ಬಿಎಸ್ಪಿ ಸಂಸದ ಜುಗಲ್‌ಕಿಶೋರ್ ಬಿಜೆಪಿಗೆ
ಹೊಸದಿಲ್ಲಿ: ಬಹುಜನ ಸಮಾಜ ಪಾರ್ಟಿಯ (ಬಿಎಸ್ಪಿ) ಸಂಸದ ಜುಗಲ್‌ಕಿಶೋರ್ ಇಂದು ಬಿಜೆಪಿ ಸೇರಿದ್ದಾರೆ. ಅವರ ಸೇರ್ಪಡೆಯಿಂದಾಗಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ, ದಲಿತರ ಮತಗಳನ್ನು ಗಳಿಸಲು ಪಕ್ಷಕ್ಕೆ ಸಹಾಯವಾಗಲಿದೆಯೆಂದು ಬಿಜೆಪಿ ಪ್ರತಿಪಾದಿಸಿದೆ.
ಕಿಶೋರ್‌ರ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ ಬಾಜಪೇಯಿ, ಕಿಶೋರ್ ಪರಿಶೀಷ್ಟ ಜಾತಿಗಳನ್ನು ಪಕ್ಷಕ್ಕೆ ಜೋಡಿಸಲಿದ್ದಾರೆ. ಅವರು ಬಿಎಸ್ಪಿಯ ಸಂಘಟನಾ ಶಕ್ತಿಯನ್ನು ಕಟ್ಟುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಿದರು. ಪವಿತ್ರ ಮಕರ ಸಂಕ್ರಮಣದ ದಿನ ಕಿಶೋರ್‌ರ ಪಕ್ಷ ಸೇರ್ಪಡೆಯು ಉತ್ತರ ಪ್ರದೇಶದ ಚುನಾವಣೆಗೆ ಬಿಜೆಪಿಯ ಅಭಿಯಾನದ ಆರಂಭವಾಗಿದೆ. ಇದು ಮಾಯಾವತಿಯವರ ಹುಟ್ಟು ಹಬ್ಬಕ್ಕೆ ಕೊಡುಗೆಯಾಗಿದೆಯೆಂದು ಅವರು ತಿಳಿಸಿದರು.
ದಲಿರ ಸಮುದಾಯದಿಂದ ಬಂದಿರುವ ಬಿಎಸ್ಪಿಯ ಸ್ಥಾಪಕ ಸದಸ್ಯ ಕಿಶೋರ್, ಮಾಯಾವತಿ ದಲಿತರ ಮತಗಳನ್ನು ‘ಮಾರುತ್ತಿದ್ದಾರೆ’ ಎಂದು ಆರೋಪಿಸಿದರು. ದಲಿತ ಸಮುದಾಯದ ಆಶೋತ್ತರಗಳ ಈಡೇರಿಕೆಗಾಗಿ ಕೆಲಸ ಮಾಡುತ್ತಿರುವುದು ಬಿಜೆಪಿಯೊಂದೇ ಎಂದವರು ಒತ್ತಿ ಹೇಳಿದರು.