ನೀವು ಬೀಫ್ ತಿಂದಿಲ್ಲ ಎನ್ನುವುದಕ್ಕೆ ಸಾಕ್ಷಿ ಕೊಡಿ...

Update: 2016-01-17 05:01 GMT

ಗೋಮಾಂಸ ಹೊಂದಿದ್ದಕ್ಕೆ ಬಂಧನ, ಗೋಮಾಂಸ ತಿಂದುದಕ್ಕೆ ಹತ್ಯೆ...ದಿನ ನಿತ್ಯ ಇದೇ ಸುದ್ದಿ. ಅದೊಂದು ದಿನ ಪತ್ರಕರ್ತ ಎಂಜಲು ಕಾಸಿ ಯಾವುದೋ ಪತ್ರಿಕಾಗೋಷ್ಠಿಗೆಂದು ಹೊರಡಲು ಬಸ್‌ಸ್ಟಾಂಡಲ್ಲಿ ಬಸ್ ಕಾಯುತ್ತಿದ್ದ. ಇದ್ದಕ್ಕಿದ್ದಂತೆಯೇ ಇಬ್ಬರು ಪೊಲೀಸರು ಅವನ ಮುಂದೆ ಬಂದು ನಿಂತರು.

‘‘ಸಾಹೇಬ್ರು ನಿಮ್ಮನ್ನು ಠಾಣೆಗೆ ಬರಲು ಹೇಳಿದ್ದಾರೆ...’’ ಒಬ್ಬ ಒರಟಾಗಿ ಹೇಳಿದ.
ಅರೆ! ನಾನು ಪತ್ರಕರ್ತ ಎನ್ನೋದು ಇವರಿಗೆ ಹೇಗೆ ಗೊತ್ತಾಯಿತು? ‘‘ಏನ್ರಿ ಸಾಹೇಬರು ಪತ್ರಿಕಾಗೋಷ್ಠಿ ಕರೆದಿದ್ದಾರ?’’ ಹೆಮ್ಮೆಯಿಂದ ಕೇಳಿದ.
‘‘ಅದೇನೋ ಗೊತ್ತಿಲ್ಲ. ನಿಮ್ಮ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ...’’ ಪೇದೆಯೊಬ್ಬ ಹೇಳಿದ.


ಕಾಸಿ ನಿಂತಲ್ಲೇ ಬೆಚ್ಚಿ ಬಿದ್ದ. ‘‘ಯಾರು? ಯಾಕೆ ಕೇಸು ದಾಖಲು ಮಾಡಿರೋದು?’’ ಅಳುಕುತ್ತಾ ಕೇಳಿದ. ಪತ್ರಿಕೆಯಲ್ಲಿ ಬರೆದ ಸುದ್ದಿಗಾಗಿ ತನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿರಬಹುದೇ? ಎಂದು ಯೋಚಿಸಿದ.


‘‘ಅಲ್ಲರೀ...ನಿಮ್ಮ ಪಕ್ಕದಲ್ಲೇ ಇಲ್ಲೊಬ್ಬರು ನಿಂತಿದ್ದರಲ್ಲ ಅವರು ಈಗ ತಾನೆ ಸಾಹೇಬರಿಗೆ ಕಂಪ್ಲೇಟ್ ಮಾಡಿದ್ದಾರೆ....ನಿಮ್ಮ ಕೈಯಿಂದ ಮಾಂಸಾಹಾರ ಸೇವಿಸಿದ ವಾಸನೆ ಬರುತ್ತಿತ್ತಂತೆ. ನೀವು ಗೋಮಾಂಸ ಸೇವಿಸಿ ಬಂದಿದ್ದೀರಿ ಎಂದು ಅವರು ದೂರು ದಾಖಲಿಸಿದ್ದಾರೆ...’’ ಪೊಲೀಸ್ ತಿರಸ್ಕಾರದಿಂದ ಹೇಳಿದ.
ಕಾಸಿ ಬೆಚ್ಚಿ ಕೈ ಮೂಸಿ ನೋಡಿದ. ಬೆಳಗ್ಗೆ ರೊಟ್ಟಿ ಮತ್ತು ಚಿಕನ್ ಸುಕ್ಕ ತಿಂದ ವಾಸನೆ. ಆಗಾಗ ಮೂಸಿ ನೋಡುತ್ತಾ ಇರಬಹುದು ಎಂದು ಸೋಪು ಹಾಕಿ ಕೈ ತೊಳೆದಿರಲಿಲ್ಲ. ಈಗ ನೋಡಿದರೆ ಬೀಫ್ ತಿಂದಿದ್ದೇನೆ ಎನ್ನುವ ಆರೋಪ.


‘‘ನಾನು ಬೀಫ್ ತಿಂದಿಲ್ಲಾರಿ...ಚಿಕನ್ ಸುಕ್ಕಾ ತಿಂದಿದ್ದೆ. ಬೇಕಾದರೆ ನೋಡಿ...’’ ಎಂದು ಕೈಯನ್ನು ಪೊಲೀಸರ ಮೂಗಿನ ಕಡೆಗೆ ಹಿಡಿದ.

ಪೊಲೀಸ್ ವ್ಯಾಕ್ ಎನ್ನುತ್ತಾ ‘‘ಏನ್ರೀ...ನೀವು ಎಡಗೈಯನ್ನು ನನ್ನ ಮೂಗಿಗೆ ಇಡುತ್ತೀರಲ್ಲಾ...ಬಲಗೈ ಇಡ್ರೀ...’’ ಎಂದ. ಕಾಸಿ ನಾಚುತ್ತಾ ಹೇಳಿದ ‘‘ಇಲ್ಲಾ ಸಾರ್...ನಾನು ಬರೆಯುವುದು, ಊಟ ಮಾಡುವುದು ಎಡಗೈಯಲ್ಲಿ ಸಾರ್’’ ಎಂದ.


‘‘ತಥ್...ಅದೇನಿದ್ರೂ...ಸಾಹೇಬರತ್ರ ಹೇಳಿ. ಠಾಣೆಗೆ ನಡೀರಿ...’’ ಎನ್ನುತ್ತಾ ಕಾಸಿಯನ್ನು ಠಾಣೆಗೆ ಎಳೆದೊಯ್ದರು.


*********************************************************************************************


‘‘ಏನ್ರೀ...ಬೀಫ್ ತಿಂದಿದ್ದೀರಾ...? ಅದೂ ಸಾರ್ವಜನಿಕವಾಗಿ...’’ ಇನ್ಸ್‌ಪೆಕ್ಟರ್ ಅಬ್ಬರಿಸಿದರು.
‘‘ಸಾರ್ವಜನಿಕವಾಗಿ ತಿಂದಿಲ್ಲ...ಸಾರ್...ನನ್ನ ಕೈಯಿಂದ ಮಾಂಸದ ವಾಸನೆ ಬಂತೆಂದು ದೂರು ಕೊಟ್ಟಿದ್ದಾರೆ.     ಆದರೆ ನಾನು ಚಿಕನ್ ತಿಂದಿರೋದ್ ಸಾರ್...’’ ಕಾಸಿ ಅಂಗಲಾಚಿದ.


‘‘ನಾವು ಹ್ಯಾಗ್ರೀ ನಂಬೋದು? ನೀವು ತಿಂದಿರೋದು ಬೀಫ್ ಎಂದು ಈಗಾಗಲೇ ಒಬ್ಬರು ದೂರು ನೀಡಿದ್ದಾರೆ. ಅವನ ಭಾವನೆಗಳಿಗೆ ಅದರಿಂದ ಧಕ್ಕೆಯಾಗಿದೆಯಂತೆ...ನಾವು ದೂರು ದಾಖಲಿಸಬೇಕು. ಯಾಕೆಂದರೆ ಇದು ಧಾರ್ಮಿಕ ಸೂಕ್ಷ್ಮ ವಿಷಯ...’’ ಇನ್ಸ್‌ಪೆಕ್ಟರ್ ಹೇಳಿದ.
‘‘ಸಾರ್ ಅವರು ನನ್ನ ಗಡ್ಡ ನೋಡಿ ಹಾಗೆ ದೂರು ನೀಡಿರಬಹುದು. ಮುಸ್ಲಿಮ್ ಎಂದು ತಪ್ಪು ತಿಳಿದಿದ್ದಾರೆ ಸಾರ್. ನಾನು ಪತ್ರಕರ್ತ ಎಂಜಲು ಕಾಸಿ ಸಾರ್....’’ ಕಾಸಿ ಸ್ಪಷ್ಟ ಪಡಿಸಿದ.


‘‘ನೀವು ಕಾಸಿ ಆಗಿರಬಹುದು. ಅಥವಾ ಕಾಸಿಂ ಆಗಿರಬಹುದು. ಆದರೆ ದೂರು ದಾಖಲಾಗಿದೆ. ಈಗಾಗಲೇ ದಿಲ್ಲಿಯಿಂದ ದೊಡ್ಡ ದೊಡ್ಡ ನಾಯಕರೆಲ್ಲ ಈಗಾಗಲೇ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಫೋನ್ ಮಾಡಿ ಕೇಳಿದ್ದಾರೆ. ವ್ಯಕ್ತಿಯೊಬ್ಬ ದನದ ಹತ್ಯೆ ಮಾಡಿ ಸಾರ್ವಜನಿಕವಾಗಿ ಬೇಯಿಸಿ ತಿಂದಿದ್ದಾನೆ ಎಂದು ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಕಾಣಿಸಿಕೊಂಡಿದೆ. ಸಂಘಪರಿವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯೋಜನೆ ಹಾಕಿಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಕಾಸಿಯ ಬದಲಿಗೆ ಕಾಸಿಂ ಎಂದು ಪ್ರಚಾರವೂ ಆಗಿದೆ...ನಾವೇನು ಮಾಡೋಕಾಗಲ್ಲ...’’


‘‘ಆದರೆ ನಾನು ಕಾಸಿಂ ಅಲ್ಲ ಸಾರ್, ಕಾಸಿ ಸಾರ್...’’ ಕಾಸಿ ಅಂಗಲಾಚಿದ.

‘‘ಒಂದು ಸೊನ್ನೆಯ ವ್ಯತ್ಯಾಸ ಕಣ್ರೀ...ಸೊನ್ನೆಗೆ ಬೆಲೆಯಿಲ್ಲ...ಕಾಸಿಯಾದರೂ ಕಾಸಿಂ ಆದ್ರೂ ನೀವು ಗೋಮಾಂಸ ತಿಂದದ್ದು ತಪ್ಪೇ ಆಗಿದೆ...’’ ಎಂದು ಇನ್ಸ್‌ಪೆಕ್ಟರ್ ಲಾಠಿಯನ್ನು ಟೇಬಲ್‌ಗೆ ಬಡಿದ. ‘‘ನಾನು ಬೀಫ್ ತಿಂದಿಲ್ಲ ಸಾರ್...ಚಿಕನ್ ತಿಂದಿರೋದು ಸಾರ್...’’ ಕಾಸಿ ಮತ್ತೆ ಬೇಡಿಕೊಂಡ.
‘‘ನೋಡ್ರೀ...ಚಿಕನ್ ತಿನ್ನಿ, ಬೀಫ್ ತಿನ್ನಿ. ಅದು ಸಾಬೀತಾಗೋದು ಕೋರ್ಟಿನಲ್ಲಿ. ಚಿಕನ್ ತಿಂದ ಮೇಲೆ ಲೈಫ್ ಬಾಯ್ ಸೋಪ್ ಹಾಕಿ ಕೈಯನ್ನು ಚೆನ್ನಾಗಿ ತೊಳೆಯೋದು ಬಿಟ್ಟು, ಸಾರ್ವಜನಿಕವಾಗಿ ಅದರ ವಾಸನೆಯನ್ನು ಹರಡಿರುವುದು ಅಪರಾಧವಲ್ಲವೇ? ಕೋಮು ಪ್ರಚೋದನೆಯಲ್ಲವೇ? ಆದುದರಿಂದ ನಿಮ್ಮ ಮೇಲೆ ಕೇಸು ದಾಖಲಿಸಲೇಬೇಕಾಗುತ್ತದೆ...’’


‘‘ಸಾರ್...ನಾನು ಬೀಫ್ ತಿಂದಿದ್ದೇನೆ ಎನ್ನುವುದಕ್ಕೆ ನಿಮ್ಮಲ್ಲಿ ಸಾಕ್ಷಿ ಏನಿದೆ...?’’ ಕಾಸಿ ಈಗ ಸಿಟ್ಟಿನಿಂದ ಕೇಳಿದ.
‘‘ನೀವು ಬೀಫ್ ತಿಂದಿಲ್ಲ ಎನ್ನುವುದಕ್ಕೆ ಸಾಕ್ಷಿ ಕೊಡಿ. ನಾನು ನಿಮ್ಮನ್ನು ಬಿಟ್ಟು ಬಿಡುತ್ತೇನೆ...’’ ಇನ್ಸ್‌ಪೆಕ್ಟರ್ ಪ್ರತಿ ಪ್ರಶ್ನೆ ಕೇಳಿದ.
ಕಾಸಿ ತಲೆ ತುರಿಸ ತೊಡಗಿದ. ‘‘ಹೊಟ್ಟೆಯಲ್ಲಿದ್ದುದನ್ನು ಹೊರಗೆ ತೆಗೆಯುವುದು ಹೇಗೆ ಸಾರ್...ಅದೀಗ ಜೀರ್ಣವಾಗಿ ಹೋಗಿದೆ...’’
‘‘ಅದೆಲ್ಲ ನನಗೆ ಗೊತ್ತಿಲ್ಲ. ಇದು ಭಾವನಾತ್ಮಕ ವಿಷಯವಾಗಿರುವುದರಿಂದ...ನಿಮ್ಮನ್ನು ಬಂಧಿಸಿ ಜನರಿಗೆ ಕಾನೂನಿನ ಮೇಲೆ ಗೌರವ ಮೂಡುವಂತೆ ಮಾಡುವುದು ನನ್ನ ಕರ್ತವ್ಯ.’’


ಎನ್ನುತ್ತಾ ಕಾಸಿಯನ್ನು ಸೆಲ್‌ನೊಳಗೆ ತಳ್ಳಿದ.
ಅಷ್ಟರಲ್ಲಿ ಪೇದೆಯೊಬ್ಬ ಗಡ್ಡಧಾರಿಯೊಬ್ಬನನ್ನು ಬ್ಯಾಗ್ ಸಮೇತ ಎಳೆದುಕೊಂಡು ಬಂದ.
‘‘ಸಾರ್...ಬಸ್‌ನಲ್ಲಿ ಬೀಫ್ ಸಾಗಿಸುತ್ತಿದ್ದ ಸಾರ್...ಪ್ರಯಾಣಿಕರು ಅನುಮಾನ ಪಟ್ಟು ದೂರು ನೀಡಿದ್ದಾರೆ. ಬ್ಯಾಗ್ ತೆರಿ ಎಂದರೆ...ಅವನು ಅದಕ್ಕೆ ಅವಕಾಶ ನೀಡುತ್ತಿಲ್ಲ. ನಿಜಕ್ಕೂ ಗೋಮಾಂಸ ಇರಬೇಕು ಸಾರ್...’’ ಗಡ್ಡಧಾರಿ ನಡುಗುತ್ತಾ ನಿಂತಿದ್ದ.
ಬ್ಯಾಗ್‌ನ್ನು ತೆರೆಯಲಾಯಿತು. ನೋಡಿದರೆ ಬ್ಯಾಗ್ ತುಂಬಾ ಕಳ್ಳ ನೋಟುಗಳು.


ಇನ್ಸ್‌ಪೆಕ್ಟರ್ ಸಿಟ್ಟಿನಿಂದ ಕುದ್ದು ಹೋದ. ಪೇದೆಯ ಕಡೆ ನೋಡಿ...‘‘ಏನ್ರೀ...ಬೀಫ್ ಸಾಗಿಸುತ್ತಿದ್ದಾನೆ ಎಂದು ಅಮಾಯಕರನ್ನೆಲ್ಲ ಎಳ್ಕೊಂಡು ಬರ್ತಾ ಇದ್ದೀರಲ್ಲ...ಇದರಲ್ಲಿರುವುದು ಕಳ್ಳ ನೋಟು, ಬೀಫ್ ಅಲ್ಲ. ಇವನನ್ನು ಮರ್ಯಾದೆಯಾಗಿ ಕರೆದುಕೊಂಡು ಅವನ ಬಸ್‌ಗೆ ಬಿಟ್ಟು ಬನ್ನಿ’’ ಎಂದು ಗರ್ಜಿಸಿದ.
ಕಾಸಿ ಜೈಲೊಳಗಿಂದಲೇ ಕೇಳಿದ ‘‘ಸಾರ್...ಕಳ್ಳನೋಟು ಸಾಗಿಸೋದಕ್ಕಿಂತ ಬೀಫ್ ಸಾಗಿಸೋದು ಅಪರಾಧವೇ?’’


‘‘ಕಳ್ಳನೋಟು ಸಾಗಿಸೋದರಿಂದ ಯಾರ ಭಾವನೆಗಳಿಗೂ ನೋವಾಗುವುದಿಲ್ಲ ಕಣ್ರೀ...’’ ಎನ್ನುತ್ತಾ ಇನ್ಸ್‌ಪೆಕ್ಟರ್ ಕಾಸಿಯ ವಿರುದ್ಧ ಎಫ್‌ಐಆರ್ ರೆಡಿ ಮಾಡತೊಡಗಿದ.


 

chelayya@gmail.com

Writer - *ಚೇಳಯ್ಯ

contributor

Editor - *ಚೇಳಯ್ಯ

contributor

Similar News