ಫ್ರಾನ್ಸ್ ರಾಷ್ಟ್ರೀಯತೆ ನೀಡಲು ಆನ್‌ಲೈನ್ ಮನವಿ
ಟೊರಾಂಟೊ, ಜ. 17: ನವೆಂಬರ್‌ನಲ್ಲಿ ಪ್ಯಾರಿಸ್ ಮೇಲೆ ಭಯೋತ್ಪಾದಕ ದಾಳಿ ನಡೆದಾಗ, ಬಾಟಕ್ಲಾನ್ ಸಂಗೀತ ಕಚೇರಿ ಸಭಾಂಗಣದಿಂದ ಜನರು ತಪ್ಪಿಸಿಕೊಳ್ಳಲು ನೆರವು ನೀಡಿದ್ದ ಅಲ್ಜೀರಿಯದ ವ್ಯಕ್ತಿಗೆ ಫ್ರಾನ್ಸ್ ರಾಷ್ಟ್ರೀಯತೆ ನೀಡಬೇಕು ಎಂಬ ಆನ್‌ಲೈನ್ ಮನವಿಗೆ ಶನಿವಾರದ ವೇಳೆಗೆ 30,000ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.
35 ವರ್ಷದ ಈ ವ್ಯಕ್ತಿ ಸಂಗೀತ ಕಚೇರಿ ಸಭಾಂಗಣದ ಕಾವಲುಗಾರನಾಗಿದ್ದಾರೆ. ಬಂದೂಕುಧಾರಿಗಳು ಸಂಗೀತ ಕಚೇರಿಗೆ ಹೋಗುವವರ ಮೇಲೆ ಗುಂಡು ಹಾರಿಸುವಲ್ಲಿ ನಿರತರಾಗಿದ್ದಾಗ, ಈ ವ್ಯಕ್ತಿ ಸಭಾಂಗಣದ ಒಳಗೆ ಎರಡು ಸಲ ಹೋಗಿ ಆಘಾತಗೊಂಡ ಜನರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರು. ತನ್ನ ಗುರುತನ್ನು ಬಹಿರಂಗಪಡಿಸಬಾರದು ಎಂದು ಅವರು ಹೇಳಿದ್ದಾರೆ.
ಸಂಗೀತ ಕಚೇರಿ ಸಭಾಂಗಣದಲ್ಲಿ ನಡೆದ ದಾಳಿಯಲ್ಲಿ 90 ಮಂದಿ ಮೃತರಾಗಿದ್ದಾರೆ. ಅದೇ ದಿನ ಇತರೆಡೆಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇನ್ನೂ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
‘‘ಅವರು ಹೊರಗಿನವರಾಗಿರುವುದರಿಂದ, ಬಂದೂಕು ಸದ್ದು ಕೇಳಿದ ಕೂಡಲೇ ಅವರು ಓಡಿ ತಪ್ಪಿಸಿಕೊಳ್ಳಬಹುದಾಗಿತ್ತು’’ ಎಂದು ‘ಚೇಂಜ್.ಆರ್ಗ್’ನಲ್ಲಿ ಪ್ರಸಾರಗೊಳ್ಳುತ್ತಿರುವ ಮನವಿ ಹೇಳುತ್ತದೆ. ‘‘ಆದರೆ, ಅವರು ಭಯೋತ್ಪಾದಕ ದಾಳಿಯ ಬಗ್ಗೆ ಒಳಗಿನ ಸಭಿಕರಿಗೆ ಮಾಹಿತಿ ನೀಡಲು ಸಭಾಂಗಣದ ಒಳಗೆ ಹೋದರು ಹಾಗೂ ಸಭಿಕರು ತುರ್ತು ದ್ವಾರಗಳಲ್ಲಿ ತಪ್ಪಿಸಿಕೊಳ್ಳಲು ನೆರವಾದರು’’ ಎಂದಿದೆ.
ಫ್ರಾನ್ಸ್‌ನ ರೆಪ್ರೆಸೆಂಟೇಟಿವ್ ಕೌನ್ಸಿಲ್ ಆಫ್ ಬ್ಲಾಕ್ ಅಸೋಸಿಯೇಶನ್ಸ್‌ನ ವಕ್ತಾರೆ ತಿಯಾಬಾ ಬ್ರೂನಿ ಆನ್‌ಲೈನ್ ಮನವಿ ಆರಂಭಿಸಿದ್ದಾರೆ.