹೋಗಬೇಕಿತ್ತೆಂಬುದನ್ನು ಮರೆಯಬಾರದೆಂದು ಗೋವಾ ಬೀಚ್‌ನಲ್ಲಿ ಬಿಕಿನಿ ನಿಷೇಧಕ್ಕೆ ಆಗ್ರಹಿಸಿ ವಿವಾದ ಸೃಷ್ಟಿಸಿದ್ದ ಧವಳಿಕರ್ ತಿಳಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ್ದ ಪಕ್ಷೇತರ ಶಾಸಕ ವಿಜಯ್ ಸರ್ದೇಸಾಯಿ, ಪೋರ್ಚುಗಲ್‌ನ ಅತ್ಯುನ್ನತ ಸ್ಥಾನಕ್ಕೆ ಕೋಸ್ತಾರ ಭಡ್ತಿಯ ಮೂಲಕ ಕಾಲವೇ ಪ್ರತಿಕಾರ ತೀರಿಸಿದೆ. ಆಳಿಸಿ ಕೊಂಡಿದ್ದವರು ಆಳುವವರಾಗಿದ್ದಾರೆ. ಆದರಿಂದಾಗಿ ಇದು ಗೋವಾಕ್ಕೆ ಮಹಾನ್ ದಿನವಾಗಿದೆ ಎಂದರು.